ನವದೆಹಲಿ: ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಮತ್ತು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗುತ್ತಿದೆ ಎಂಬ ಆರೋಪಗಳ ನಡುವೆ, ಮುಂದಿನ ಹಣಕಾಸು ವರ್ಷದಿಂದ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು ಶೇಕಡಾ 1ರಷ್ಟು ಕಡಿತಗೊಳಿಸುವ ಬಗ್ಗೆ ಮೋದಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ವರದಿಯಾಗಿದೆ. ಈ ತೀರ್ಮಾನ ಜಾರಿಗೆ ಬಂದರೆ, ರಾಜ್ಯಗಳಿಗೆ ಸಿಗುವ ತೆರಿಗೆ ಪಾಲು ಸುಮಾರು 35,000 ಕೋಟಿ ರೂ. ಕಡಿಮೆಯಾಗುವ ಸಾಧ್ಯತೆ ಇದೆ.
ರಾಜ್ಯಗಳಿಗೆ ತೆರಿಗೆ ಪಾಲಿನಲ್ಲಿ ಶೇಕಡಾವಾರು ಕಡಿತ
ಪ್ರಸ್ತುತ, ರಾಜ್ಯಗಳಿಗೆ ಕೇಂದ್ರೀಯ ತೆರಿಗೆಯಲ್ಲಿ ಶೇಕಡಾ 41ರಷ್ಟು ಪಾಲು ನೀಡಲಾಗುತ್ತಿದೆ. ಈ ಸಂಖ್ಯೆಯನ್ನು ಶೇಕಡಾ 40ಕ್ಕೆ ಇಳಿಸುವ ಆಲೋಚನೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆದಿದೆ. ಇದಲ್ಲದೆ, ರಾಜಕೀಯ ಲಾಭಕ್ಕಾಗಿ ಉಚಿತ ಸೌಲಭ್ಯಗಳನ್ನು ಘೋಷಿಸುವ ರಾಜ್ಯಗಳಿಗೆ ನಿರ್ಬಂಧ ವಿಧಿಸಲು ಕೇಂದ್ರವು ಹೊಸ ತಂತ್ರವನ್ನು ಅಳವಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಹಣಕಾಸು ಆಯೋಗದ ಶಿಫಾರಸು ಮತ್ತು ಜಾರಿಗೊಳಿಸುವ ಸಂಭವ
ಈ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಮಾರ್ಚ್ ಅಂತ್ಯದ ವೇಳೆಗೆ ಅನುಮೋದನೆ ನೀಡುವ ನಿರೀಕ್ಷೆ ಇದೆ. ಇದನ್ನು ನಂತರ ಹಣಕಾಸು ಆಯೋಗಕ್ಕೆ ಕಳುಹಿಸಲಾಗುವುದು. ಅರವಿಂದ್ ಪಾನಗಾಢಿಯಾ ನೇತೃತ್ವದ ಈ ಆಯೋಗವು ಅಕ್ಟೋಬರ್ 31ರೊಳಗೆ ಶಿಫಾರಸು ಸಲ್ಲಿಸಲಿದೆ. ಶಿಫಾರಸು ಅಂಗಳ ಸೇರಿದರೆ, 2026-27ರ ಹಣಕಾಸು ವರ್ಷದಿಂದಲೇ ಈ ಕ್ರಮ ಜಾರಿಗೆ ಬರಬಹುದು. ಈ ತೀರ್ಮಾನದಿಂದಾಗಿ ರಾಜ್ಯ ಮತ್ತು ಕೇಂದ್ರದ ನಡುವಿನ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆ ಇದೆ.
ಕಡಿತಕ್ಕೆ ಕಾರಣವೇನು?
1980ರಲ್ಲಿ ರಾಜ್ಯಗಳಿಗೆ ತೆರಿಗೆ ಪಾಲು ಕೇವಲ ಶೇಕಡಾ 20ರಷ್ಟಿತ್ತು, ಆದರೆ ಇದೀಗ ಶೇಕಡಾ 41ಕ್ಕೆ ತಲುಪಿದೆ. ಆದರೆ, ಆರ್ಥಿಕ ಬೆಳವಣಿಗೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವೆಚ್ಚ ಮಾತ್ರ ಹೆಚ್ಚಾಗುತ್ತಿದೆ. ಈ ಕಾರಣದಿಂದ ರಾಜ್ಯಗಳ ಪಾಲು ಕಡಿತಗೊಳಿಸುವ ಯೋಜನೆ ರೂಪಿಸಲಾಗಿದೆ. ಸಾಮಾನ್ಯವಾಗಿ ರಾಜ್ಯ ಸರ್ಕಾರಗಳು ಆರೋಗ್ಯ, ಶಿಕ್ಷಣ ಮತ್ತು ಸಮಾಜ ಕಲ್ಯಾಣದ ಮೇಲೆ ಶೇಕಡಾ 60ರಷ್ಟು ವೆಚ್ಚ ಮಾಡುತ್ತವೆ. ಆದರೆ, ಕೇಂದ್ರ ಸರ್ಕಾರ ಭೌತಿಕ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಜಿಎಸ್‌ಟಿ ಜಾರಿಯಾದ ಬಳಿಕ, ರಾಜ್ಯಗಳಿಗೆ ಸ್ವಂತ ಆದಾಯ ಹೆಚ್ಚಿಸುವ ಅವಕಾಶಗಳು ಕಡಿಮೆಯಾಗಿವೆ ಎಂಬುದೂ ಪ್ರಮುಖ ಕಾರಣವಾಗಿದೆ.
ಉಚಿತ ಸೌಲಭ್ಯಗಳಿಗೆ ನಿಯಂತ್ರಣ?
ರಾಜ್ಯ ಸರ್ಕಾರಗಳು ಗೃಹಲಕ್ಷ್ಮಿ ಯೋಜನೆ, ಸಾಲಮನ್ನಾ, ಹಾಗೂ ಇತರ ಉಚಿತ ಸೌಲಭ್ಯಗಳ ಘೋಷಣೆಯನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿವೆ ಎಂಬ ಆರೋಪಗಳಿವೆ. ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ತಂತ್ರಗಳನ್ನು ಅಳವಡಿಸಲಿದೆ. ತೆರಿಗೆ ಆದಾಯ ಕಡಿಮೆಯಾದಾಗ, ನಿಗದಿತ ನಿಬಂಧನೆಗಳನ್ನು ಪೂರೈಸಿದರೆ ಮಾತ್ರ ಕೇಂದ್ರದಿಂದ ಅನುದಾನ ನೀಡುವ ಯೋಚನೆ ಮಾಡಲಾಗಿದೆ. ಇದು ಜಾರಿಗೆ ಬಂದರೆ, ರಾಜ್ಯ ಸರ್ಕಾರಗಳ ಸ್ವಾಯತ್ತತೆ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.