ಬಳ್ಳಾರಿ:ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಸುಮಾರು 3,000 ದಿಂದ 5,000 ವರ್ಷಗಳಷ್ಟು ಹಳೆಯದಾದ ಮಾನವನ ಪಳೆಯುಳಿಕೆ (Human Fossil) ಪತ್ತೆಯಾಗಿದೆ.
ಉತ್ಖನನದ ಹಿನ್ನೆಲೆ
ಅಮೆರಿಕದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಖ್ಯಾತ ಪ್ರಾಧ್ಯಾಪಕಿ ನಮಿತಾ ಎಸ್ ಸುಗಂಧಿ ಅವರ ನೇತೃತ್ವದಲ್ಲಿ ಈ ಸಂಶೋಧನಾ ಕಾರ್ಯ ನಡೆಯುತ್ತಿದೆ. ತೆಕ್ಕಲಕೋಟೆಯಲ್ಲಿ ಆಗಾಗ ಇಲ್ಲಿ ಸಂಶೋಧಕರು ಉತ್ಖನನ ನಡೆಸುತ್ತಲೇ ಇರುತ್ತಾರೆ. ಸುಮಾರು ಒಂದು ವಾರದ ಹಿಂದೆ ಮಣ್ಣಿನ ಅಡಿಯಲ್ಲಿ ಮಾನವನ ಮೂಳೆಯೊಂದು ಕಾಣಿಸಿಕೊಂಡಿತ್ತು. ಸಂಶೋಧನಾ ತಂಡವು ಅತ್ಯಂತ ಜಾಗರೂಕತೆಯಿಂದ ಮಣ್ಣನ್ನು ಅಗೆದಾಗ, ಸುಮಾರು 5.5 ಅಡಿ ಉದ್ದದ ಸಂಪೂರ್ಣ ಮಾನವ ಅಸ್ಥಿಪಂಜರ ಪತ್ತೆಯಾಗಿದೆ.
ಅಪರೂಪದ ಶವಸಂಸ್ಕಾರ ಪದ್ಧತಿ
ಸಂಶೋಧಕರು ಪತ್ತೆಹಚ್ಚಿರುವ ಮಾಹಿತಿಯ ಪ್ರಕಾರ, ಈ ಅಸ್ಥಿಪಂಜರವು ಸಿಕ್ಕಿರುವ ಜಾಗದಲ್ಲಿ ವಿಶೇಷ ರೀತಿಯ ಶವಸಂಸ್ಕಾರ ಪದ್ಧತಿ ಕಂಡುಬಂದಿದೆ. ಮಾನವನ ದೇಹದ ಮೇಲೆ ದೊಡ್ಡ ಕಲ್ಲುಗಳನ್ನು ಇಟ್ಟು ಸಂಸ್ಕಾರ ಮಾಡಲಾಗಿದೆ. ಇದು ಆ ಕಾಲದ ಸಂಪ್ರದಾಯ ಅಥವಾ ನಂಬಿಕೆಗಳನ್ನು ಪ್ರತಿಬಿಂಬಿಸುತ್ತದೆ. ಅಸ್ಥಿಪಂಜರದ ಅಕ್ಕಪಕ್ಕದಲ್ಲಿ ಪ್ರಾಚೀನ ಕಾಲದ ಮಡಿಕೆ ಚೂರುಗಳು ಕೂಡ ಪತ್ತೆಯಾಗಿದ್ದು, ಇವುಗಳು ಆ ಕಾಲದ ಮಾನವ ಬಳಸುತ್ತಿದ್ದ ಪರಿಕರಗಳ ಬಗ್ಗೆ ಮಾಹಿತಿ ನೀಡಲಿವೆ.
ಈ ಪಳೆಯುಳಿಕೆಯನ್ನು ಪ್ರಾಥಮಿಕವಾಗಿ ಪರೀಕ್ಷಿಸಿದ ನಮಿತಾ ಎಸ್ ಸುಗಂಧಿ ಅವರು, ಇದು 3,000 ದಿಂದ 5,000 ವರ್ಷಗಳ ಹಳೆಯದಿರಬಹುದು ಎಂದು ಅಂದಾಜಿಸಿದ್ದಾರೆ. ತೆಕ್ಕಲಕೋಟೆಯು ಪ್ರಾಗೈತಿಹಾಸಿಕ ಕಾಲದ ಪ್ರಮುಖ ಕೇಂದ್ರವಾಗಿತ್ತು. ಈಗ ಸಿಕ್ಕಿರುವ ಅಸ್ಥಿಪಂಜರವನ್ನು ಹೆಚ್ಚಿನ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದರೆ, ಅಂದಿನ ಕಾಲದ ಮಾನವರ ಆಹಾರ ಪದ್ಧತಿ, ವಯಸ್ಸು ಮತ್ತು ಅವರ ವಂಶವಾಹಿಯ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.




