ಕನ್ನಡದ ಪುನೀತ್ ರಾಜ್‌ಕುಮಾರ್ ನಟನೆಯ ‘ಬಿಂದಾಸ್’ ಸಿನಿಮಾ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ಹನ್ಸಿಕಾ ಮೊಟ್ವಾನಿ , ಕಳೆದ ಕೆಲವು ಸಮಯದಿಂದ ಹರಡಿದ್ದ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಹನ್ಸಿಕಾ ಮತ್ತು ಅವರ ಪತಿ ಉದ್ಯಮಿ ಸೊಹೇಲ್ ಖತುರಿಯಾ ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ.
ಮುಂಬೈನ ಬಾಂದ್ರಾ ಉಪನಗರದಲ್ಲಿರುವ ಕೌಟುಂಬಿಕ ನ್ಯಾಯಾಲಯವು ಈ ದಂಪತಿಗೆ ವಿಚ್ಛೇದನ ನೀಡಿದೆ. ಈ ವಿಚಾರವನ್ನು ಹನ್ಸಿಕಾ ಅವರ ಪರ ವಕೀಲರಾದ ಅದ್ನಾನ್ ಶೇಖ್ ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ. ದಂಪತಿಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಒಪ್ಪಿಗೆಯ ಮೇರೆಗೆ (Mutual Consent) ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಈಗ ವಿಚ್ಛೇದನದ ತೀರ್ಪನ್ನು ಪ್ರಕಟಿಸಿದೆ.
ಜೀವನಾಂಶಕ್ಕೆ ನಿರಾಕರಣೆ
ಈ ವಿಚ್ಛೇದನ ಪ್ರಕರಣದಲ್ಲಿ ಅತ್ಯಂತ ಗಮನಾರ್ಹ ಸಂಗತಿಯೆಂದರೆ, ಹನ್ಸಿಕಾ ಮೊಟ್ವಾನಿ ಅವರು ಪತಿ ಸೊಹೇಲ್ ಅವರಿಂದ ಯಾವುದೇ ರೀತಿಯ ಜೀವನಾಂಶವನ್ನು (Alimony) ಪಡೆದಿಲ್ಲ. ಯಾವುದೇ ಹಣಕಾಸಿನ ಬೇಡಿಕೆ ಇಲ್ಲದೆ ಗೌರವಯುತವಾಗಿ ದಾಂಪತ್ಯ ಜೀವನದಿಂದ ಹೊರಬರಲು ನಟಿ ನಿರ್ಧರಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
ವಿವಾಹ ಮತ್ತು ವದಂತಿಗಳು:
2022ರ ಡಿಸೆಂಬರ್‌ನಲ್ಲಿ ಜೈಪುರದ ಪ್ರಸಿದ್ಧ ಮುಂಡೋಟಾ ಫೋರ್ಟ್ ಮತ್ತು ಅರಮನೆಯಲ್ಲಿ ಹನ್ಸಿಕಾ ಹಾಗೂ ಸೊಹೇಲ್ ಅವರ ವಿವಾಹ ಅತ್ಯಂತ ಅದ್ಧೂರಿಯಾಗಿ ನೆರವೇರಿತ್ತು. ಆದರೆ, ಮದುವೆಯಾಗಿ ಎರಡು ವರ್ಷ ಕಳೆಯುವ ಮೊದಲೇ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು ಎನ್ನಲಾಗಿದೆ. ಕಳೆದ ಆಗಸ್ಟ್ ತಿಂಗಳಿನಿಂದ ಇವರು ಬೇರ್ಪಟ್ಟಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದ ವರದಿಗಳ ಬೆನ್ನಲ್ಲೇ ಈಗ ಅಧಿಕೃತವಾಗಿ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿದೆ.
ವೃತ್ತಿಜೀವನ
ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಹನ್ಸಿಕಾ, ‘ಆಪ್ ಕಾ ಸುರೂರ್’ ಮೂಲಕ ನಾಯಕಿಯಾಗಿ ಮಿಂಚಿದರು. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಅವರು, ‘ಒರು ಕಲ್ ಒರು ಕನ್ನಡಿ’ ಮತ್ತು ‘ಮೈ ನೇಮ್ ಈಸ್ ಶ್ರುತಿ’ಯಂತಹ ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ವಿಚ್ಛೇದನದ ನಂತರ ಅವರು ಪೂರ್ಣ ಪ್ರಮಾಣದಲ್ಲಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಲು ಸಜ್ಜಾಗುತ್ತಿದ್ದಾರೆ.





