ಕರ್ನಾಟಕ ಸರ್ಕಾರವು ಮಕ್ಕಳ ಮಾನಸಿಕ ಆರೋಗ್ಯ, ಡಿಜಿಟಲ್ ವ್ಯಸನ ಮತ್ತು ಸಾಮಾಜಿಕ ಜಾಲತಾಣದ ದುರುಪಯೋಗದಿಂದ ಉಂಟಾಗುವ ಹಾನಿಯನ್ನು ತಡೆಯಲು ದೊಡ್ಡ ನಿರ್ಧಾರ ಕೈಗೊಂಡಿದೆ. 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ (Social Media) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ನಿರ್ಧಾರ ಘೋಷಿಸಲಾಗಿದೆ.
ಮೊಬೈಲ್ ಮತ್ತು ಡಿಜಿಟಲ್ ವ್ಯಸನದಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು, ಮಾನಸಿಕ ಒತ್ತಡ, ಆತ್ಮಹತ್ಯೆಯ ಭಾವನೆಗಳು, ಅಧ್ಯಯನದಲ್ಲಿ ಇಳಿಕೆ ಮತ್ತು ಸಾಮಾಜಿಕ ಸಂಬಂಧಗಳಲ್ಲಿ ಕುಸಿತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಸರ್ಕಾರ ವಿವರಿಸಿದೆ. ಆಪ್ರಾಪ್ತ ಮಕ್ಕಳನ್ನು ಸೋಶಿಯಲ್ ಮೀಡಿಯಾ ದುರುಪಯೋಗದಿಂದ ರಕ್ಷಿಸಿ, ಅವರ ಆರೋಗ್ಯ, ಶಿಕ್ಷಣ ಮತ್ತು ಭವಿಷ್ಯವನ್ನು ಕಾಪಾಡುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.
ಫಿನ್‌ಲ್ಯಾಂಡ್, ಬ್ರಿಟನ್ ಮತ್ತು ಆಸ್ಟ್ರೇಲಿಯಾ ದೇಶಗಳು ಈಗಾಗಲೇ ಇದೇ ರೀತಿಯ ನಿಷೇಧ ಅಥವಾ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿರುವುದು ಕರ್ನಾಟಕಕ್ಕೆ ಮಾದರಿಯಾಗಿದೆ. 2025-26ರ ಆರ್ಥಿಕ ಸಮೀಕ್ಷೆಯಲ್ಲೂ ವಯಸ್ಸಿನ ಆಧಾರಿತ ನಿರ್ಬಂಧದ ಶಿಫಾರಸು ಮಾಡಲಾಗಿತ್ತು. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ಸರ್ಕಾರದ ಉದ್ದೇಶ ಮತ್ತು ಜಾರಿ ಸರ್ಕಾರವು ಈ ನಿಷೇಧವನ್ನು ಕೇವಲ ಕಾನೂನು ಮೂಲಕವಲ್ಲದೆ, ‘ಡಿಜಿಟಲ್ ಡಿಟಾಕ್ಸಿಫಿಕೇಷನ್’ ಮತ್ತು ‘ಬಿಯಾಂಡ್ ಸ್ಕ್ರೀನ್ಸ್’ ಎಂಬ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನಪ್ರಿಯಗೊಳಿಸಲು ಯೋಜಿಸಿದೆ. ಶಾಲೆಗಳಲ್ಲಿ ಡಿಜಿಟಲ್ ಸಾಕ್ಷರತೆ, ಪೋಷಕರ ಜವಾಬ್ದಾರಿ ಮತ್ತು ಆರೋಗ್ಯ ತಜ್ಞರ ಸಲಹೆಗಳನ್ನು ಒಳಗೊಂಡಂತೆ ಸಮಗ್ರ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ನಿರ್ಧಾರವು ಭಾರತದಲ್ಲೇ ಮೊದಲ ಬಾರಿಗೆ ರಾಜ್ಯ ಮಟ್ಟದಲ್ಲಿ ಜಾರಿಗೊಳ್ಳುತ್ತಿರುವುದರಿಂದ ದೇಶಾದ್ಯಂತ ಗಮನ ಸೆಳೆದಿದೆ. ಮಕ್ಕಳ ಭವಿಷ್ಯಕ್ಕಾಗಿ ಡಿಜಿಟಲ್ ಜಗತ್ತಿನಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ತರುವ ಈ ಕ್ರಮವು ಭವಿಷ್ಯದಲ್ಲಿ ಇತರ ರಾಜ್ಯಗಳಿಗೂ ಮಾದರಿಯಾಗಬಹುದು ಎಂಬ ನಿರೀಕ್ಷೆ ಇದೆ.




