ಕೊಪ್ಪಳ: ಲೋಕಾಯುಕ್ತ ಅಧಿಕಾರಿಗಳು (Lokayukta Raid) ಬೆಳ್ಳಂಬೆಳಗ್ಗೆ ಕೊಪ್ಪಳದಲ್ಲಿ ಕಿಮ್ಸ್ ಆಡಳಿತಾಧಿಕಾರಿ ಬಿ. ಕಲ್ಲೇಶ್ ಅವರ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಒಟ್ಟು 6 ಕಡೆಗಳಲ್ಲಿ ದಾಳಿ ನಡೆದಿದೆ..
ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿರುವ ಬಿ. ಕಲ್ಲೇಶ್ ಅವರ ಸ್ವಂತ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಳಗ್ಗೆಯಿಂದಲೇ ಶೋಧ ಕಾರ್ಯ ಆರಂಭವಾಗಿದೆ. ಇದರ ಜೊತೆಗೆ ಕಿಮ್ಸ್ ಕಾಲೇಜು, ಆಡಳಿತ ಕಚೇರಿ ಹಾಗೂ ಅವರ ಆಪ್ತ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ. ಗದಗ, ಹಾವೇರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳಿಂದ ಕೂಡಿದ ಸುಮಾರು 30 ಜನರ ತಂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ಲೋಕಾಯುಕ್ತ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ಈ ದಾಳಿ ನಡೆಯುತ್ತಿದ್ದು, ಅಕ್ರಮ ಆಸ್ತಿ ಗಳಿಕೆ ಹಾಗೂ ಆರ್ಥಿಕ ಅಕ್ರಮಗಳ ಬಗ್ಗೆ ಲಭ್ಯವಾದ ದೂರುಗಳ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮನೆ ಮತ್ತು ಕಚೇರಿಗಳಲ್ಲಿ ಪತ್ತೆಯಾಗಿರುವ ದಾಖಲೆಗಳು, ಬ್ಯಾಂಕ್ ಖಾತೆಗಳ ವಿವರಗಳು, ಆಸ್ತಿ ಪತ್ರಗಳು ಹಾಗೂ ಇತರ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ.
ಕಿಮ್ಸ್ ಆಡಳಿತಾಧಿಕಾರಿ ಬಿ. ಕಲ್ಲೇಶ್ ಅವರು ಈ ಹಿಂದೆ ಬಹುಚರ್ಚಿತ ವಾಲ್ಮೀಕಿ ನಿಗಮ ಹಗರಣದಲ್ಲಿ ಹೆಸರು ಕೇಳಿಬಂದಿದ್ದರು. ಈ ಪ್ರಕರಣದಲ್ಲಿ ಅವರು ಜಾರಿ ನಿರ್ದೇಶನಾಲಯ (ED) ವಿರುದ್ಧ ಆರೋಪ ಮಾಡಿದ್ದಲ್ಲದೆ, ನಂತರ ಅವರನ್ನು ಅಮಾನತು ಕೂಡ ಮಾಡಲಾಗಿತ್ತು. ಈ ಹಿನ್ನೆಲೆ ಇರುವುದರಿಂದ ಇಂದಿನ ಲೋಕಾಯುಕ್ತ ದಾಳಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯದ ವೇಳೆ ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳು, ಬ್ಯಾಂಕ್ ಪಾಸ್‌ಬುಕ್‌ಗಳು, ಚೆಕ್ ಬುಕ್‌ಗಳು, ಹೂಡಿಕೆ ಸಂಬಂಧಿತ ದಾಖಲೆಗಳು ಹಾಗೂ ಆಸ್ತಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಬಿಡಿಎ ಅಧಿಕಾರಿಯ ಮನೆ ಮೇಲೆ ಲೋಕಾಯುಕ್ತ ದಾಳಿ
ಬೆಂಗಳೂರು, ಡಿಸೆಂಬರ್ 31: ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿಗಳನ್ನು ಹೊಂದಿರುವ ಆರೋಪದ ಹಿನ್ನೆಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಸರ್ವೆ ಸೂಪರ್ವೈಸರ್ ವೆಂಕಟೇಶ್ ಡಿ. ಅವರ ಮನೆ ಹಾಗೂ ಕಚೇರಿಗಳ ಮೇಲೆ ಇಂದು ಬೆಳಿಗ್ಗೆಯಿಂದಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಒಟ್ಟು 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಈ ದಾಳಿ ನಡೆದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್‌ಪಿ ಪುವಯ್ಯ ಅವರ ನೇತೃತ್ವದಲ್ಲಿ ಅಧಿಕಾರಿಗಳ ವಿಶೇಷ ತಂಡ ಈ ದಾಳಿಯನ್ನು ನಡೆಸುತ್ತಿದೆ. ಬಸವೇಶ್ವರನಗರದಲ್ಲಿರುವ ವೆಂಕಟೇಶ್ ಅವರ ನಿವಾಸ, ಕಚೇರಿ, ತೋಟದ ಮನೆ ಸೇರಿದಂತೆ ಐದು ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ಪರಿಶೀಲಿಸಲಾಗಿದೆ. ಬೆಳಿಗ್ಗೆಯಿಂದ ದಾಳಿ ಸತತವಾಗಿ ಮುಂದುವರೆದಿದ್ದು, ದಾಖಲೆಗಳು, ಆಸ್ತಿ ಸಂಬಂಧಿತ ಕಡತಗಳು ಹಾಗೂ ಚರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ.
ವೆಂಕಟೇಶ್ ಅವರು ತಮ್ಮ ಆದಾಯಕ್ಕೆ ಹೋಲಿಸಿದರೆ ಅಪಾರ ಪ್ರಮಾಣದ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿರುವುದು ಬೆಳಕಿಗೆ ಬಂದಿದೆ. ಲೋಕಾಯುಕ್ತ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ದಾಳಿಯ ವೇಳೆ ಸುಮಾರು 90 ಲಕ್ಷ ರೂಪಾಯಿ ಮೌಲ್ಯದ 7 ನಿವೇಶನಗಳು ಪತ್ತೆಯಾಗಿವೆ. ಇದರ ಜೊತೆಗೆ 6 ಎಕರೆ 20 ಗುಂಟೆ ಕೃಷಿ ಭೂಮಿಯೂ ವೆಂಕಟೇಶ್ ಅವರ ಹೆಸರಿನಲ್ಲಿ ಇರುವುದಾಗಿ ದಾಖಲೆಗಳು ಲಭ್ಯವಾಗಿವೆ.
ಚರ ಆಸ್ತಿಗಳ ವಿಚಾರಕ್ಕೆ ಬಂದರೆ, ದಾಳಿಯ ವೇಳೆ 29 ಲಕ್ಷ 410 ರೂಪಾಯಿ ಮೌಲ್ಯದ ಚಿನ್ನಾಭರಣ, 32 ಲಕ್ಷ 40 ಸಾವಿರ ರೂಪಾಯಿ ಮೌಲ್ಯದ ವಿವಿಧ ವಾಹನಗಳು ಪತ್ತೆಯಾಗಿವೆ. ಅಲ್ಲದೆ, ಬ್ಯಾಂಕ್ ಖಾತೆಗಳಲ್ಲಿ ಸುಮಾರು 1 ಲಕ್ಷ 40 ಸಾವಿರ ರೂಪಾಯಿ ಶೇಷ ಮೊತ್ತ ಇರುವುದೂ ಕಂಡುಬಂದಿದೆ. ಮನೆಗಳಲ್ಲಿ ಸಿಕ್ಕ ನಗದು ಮೊತ್ತ 2 ಸಾವಿರ ರೂಪಾಯಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





