ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಈಗ ಗಿಲ್ಲಿ ನಟ (Gilli Nata) ಮತ್ತು ಕಾವ್ಯಾ ಶೈವ (Kavya Shaiva) ಅವರ ಆಪ್ತ ಗೆಳೆತನವೇ ಮುಖ್ಯ ಚರ್ಚೆಯ ವಿಷಯವಾಗಿದೆ. ಫ್ಯಾಮಿಲಿ ವೀಕ್ ಸಂದರ್ಭದಲ್ಲಿ ಕಾವ್ಯಾ ಅವರ ಪೋಷಕರು ಗಿಲ್ಲಿಗೆ ಬೆಳ್ಳಿಯ ಬ್ರೇಸ್ಲೆಟ್ ಗಿಫ್ಟ್ ನೀಡಿದ್ದು, ಇದು ಮನೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ನಲ್ಲಿ ಈ ಬ್ರೇಸ್ಲೆಟ್ ಬಗ್ಗೆ ವಿಶೇಷ ಚರ್ಚೆ ನಡೆದಿದ್ದು, ಕಿಚ್ಚ ಸುದೀಪ್ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ಸ್ಪಂದಿಸಿದ್ದಾರೆ.. ಆದರೆ ಇದೇ ವಿಚಾರ ಇದೀಗ ಮತ್ತೊಬ್ಬ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಅಸಮಾಧಾನಕ್ಕೆ ಕಾರಣವಾಗುತ್ತಿದೆ.
ಫ್ಯಾಮಿಲಿ ವೀಕ್ನಲ್ಲಿ ಶುರುವಾದ ಚರ್ಚೆ
ಫ್ಯಾಮಿಲಿ ವೀಕ್ ವೇಳೆ ಕಾವ್ಯ ಅವರ ತಂದೆ–ತಾಯಿ ಗಿಲ್ಲಿಗೆ ಬೆಳ್ಳಿಯ ಬ್ರಾಸ್ಲೈಟ್ (bracelet) ಹಾಕಿದ್ದು ಸಾಕಷ್ಟು ಚರ್ಚೆಗೆ ಕಾರಣವಾಯಿತು. ಗಿಲ್ಲಿ ಸದಾ ರಘು ಅವರ ಬ್ರಾಸ್ಲೈಟ್ ಧರಿಸುತ್ತಿದ್ದರು. ಇದೀಗ ಕಾವ್ಯ ಕುಟುಂಬದಿಂದಲೇ ಗಿಫ್ಟ್ ಬಂದಿರುವುದು ವಿಶೇಷವಾಗಿ ಗಮನ ಸೆಳೆಯಿತು.
“ಆ ಕ್ಷಣದಲ್ಲಿ ನಿಮಗೆ ಏನು ಅನ್ನಿಸ್ತು?” ಎಂದು ಸುದೀಪ್ ಗಿಲ್ಲಿಯನ್ನು ಪ್ರಶ್ನಿಸಿದರು. ಅದಕ್ಕೆ ಗಿಲ್ಲಿ, “ನಮ್ಮ ಮನೆಯಲ್ಲಿ ಬ್ರಾಸ್ಲೈಟ್ ಹಾಕಿದ್ರೆ ನಿಶ್ಚಿತಾರ್ಥ ಆಗೋದು ಅನ್ನೋ ನಂಬಿಕೆ ಇದೆ” ಎಂದು ನಗುತ್ತಲೇ ಉತ್ತರಿಸಿದರು. ಇದಕ್ಕೆ ಕಾವ್ಯ ಶೈವ ಕೂಡ ಪ್ರತಿಕ್ರಿಯಿಸಿ, “ನಮ್ಮ ಕಡೆ ರಿಂಗ್ ಕೊಟ್ಟ್ರೆ ನಿಶ್ಚಿತಾರ್ಥ” ಎಂದರು.
ರಕ್ಷಿತಾಳ ಪ್ರತಿಕ್ರಿಯೆ ಮತ್ತು ಕಿಚ್ಚನ ಟಾಂಗ್
ಈ ಚರ್ಚೆಯ ನಡುವೆ ರಕ್ಷಿತಾ ಶೆಟ್ಟಿ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು. “ಅವರು ಮೊದಲು ಗಿಲ್ಲಿ, ಗಿಲ್ಲಿ ಅಂತ ಕರೆಯ್ತಾರೆ. ನಂತರ ಗಿಲ್ಲಿ ಪಕ್ಕ ಹೋಗಿ ಕೂತ್ಕೊಳ್ಳುತ್ತಾರೆ” ಎಂದು ವ್ಯಂಗ್ಯವಾಡಿದರು. ಈ ಮಾತಿಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ತಮ್ಮದೇ ಶೈಲಿಯಲ್ಲಿ ಮಾತು ಹೇಳಿದರು.
“ಇದೆಲ್ಲ ಕಾವ್ಯ ಎಂಜಾಯ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ನಿಮಗಂತೂ ಸ್ವಲ್ಪ ಉರಿಯತ್ತೆ. ಕಾವ್ಯ ಅವರನ್ನು ಹೇಗಾದರೂ ಹೊರಗೆ ಕಳಿಸಿದ್ರೆ, ನೀವು ಅವರ ಪಕ್ಕ ಕೂತ್ಕೊಳ್ಳಬಹುದು” ಎಂದು ಹೇಳಿದರು.
ಗಿಲ್ಲಿ ಮತ್ತು ಕಾವ್ಯ ನಡುವಿನ ಸ್ನೇಹ ಇತ್ತೀಚೆಗೆ ಟಾಸ್ಕ್ಗಳಲ್ಲಿಯೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಕಳೆದ ವಾರದ ಟಾಸ್ಕ್ನಲ್ಲಿ ಕಾವ್ಯ ಸೋತಿದ್ದಾಳೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದ್ದರೂ, ಗಿಲ್ಲಿ ಮಾತ್ರ “ಕಾವ್ಯ ಗೆದ್ದಿದ್ದಾಳೆ” ಎಂದು ವಾದಿಸಿದರು. ಇದರಿಂದ ಮನೆ ಒಳಗೆ ‘ಪಕ್ಷಪಾತ’ ಎಂಬ ಮಾತುಗಳು ಕೇಳಿಬಂದಿತ್ತು.
ನಾಮಿನೇಷನ್ ಪ್ರಕ್ರಿಯೆಯಲ್ಲೂ ಗಿಲ್ಲಿ ಕಾವ್ಯ ಪರವಾಗಿ ನಡೆದುಕೊಂಡರು ಎಂಬ ಆರೋಪಗಳು ಕೇಳಿ ಬಂದವು. ಕಾವ್ಯ ಅವರನ್ನು ನಾಮಿನೇಟ್ ಮಾಡಲು ಕೇಳಿದಾಗ, ಗಿಲ್ಲಿಗೆ ಒಂದು ಸ್ಪಷ್ಟ ಕಾರಣವೂ ಹೇಳಲಾಗದೆ ಹೋಗಿದ್ದು ಕಿಚ್ಚನಿಗೆ ಅಸಮಾಧಾನ ತಂದಿತು. “ಎರಡು ಕಾರಣ ಕೊಡು ನೋಡೋಣ” ಎಂದಾಗ ಗಿಲ್ಲಿ ಮೌನವಾಗಿದ್ದರು.
ಕಿಚ್ಚನ ಬೇಸರ
ಈ ಘಟನೆಯ ನಂತರ ಸುದೀಪ್ ತಮ್ಮ ಬೇಸರವನ್ನು ಕೇವಲ ಗಿಲ್ಲಿಯ ಮೇಲಷ್ಟೇ ಅಲ್ಲ, ಇಡೀ ಮನೆಯ ಸದಸ್ಯರ ಮೇಲೂ ವ್ಯಕ್ತಪಡಿಸಿದರು. “ಫಿನಾಲೆಗೆ ಹತ್ತಿರವಾಗುತ್ತಿದ್ದರೂ, ನಾಮಿನೇಷನ್ ಅನ್ನು ಸಿಲ್ಲಿಯಾಗಿ ತೆಗೆದುಕೊಳ್ಳುತ್ತಿದ್ದಾರೆ” ಎಂದು ಕಿಡಿಕಾರಿದರು. ಇದು ಸ್ಪರ್ಧಿಗಳಿಗೆ ಎಚ್ಚರಿಕೆಯ ಘಂಟೆಯಂತಿತ್ತು.





