ನವದೆಹಲಿ: ದೇಶದ ಜನತೆಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ತೈಲ ದರ ಶಾಕ್ ನೀಡಿದೆ. ಸೋಮವಾರ (ಮೇ 25) ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಲಾಗಿದ್ದು, ವಾಹನ ಸವಾರರ ಆತಂಕ ಹೆಚ್ಚಿಸಿದೆ. ಕಳೆದ ಎರಡು ವಾರಗಳಲ್ಲೇ ನಾಲ್ಕನೇ ಬಾರಿ ಇಂಧನ ದರ ಏರಿಕೆಯಾಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 2.61 ರೂ. ಹಾಗೂ ಡೀಸೆಲ್ ದರವನ್ನು 2.71 ರೂ. ಹೆಚ್ಚಳ ಮಾಡಿವೆ. ಈ ಹೊಸ ದರ ಅನ್ವಯ ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 110.89 ರೂ. ತಲುಪಿದರೆ, ಡೀಸೆಲ್ ಬೆಲೆ 98.80 ರೂ. ಆಗಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಭಾರತದಲ್ಲೂ ಇಂಧನ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ. ವಿಶೇಷವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮುಂದುವರಿದಿರುವ ಸಂಘರ್ಷ ಮತ್ತು ಅಶಾಂತಿಯ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಗಗನಕ್ಕೇರಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯ ಮೇಲೂ ಬಿದ್ದಿದೆ.
ಮೇ 15ರಂದು ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏಕಾಏಕಿ 3 ರೂ. ಏರಿಕೆ ಮಾಡಲಾಗಿತ್ತು. ಬಳಿಕ ಮೇ 23ರಂದು ಪೆಟ್ರೋಲ್ ದರವನ್ನು 87 ಪೈಸೆ ಹಾಗೂ ಡೀಸೆಲ್ ದರವನ್ನು 91 ಪೈಸೆ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ದರ ಏರಿಕೆ ಮಾಡಿದೆ.
ಪ್ರತಿ ದಿನವೂ ವಾಹನ ಬಳಸುವ ಮಧ್ಯಮ ವರ್ಗದ ಜನರು ಹಾಗೂ ವ್ಯಾಪಾರ ವಲಯದವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. “ಇನ್ನೂ ಎಷ್ಟು ಬಾರಿ ದರ ಏರಿಕೆ ಮಾಡುತ್ತಾರೆ? ದಿನದಿಂದ ದಿನಕ್ಕೆ ಬದುಕು ಸಾಗಿಸುವುದೇ ಕಷ್ಟವಾಗುತ್ತಿದೆ” ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.
ಇಂಧನ ದರ ಏರಿಕೆಯ ಪರಿಣಾಮ ಕೇವಲ ವಾಹನ ಸವಾರರ ಮೇಲಷ್ಟೇ ಅಲ್ಲ, ಅಗತ್ಯ ವಸ್ತುಗಳ ಬೆಲೆಯ ಮೇಲೂ ಬೀಳುವ ಸಾಧ್ಯತೆ ಇದೆ. ಸಾರಿಗೆ ವೆಚ್ಚ ಹೆಚ್ಚಾದರೆ ತರಕಾರಿ, ಹಣ್ಣು, ದಿನಸಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಬಹುದು.
ಇದೀಗ ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಜನರಿಗೆ ಬೆಲೆ ಏರಿಕೆಯ ಹೊರೆ ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




