ಬಿಗ್‌ಬಾಸ್ ಕನ್ನಡ ಸೀಸನ್ 12 ಈಗ ರಣರಂಗವಾಗಿದಂತಿದೆ. ನಾಮಿನೇಷನ್ ಟಾಸ್ಕ್ “ಬಟ್ಟೆ ಕಲ್ಲಿಗೆ ಹೊಡೆದು ಕೊಳೆ ತೆಗೆ” ಎಂಬ ಕಾನ್ಸೆಪ್ಟ್‌ನಲ್ಲಿ ನಡೆಯುತ್ತಿದ್ದು, ಮನೆಯೊಳಗಿನ ಗುಂಪುಗಳು ಒಡೆದು, ಹೊಸ ಹೊಸ ಶತ್ರುತ್ವಗಳು ಹುಟ್ಟಿಕೊಳ್ಳುತ್ತಿವೆ. ಈ ಬಾರಿಯ ನಾಮಿನೇಷನ್‌ನಲ್ಲಿ ಅತೀ ದೊಡ್ಡ ಸಂಚಲನ ಎಂದರೆ ಕಿಚ್ಚ ಸುದೀಪ್ ಅವರೇ “ವಂಶದ ಕುಡಿ” ಎಂದು ಕರೆದಿದ್ದ ರಕ್ಷಿತಾ ಶೆಟ್ಟಿ, ತಮ್ಮ ಅತ್ಯಂತ ಆಪ್ತ ಗೆಳೆಯ ಗಿಲ್ಲಿ ನಟ ಅವರನ್ನೇ ನೇರವಾಗಿ ನಾಮಿನೇಟ್ ಮಾಡಿದ್ದಾರೆ.
ಇಷ್ಟು ದಿನಗಳವರೆಗೂ ಗಿಲ್ಲಿ ಮತ್ತು ರಕ್ಷಿತಾ ಒಬ್ಬರಿಗೊಬ್ಬರು ಬೆಂಬಲವಾಗಿ ಕಾಣಿಸಿಕೊಳ್ಳುತ್ತಿದ್ದರು. ಸುದೀಪ್ ಅವರು ರಕ್ಷಿತಾ ಅವರ ಧೈರ್ಯ ಮತ್ತು ಸ್ಟ್ಯಾಂಡ್ ತೆಗೆದುಕೊಳ್ಳುವ ಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿ “ವಂಶದ ಕುಡಿ” ಎಂದು ಟೈಟಲ್ ಕೊಟ್ಟಿದ್ದರು. ಆದರೆ ಈ ವಾರದ ನಾಮಿನೇಷನ್‌ನಲ್ಲಿ ಎಲ್ಲವೂ ತಲಕೆಳಗಾಗಿದೆ.
ರಕ್ಷಿತಾ ಅವರು ಗಿಲ್ಲಿ ಅವರನ್ನು ನಾಮಿನೇಟ್ ಮಾಡುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. “ನಾವು ಯೂಟ್ಯೂಬರ್ ಆಗಿ ದುಡಿದೇ ಬಿಗ್‌ಬಾಸ್ ಮನೆಗೆ ಬಂದಿದ್ದೀವಿ. ನಮ್ಮ ವೃತ್ತಿಯೇ ನಮ್ಮನ್ನು ಇಲ್ಲಿಗೆ ಕರೆತಂದಿದೆ. ಯಾವ ಕೆಲಸವೂ ಚಿಕ್ಕದಲ್ಲ, ದೊಡ್ಡದಲ್ಲ. ಎಲ್ಲ ಕೆಲಸಗಳಿಗೂ ಗೌರವ ಇರಬೇಕು. ಆದರೆ ನೀವು ಪ್ರೊಫೆಷನಲ್‌ಗಳ ಬಗ್ಗೆ ಕೀಳಾಗಿ ಮಾತನಾಡಿದ್ದೀರಿ. ಇಂತಹ ಮಾತುಗಳ ನಂತರ ನಿಮ್ಮ ಮೇಲೆ ನಂಬಿಕೆ ಇಡುವುದು ಹೇಗೆ?” ಎಂದು ರಕ್ಷಿತಾ ಗರಂ ಆಗಿ ಪ್ರಶ್ನಿಸಿದರು.
ಗಿಲ್ಲಿ ಅವರು ಯಾವ ಸಂದರ್ಭದಲ್ಲಿ “ಚಿಕ್ಕ ಕೆಲಸ” ಎಂದು ಹೇಳಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿ ಜಾಹ್ನವಿ ಕಾರಣ ಕೊಟ್ಟಿದ್ದು ಹೀಗೆ, ಮೊನ್ನೆ `ಇವರಿಗೆ ನಿರೂಪಣೆ ಮಾಡಬೇಕಂತೆ. ಸವಿರುಚಿ ನಿರೂಪಣೆ ಇವರಿಗೆ ಸಣ್ಣ ಕಾರ್ಯಕ್ರಮವಂತೆ. ಇವನಿಗೆ ಸೀದಾ ಅನುಬಂಧ ಆಂಕರಿಂಗ್ ಕೊಡಬೇಕು ಅಂತೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಇನ್ನೊಂದೆಡೆ ಗುಂಪಿನೊಳಗೇ ಬಿರುಕು ದೊಡ್ಡದಾಗುತ್ತಿದೆ. ಧ್ರುವಂತ್ ಅವರು ನೇರವಾಗಿ ಅಶ್ವಿನಿ ಗೌಡ ಅವರನ್ನು ಟಾರ್ಗೆಟ್ ಮಾಡಿ, “ಈ ಮನೆಯಲ್ಲಿ ಅತ್ಯಂತ ಫೇಕ್ ಮುಖವಾಡ ಹಾಕಿಕೊಂಡಿರುವವರು ಅಶ್ವಿನಿ. ಜಾಹ್ನವಿ ಮತ್ತು ಅಶ್ವಿನಿ ಈ ಮನೆಯನ್ನು ಅತ್ಯಂತ ಮಿಸ್‌ಲೀಡ್ ಮಾಡಿದ್ದಾರೆ” ಎಂದು ಆರೋಪಿಸಿದರು.
ಇದಕ್ಕೆ ಅಶ್ವಿನಿ ಕೂಡ ಸುಮ್ಮನಿರಲಿಲ್ಲ. “ಧ್ರುವಂತ್ ನೀವೇ ಸೂಪರ್ ಫೇಕ್! ನನ್ನ ಜಾಹ್ನವಿಯನ್ನು ನಿಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಎಷ್ಟು ಪ್ರಯತ್ನ ಪಟ್ಟಿದ್ದೀರಿ, ಆದರೆ ಆಗಲಿಲ್ಲ. ನಾವು ಮಲ್ಲಮ್ಮನ ಥರ ಅಲ್ಲ, ನಿಮ್ಮ ತೆಕ್ಕೆಗೆ ಬೀಳೋಕೆ!” ಎಂದು ಅಬ್ಬರಿಸಿದರು. “ನನಗೆ ತಾಕತ್ತು ಎಷ್ಟು ಇರಬೇಕೋ ಅಷ್ಟು ಇದೆ, ನಿಮಗೆ ಇಷ್ಟು ಫೇಕ್‌ನೆಸ್ಸ್ ಇದ್ದರೂ ಸಾಲದಾ?” ಎಂದು ಕೂಗಾಡಿದರು.
ಪ್ರೋಮೋ ಬಿಡುಗಡೆಯಾದ ಕೂಡಲೇ ವೀಕ್ಷಕರ ನಡುವೆ ಎರಡು ಬಣಗಳು ರಚನೆಯಾಗಿವೆ. ಒಂದು ತಂಡ ಗಿಲ್ಲಿ ಅವರು ವೃತ್ತಿಯ ಬಗ್ಗೆ ಕೀಳಾಗಿ ಮಾತನಾಡಿದ್ದರೆ ಖಂಡಿತ ತಪ್ಪು ಎಂದಿದೆ. ಮತ್ತೊಂದು ತಂಡ ರಕ್ಷಿತಾ ಅವರಿಗೆ ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿದ ನಂತರ ಅಹಂಕಾರ ತಲೆಗೇರಿದೆ, ಆದ್ದರಿಂದಲೇ ಆಪ್ತ ಗೆಳೆಯನನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.





