ಕನ್ನಡ ಚಿತ್ರರಂಗದ ಜನಪ್ರಿಯ ನಟ-ನಿರ್ದೇಶಕ ರಿಶಬ್ ಶೆಟ್ಟಿ ತಮ್ಮ ಮುದ್ದಿನ ಮಡದಿ ಪ್ರಗತಿ ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿದ ವಿಡಿಯೋ ಮತ್ತು ಬರಹ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
‘ಕಾಂತಾರ’ ಚಿತ್ರದ ಮೂಲಕ ದೇಶವ್ಯಾಪಿ ಖ್ಯಾತಿ ಗಳಿಸಿದ ರಿಷಬ್, ತಮ್ಮ ಜೀವನ ಸಂಗಾತಿಗೆ ಸಲ್ಲಿಸಿದ ಈ ಪ್ರೀತಿಯ ಶುಭಾಶಯದಲ್ಲಿ ಆಕೆಯ ಗುಣಗಳನ್ನು ಮನದಾಳದಿಂದ ಹೊಗಳಿದ್ದಾರೆ.
“ಪ್ರೀತಿ ಬೆಳೆಸುತ್ತಿರು.. ಕೀರ್ತಿ ಗಳಿಸುತ್ತಿರು..”
ರಿಷಬ್ ತಮ್ಮ ಪೋಸ್ಟ್‌ನಲ್ಲಿ, “ತನ್ನ ಸುಕೋಮಲತೆಯನ್ನೇ ಶಕ್ತಿಯಾಗಿಸಿಕೊಂಡ ನಿನ್ನೊಳಗಿರುವ ಅಪರೂಪದ ಛಲ, ಮಾತೃತ್ವದ ಮಮತೆ, ವೃತ್ತಿಯೆಡೆಗಿನ ಏಕಾಗ್ರತೆ ಹಾಗೂ ಏಕಕಾಲದಲ್ಲಿ ಎಲ್ಲವನ್ನೂ ನಿಭಾಯಿಸುವ ಕಾರ್ಯಕ್ಷಮತೆ ನನ್ನಲ್ಲಿ ಬೆರಗು ಮೂಡಿಸುತ್ತದೆ. ಅಷ್ಟೇ ಹೆಮ್ಮೆಯನ್ನೂ ತರುತ್ತದೆ. ಈ ಬಣ್ಣದ ಬದುಕಿನಲ್ಲಿ ಅಪರೂಪದ ಬೆಳದಿಂಗಳಿನಂತೆ ಸದಾ ಕಂಗೊಳಿಸುತ್ತಾ.. ಪ್ರೀತಿ ಬೆಳೆಸುತ್ತಿರು.. ಕೀರ್ತಿ ಗಳಿಸುತ್ತಿರು.. ಹ್ಯಾಪಿ ಬರ್ತ್‌ಡೇ ಪ್ರಗತಿ” ಎಂದು ಬರೆದುಕೊಂಡಿದ್ದಾರೆ.
ಈ ಸಾಲುಗಳು ಅಭಿಮಾನಿಗಳ ಮನಗೆದ್ದಿದ್ದು, ಕಾಮೆಂಟ್‌ಗಳಲ್ಲಿ ಶುಭಾಶಯಗಳ ಸುರಿಮಳೆಯೇ ಸುರಿಯುತ್ತಿದೆ.
ವೇಷಭೂಷಣ ವಿನ್ಯಾಸಕಿಯಿಂದ ಕುಟುಂಬದ ಧ್ರುವತಾರೆವರೆಗೆ
ಪ್ರಗತಿ ಶೆಟ್ಟಿ ಕೇವಲ ನಟನ ಪತ್ನಿಯಷ್ಟೇ ಅಲ್ಲ, ಅವರು ಪ್ರತಿಭಾವಂತ ವೇಷಭೂಷಣ ವಿನ್ಯಾಸಕಿ. ಹಲವು ಕನ್ನಡ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿರುವ ಅವರು, ರಿಷಬ್ ಅಭಿನಯದ ಸಿನಿಮಾಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. 2019ರ ‘ಬೆಲ್ ಬಾಟಮ್’ ಚಿತ್ರದಲ್ಲಿ ರಿಷಬ್ ಜೊತೆ ವೇಷಭೂಷಣ ವಿನ್ಯಾಸಕಿಯಾಗಿ ಕೆಲಸ ಮಾಡಿದ ಅವರು, ‘ಕಾಂತಾರ’ ಚಿತ್ರಕ್ಕೂ ಕೈಜೋಡಿಸಿದ್ದರು. ಸಿನಿಮಾದ ಪಾತ್ರಗಳಿಗೆ ತಕ್ಕಂತೆ ವೇಷಭೂಷಣ ರೂಪಿಸುವಲ್ಲಿ ಪ್ರಗತಿ ಅವರ ನೈಪುಣ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.‘
ಪ್ರೇಮಕಥೆಯಿಂದ ದಾಂಪತ್ಯದವರೆಗೆ
2017ರಲ್ಲಿ ರಿಷಬ್ ಮತ್ತು ಪ್ರಗತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಂದು ಚಿತ್ರ ಕಾರ್ಯಕ್ರಮದಲ್ಲಿ ಪರಿಚಯವಾದ ಇವರಿಬ್ಬರು ನಂತರ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹಿತರಾದರು. ಆ ಸ್ನೇಹ ಪ್ರೀತಿಯಾಗಿ ಬೆಳೆದಿದ್ದು, ಕೊನೆಗೆ ವಿವಾಹವಾದರು.
ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.. 2019ರಲ್ಲಿ ಜನಿಸಿದ ರಣವಿತ್ ಮತ್ತು 2022ರಲ್ಲಿ ಜನಿಸಿದ ರಾಧ್ಯಾ. ಕುಟುಂಬದ ಮುದ್ದಿನ ಕ್ಷಣಗಳನ್ನು ಪ್ರಗತಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಹಬ್ಬ-ಹರಿದಿನಗಳ ಸಂಭ್ರಮ, ಕುಟುಂಬದ ನೆನಪುಗಳು, ಸಿನಿಮಾ ಸೆಟ್‌ನ ಕ್ಷಣಗಳು ಇವೆಲ್ಲವೂ ಅವರ ಪೇಜ್‌ನಲ್ಲಿ ಕಾಣಿಸಿಕೊಳ್ಳುತ್ತವೆ.
‘ಜೈ ಹನುಮಾನ್’ ಶುಭಾರಂಭ
ಇನ್ನೊಂದೆಡೆ ರಿಷಬ್ ತಮ್ಮ ಮುಂದಿನ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ‘ಜೈ ಹನುಮಾನ್’ ಚಿತ್ರದ ಮುಹೂರ್ತವನ್ನು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ನೆರವೇರಿಸಿದ್ದಾರೆ. ಈ ಕುರಿತು ಸಂತೋಷ ಹಂಚಿಕೊಂಡ ಅವರು, “ಜೈ ಶ್ರೀ ರಾಮ.. ಹನುಮಂತನ ದೈವಿಕ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ್’ ಆರಂಭಿಸುವುದು ನನ್ನ ಹೃದಯವನ್ನು ಕೃತಜ್ಞತೆ ಮತ್ತು ಜವಾಬ್ದಾರಿಯಿಂದ ತುಂಬಿಸಿದೆ” ಎಂದು ತಿಳಿಸಿದ್ದಾರೆ.





