ಜಾಗತಿಕ ಆರ್ಥಿಕ ಅನಿಶ್ಚಿತತೆ, ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಉದ್ವಿಗ್ನತೆ ಹಾಗೂ ಅಂತರರಾಷ್ಟ್ರೀಯ ವ್ಯಾಪಾರದ ಮೇಲಿನ ಒತ್ತಡಗಳ ನಡುವೆಯೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಪ್ರಮುಖ ನೀತಿ ಬಡ್ಡಿದರವಾದ ರೆಪೊ ದರವನ್ನು ಶೇ. 5.25ರಲ್ಲೇ ಯಥಾಸ್ಥಿತಿಯಲ್ಲಿ ಮುಂದುವರಿಸಲು ತೀರ್ಮಾನಿಸಿದೆ. ಬುಧವಾರ ನಡೆದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಎಲ್ಲಾ ಸದಸ್ಯರು ಏಕಮತದಿಂದ ಈ ನಿರ್ಧಾರ ಕೈಗೊಂಡಿದ್ದು, ಹಣಕಾಸು ನೀತಿಯ ತಟಸ್ಥ ನಿಲುವನ್ನು ಮುಂದುವರಿಸಲು ಒಪ್ಪಿಗೆ ನೀಡಿದ್ದಾರೆ.
ನಿರ್ಧಾರವನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ಜಾಗತಿಕ ಮಟ್ಟದಲ್ಲಿ ಹಲವು ಸವಾಲುಗಳು ಎದುರಾಗಿದ್ದರೂ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಸದೃಢವಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇಶೀಯ ಬೇಡಿಕೆ ನಿರಂತರವಾಗಿ ಬಲವಾಗಿರುವುದರಿಂದ ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಅವರು ತಿಳಿಸಿದರು.
ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷವು ಸಮುದ್ರ ಮಾರ್ಗದ ವ್ಯಾಪಾರ ಮತ್ತು ಜಾಗತಿಕ ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರಿದ್ದು, ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ಹಣದುಬ್ಬರದ ಮೇಲೆ ಒತ್ತಡ ಹೆಚ್ಚಾಗಿದೆ. ಆದರೆ ಇತ್ತೀಚಿನ ಹಣದುಬ್ಬರದ ಏರಿಕೆ ಎಲ್ಲ ವಸ್ತುಗಳ ಬೆಲೆ ಏರಿಕೆಯನ್ನು ಸೂಚಿಸುವುದಿಲ್ಲ ಎಂದು ಗವರ್ನರ್ ಸ್ಪಷ್ಟಪಡಿಸಿದರು. ಮುಖ್ಯವಾಗಿ ಆಹಾರ ಪದಾರ್ಥಗಳು ಮತ್ತು ಇಂಧನದ ಬೆಲೆ ಏರಿಕೆಯಿಂದಲೇ ಹಣದುಬ್ಬರ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ಕೃಷಿ ಕ್ಷೇತ್ರದ ಕುರಿತು ಆತಂಕ ವ್ಯಕ್ತಪಡಿಸಿದ ಮಲ್ಹೋತ್ರಾ, ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದ ಮುಂಗಾರು ಮಳೆಯಾಗಿರುವುದು ಹಾಗೂ ಸೂಪರ್ ಎಲ್ ನಿನೋ ಪರಿಣಾಮದ ಸಾಧ್ಯತೆಯಿಂದ ಕೃಷಿ ಉತ್ಪಾದನೆ ಮೇಲೆ ಅನಿಶ್ಚಿತತೆ ಮುಂದುವರಿದಿದೆ ಎಂದು ಹೇಳಿದರು. ಆದಾಗ್ಯೂ, ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಆರ್‌ಬಿಐ ವಿಶ್ವಾಸ ವ್ಯಕ್ತಪಡಿಸಿದ್ದು, ಪ್ರಸಕ್ತ ಹಣಕಾಸು ವರ್ಷದ ಒಟ್ಟು ಜಿಡಿಪಿ ಬೆಳವಣಿಗೆಯ ಅಂದಾಜನ್ನು ಶೇ. 6.6ರಿಂದ ಶೇ. 6.7ಕ್ಕೆ ಹೆಚ್ಚಿಸಿದೆ.
ಆರ್‌ಬಿಐ ಅಂದಾಜಿನ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ. 7, ಎರಡನೇ ತ್ರೈಮಾಸಿಕದಲ್ಲಿ ಶೇ. 6.4, ಮೂರನೇ ತ್ರೈಮಾಸಿಕದಲ್ಲಿ ಶೇ. 6.5 ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 6.8ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಹಣದುಬ್ಬರದ ವಿಚಾರದಲ್ಲಿಯೂ ಸ್ವಲ್ಪ ನಿರಾಳತೆ ವ್ಯಕ್ತಪಡಿಸಿರುವ ಆರ್‌ಬಿಐ, ಪ್ರಸಕ್ತ ಹಣಕಾಸು ವರ್ಷದ ಚಿಲ್ಲರೆ ಹಣದುಬ್ಬರದ ಅಂದಾಜನ್ನು ಶೇ. 5.1ರಿಂದ ಶೇ. 5ಕ್ಕೆ ಇಳಿಕೆ ಮಾಡಿದೆ. ಆಹಾರ ಮತ್ತು ಇಂಧನವನ್ನು ಹೊರತುಪಡಿಸಿದ ಮೂಲ (ಕೋರ್) ಹಣದುಬ್ಬರವು ಸದ್ಯ ಶೇ. 3.5ರಷ್ಟಿದ್ದು, ಅದು ನಿಯಂತ್ರಣದಲ್ಲಿದೆ ಎಂದು ಗವರ್ನರ್ ತಿಳಿಸಿದ್ದಾರೆ.





