ಮಾಸ್ಕೋ/ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಸುದೀರ್ಘ ದೂರವಾಣಿ ಮಾತುಕತೆ ನಡೆಯಿತು. ಸುಮಾರು 90 ನಿಮಿಷಗಳ ಕಾಲ ನಡೆದ ಈ ಸಂಭಾಷಣೆಯಲ್ಲಿ ಉಕ್ರೇನ್ ಯುದ್ಧ ಮತ್ತು ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಅಮೆರಿಕ-ಇರಾನ್ ಉದ್ವಿಗ್ನತೆಯ ಬಗ್ಗೆ ಸಮಗ್ರ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಪುಟಿನ್ ಅವರು ಟ್ರಂಪ್ ಅವರಿಗೆ ಅತ್ಯಂತ ಅಪಾಯಕಾರಿ ಸನ್ನಿವೇಶದ ಎಚ್ಚರಿಕೆ ನೀಡಿದ್ದಾರೆ.
ಪುಟಿನ್ ಅವರ ಎಚ್ಚರಿಕೆಗಳು
ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಮತ್ತೆ ಯಾವುದೇ ರೀತಿಯ ದಾಳಿ ನಡೆಸಿದರೆ, ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಪುಟಿನ್ ಟ್ರಂಪ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. “ಪಶ್ಚಿಮ ಏಷ್ಯಾದಲ್ಲಿ ಶಾಂತಿ ಕಾಪಾಡದಿದ್ದರೆ, ಅದು ಇಡೀ ಪ್ರಪಂಚಕ್ಕೆ ಪರಿಣಾಮ ಬೀರುವ ಅಪಾಯಕಾರಿ ಹಂತಕ್ಕೆ ಕಾರಣವಾಗಬಹುದು” ಎಂದು ರಷ್ಯಾ ಅಧ್ಯಕ್ಷರು ಹೇಳಿದ್ದಾರೆ. ಇರಾನ್ ನ ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕದ ನಿಲುವಿನಿಂದ ಬಿಕ್ಕಟ್ಟು ಮತ್ತಷ್ಟು ಜಟಿಲವಾಗಿದ್ದು, ಯಾವುದೇ ಸೇನಾ ಕಾರ್ಯಾಚರಣೆಯ ಪ್ರಯತ್ನವನ್ನು ರಷ್ಯಾ ವಿರೋಧಿಸಲಿದೆ ಎಂಬ ಸೂಚನೆಯನ್ನು ಸಹ ಪುಟಿನ್ ನೀಡಿದರು.
ಉಕ್ರೇನ್ ಯುದ್ಧ ಮತ್ತು ಕದನ ವಿರಾಮದ ಸಾಧ್ಯತೆ
ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ ಪುಟಿನ್, ತಮ್ಮ ದೇಶವು ಯುದ್ಧದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದೆ ಎಂದು ಹೇಳಿಕೊಂಡಿದ್ದಾರೆ. ಕದನ ವಿರಾಮವನ್ನು ವಿಸ್ತರಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಅದರೊಂದಿಗೆ ಸಂಧಾನವನ್ನೂ ಮುಂದುವರಿಸಬೇಕು ಎಂದು ಅವರು ಹೇಳಿದರು. ಯುರೋಪ್ ನ ದೇಶಗಳು ಉಕ್ರೇನ್ ಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸಬೇಕು ಎಂಬ ಪುಟಿನ್ ಅವರ ವಾದಕ್ಕೆ ಟ್ರಂಪ್ ಸಹ ಒಪ್ಪಿಗೆ ವ್ಯಕ್ತಪಡಿಸಿದ್ದಾರೆ.
ಮೇ 9ರಂದು ಕದನ ವಿರಾಮ?
ರಷ್ಯಾದಲ್ಲಿ ಮೇ 9 ರಂದು “ದಿಗ್ವಿಜಯ ದಿನ” (Victory Day) ಆಚರಿಸಲಾಗುತ್ತದೆ. ಜರ್ಮನಿಯ ನಾಜಿ ಪಡೆಗಳ ವಿರುದ್ಧ ರಷ್ಯಾ ಗಳಿಸಿದ ವಿಜಯದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಮೇ 9 ರೊಳಗೆ ಉಕ್ರೇನ್ ಜೊತೆ ರಷ್ಯಾ ಒಂದು ಮಹತ್ವದ ಕದನ ವಿರಾಮ ಘೋಷಿಸಬಹುದು ಎಂಬ ಸೂಚನೆಗಳು ಕೇಳಿಬಂದಿವೆ. ಸಂಪೂರ್ಣ ಯುದ್ಧ ನಿಲುಗಡೆಯೇ ಆಗಬಹುದು ಅಥವಾ ತಾತ್ಕಾಲಿಕವಾಗಿ ಯುದ್ಧವನ್ನು ಸ್ಥಗಿತಗೊಳಿಸುವ ಒಪ್ಪಂದವೇ ಆಗಬಹುದು ಎಂದು ಮೂಲಗಳು ತಿಳಿಸಿವೆ.
ಟ್ರಂಪ್‌ರವರ ನಿಲುವು
ಪುಟಿನ್ ಅವರ ಹಲವಾರು ಅಂಶಗಳಿಗೆ ಟ್ರಂಪ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಉಕ್ರೇನ್ ಸಂಘರ್ಷದಲ್ಲಿ ಯುರೋಪ್ ನ ಪಾತ್ರದ ಕುರಿತು ಎರಡೂ ನಾಯಕರು ಒಮ್ಮತ ತೋರಿದ್ದಾರೆ. ಇರಾನ್ ವಿಚಾರದಲ್ಲಿ ಟ್ರಂಪ್ ತಮ್ಮ ಕಟ್ಟುನಿಟ್ಟಿನ ನಿಲುವನ್ನು ಪುನರುಚ್ಚರಿಸಿದ್ದಾರೆ. “ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ಕೈಬಿಡುವವರೆಗೂ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಸಾಧ್ಯವಿಲ್ಲ” ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.





