ಹಾವೇರಿ: ಅಡುಗೆಗೆ ಹುಣಸೆ ಹಣ್ಣು ತರಲು ಹೋದ ವೃದ್ಧ ರೈತರೊಬ್ಬರು ವಿದ್ಯುತ್ ಸ್ಪರ್ಶದಿಂದ ಮರದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಜೋಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ
ಮೃತಪಟ್ಟ ದುರ್ದೈವಿ ರೈತನನ್ನು ಅದೇ ಗ್ರಾಮದ ಹಾಲಪ್ಪ ವಡ್ಡರ್ (70) ಎಂದು ಗುರುತಿಸಲಾಗಿದೆ. ಇಂದು ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮನೆಯಲ್ಲಿ ವಿಶೇಷ ಅಡುಗೆ ಸಿದ್ಧತೆ ನಡೆಯುತ್ತಿತ್ತು. ಅಡುಗೆಗೆ ಹುಣಸೆ ಹಣ್ಣಿನ ಅವಶ್ಯಕತೆ ಇದ್ದಿದ್ದರಿಂದ, ಹಾಲಪ್ಪ ಅವರು ಗ್ರಾಮದ ಸಮೀಪವಿದ್ದ ಹುಣಸೆ ಮರವನ್ನು ಹತ್ತಿದ್ದರು.
ದುರದೃಷ್ಟವಶಾತ್, ಹಾಲಪ್ಪ ಅವರು ಹತ್ತಿದ್ದ ಹುಣಸೆ ಮರದ ರೆಂಬೆಗಳ ನಡುವೆಯೇ ವಿದ್ಯುತ್ ತಂತಿಗಳು ಹಾದು ಹೋಗಿದ್ದವು. ಮರದ ಕೊಂಬೆಗಳಿಗೆ ವಿದ್ಯುತ್ ತಂತಿಗೆ ತಗುಲಿದ್ದರಿಂದ ಇಡೀ ಮರಕ್ಕೆ ವಿದ್ಯುತ್ ಪ್ರವಹಿಸಿತ್ತು. ಮರದ ಕೊಂಬೆಯನ್ನು ಹಿಡಿಯುತ್ತಿದ್ದಂತೆಯೇ ತೀವ್ರವಾಗಿ ವಿದ್ಯುತ್ ಶಾಕ್ ಹೊಡೆದು, ಹಾಲಪ್ಪ ಮರದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಮರಕ್ಕೆ ವಿದ್ಯುತ್ ಹರಿಯುತ್ತಿದ್ದ ಕಾರಣ ಶವವನ್ನು ಕೆಳಗೆ ಇಳಿಸುವುದು ಕೂಡ ಕಷ್ಟಸಾಧ್ಯವಾಗಿತ್ತು. ಹಬ್ಬದ ದಿನವೇ ಕುಟುಂಬದ ಹಿರಿಯ ಸದಸ್ಯರೊಬ್ಬರು ಹೀಗೆ ಅಕಾಲಿಕ ಮರಣಕ್ಕೀಡಾಗಿದ್ದು ಗ್ರಾಮಸ್ಥರಲ್ಲಿ ತೀವ್ರ ಶೋಕ ಮೂಡಿಸಿದೆ. ಇನ್ನೂ ಘಟನೆ ನಡೆಸ ಸ್ಥಳಕ್ಕೆ ಹಿರೇಕೇರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದಲ್ಲಿ ಬೆಂಕಿ ಅವಾಂತರ!
ಬೆಂಗಳೂರು: ನಗರದ ಚಿಕ್ಕಪೇಟೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರ ಕಾರ್ಯಕ್ರಮದ ವೇಳೆ ಪಟಾಕಿ ಕಿಡಿಯಿಂದಾಗಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಚಿಕ್ಕಪೇಟೆಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸ್ವಾಗತ ಕೋರಲು ಸ್ಥಳೀಯರು ರಸ್ತೆಯ ಮೇಲೆ ತಾತ್ಕಾಲಿಕ ಆರ್ಚ್‌ಗಳನ್ನು ನಿರ್ಮಿಸಿ ಬೃಹತ್ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಕಟ್ಟಿದ್ದರು. ಸಚಿವರು ಆಗಮಿಸುತ್ತಿದ್ದಂತೆಯೇ ಕಾರ್ಯಕರ್ತರು ಸಂಭ್ರಮದಿಂದ ಪಟಾಕಿ ಹಚ್ಚಿದ್ದಾರೆ.
ಈ ವೇಳೆ ಪಟಾಕಿಯ ಕಿಡಿಗಳು ಏಕಾಏಕಿ ಸ್ವಾಗತ ಕೋರಿದ್ದ ಬ್ಯಾನರ್‌ಗೆ ತಗುಲಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಧಗಧಗನೆ ಉರಿಯಲಾರಂಭಿಸಿತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಕೆ.ಆರ್. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.





