ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ, ಮನೆಯೊಳಗಿನ ಆಟ ಇನ್ನಷ್ಟು ರೋಚಕತೆಯಿಂದ ತುಂಬಿದೆ.. ಪ್ರತಿದಿನ ಹೊಸ ಟ್ವಿಸ್ಟ್, ಹೊಸ ತಿರುವುಗಳನ್ನು ನೀಡುತ್ತಿರುವ BBK 12, ಈ ಬಾರಿ ಕೊನೆಯ ಕ್ಯಾಪ್ಟನ್ ಆಯ್ಕೆಯಲ್ಲೇ ಭಾರೀ ಡ್ರಾಮಾ ಸೃಷ್ಟಿಸಿದೆ. ಹೌದು, ಈ ಸೀಸನ್‌ನ ಕೊನೆಯ ಕ್ಯಾಪ್ಟನ್ ಆಗಿ ಧನುಷ್ ಆಯ್ಕೆಯಾಗಿದ್ದಾರೆ.
ಈ ಬಾರಿ ನಡೆದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಹಲವು ಅಡಚಣೆಗಳು ಎದುರಾದವು. ಟಾಸ್ಕ್ ಅಂತಿಮ ಹಂತದಲ್ಲಿ ಧನುಷ್ ಮತ್ತು ಅಶ್ವಿನಿ ಗೌಡ ಮಾತ್ರ ಉಳಿದುಕೊಂಡಿದ್ದರು. ಟಾಸ್ಕ್‌ನಲ್ಲಿ ಧನುಷ್ ಗೆಲುವು ಸಾಧಿಸಿದ್ದರಿಂದ, ಮೊದಲಿಗೆ ಅವರೇ ಕೊನೆಯ ಕ್ಯಾಪ್ಟನ್ ಎನ್ನುವ ಭಾವನೆ ಮನೆಮಂದಿಯಲ್ಲಿ ಮೂಡಿತ್ತು.
ಟಾಸ್ಕ್ ವೇಳೆ ರೂಲ್ಸ್ ಬ್ರೇಕ್ ಆಗಿರುವುದು ಬೆಳಕಿಗೆ ಬಂದಿದ್ದು, ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಯಿತು. ಧನುಷ್ ಅವರಿಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೇಯೋ ನಿಯಮ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂತು. ಇದರಿಂದಾಗಿ ಬಿಗ್ ಬಾಸ್ ಸ್ವತಃ ತೀರ್ಪು ನೀಡದೆ, ಒಂದು ಮಹತ್ವದ ನಿರ್ಧಾರ ಕೈಗೊಂಡರು. ಕೊನೆಯ ಕ್ಯಾಪ್ಟನ್ ಆಯ್ಕೆ ಮಾಡುವ ಅಧಿಕಾರವನ್ನು ಸ್ಪರ್ಧಿಗಳಿಗೇ ಬಿಟ್ಟರು.
ಈ ನಿರ್ಧಾರದಿಂದ ಮನೆಯ ವಾತಾವರಣವೇ ಬದಲಾಗಿದೆ. ಇಬ್ಬರೂ ಸ್ಪರ್ಧಿಗಳು ಧನುಷ್ ಮತ್ತು ಅಶ್ವಿನಿ ತಮ್ಮ ಪರವಾಗಿ ಸ್ಪರ್ಧಿಗಳ ಬೆಂಬಲ ಪಡೆಯಲು ಪ್ರಯತ್ನಿಸಿದರು. ಅಶ್ವಿನಿ ಗೌಡ, ಸ್ಪರ್ಧಿಗಳ ಬಳಿ ಮನವಿ ಮಾಡಿಕೊಂಡು ತಮ್ಮ ಮನದಾಳದ ನೋವನ್ನೂ ಹಂಚಿಕೊಂಡರು. “ಈ ಮನೆಯಲ್ಲಿ ನಾನು ಸೋಲಬೇಕು ಅಂತ ಬಯಸುವವರು ತುಂಬಾ ಜನರಿದ್ದಾರೆ” ಎಂದು ಅಶ್ವಿನಿ ಅವರು ಹೇಳಿದರು.
ಅಂತಿಮವಾಗಿ ನಡೆದ ವೋಟಿಂಗ್‌ನಲ್ಲಿ ಧನುಷ್ ಪರವಾಗಿ ಕಾವ್ಯ ಶೈವ, ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ ಮತ್ತು ಗಿಲ್ಲಿ ನಟ ವೋಟ್ ಹಾಕಿದರು. ಅಶ್ವಿನಿ ಪರವಾಗಿ ರಕ್ಷಿತಾ ಶೆಟ್ಟಿ, ರಘು ಮತ್ತು ಧ್ರುವಂತ್ ಬೆಂಬಲಿಸಿದರು. ಹೆಚ್ಚಿನ ವೋಟ್ ಪಡೆದ ಧನುಷ್, ಬಿಗ್ ಬಾಸ್ ಕನ್ನಡ 12ರ ಕೊನೆಯ ಕ್ಯಾಪ್ಟನ್ ಎಂಬ ಗೌರವಕ್ಕೆ ಪಾತ್ರರಾದರು.
ರೂಲ್ಸ್ ಬ್ರೇಕ್ ಆದರೂ, ಸ್ಪರ್ಧಿಗಳ ಬೆಂಬಲದಿಂದ ಧನುಷ್ ಗೆಲುವು ಸಾಧಿಸಿದರೆ, ಅಶ್ವಿನಿಗೆ ಇದು ದೊಡ್ಡ ನಿರಾಸೆಯ ಉಂಟಾಯಿತು. ಕ್ಯಾಪ್ಟನ್ ಆಗುವ ಕನಸು ಅಂತಿಮ ಹಂತದಲ್ಲೇ ಕೈ ತಪ್ಪಿದ್ದರಿಂದ, ಅವರ ಬೇಸರ ಮುಖದಲ್ಲೇ ಕಾಣಿಸಿಕೊಂಡಿತ್ತು.
ಕಳೆದ ವಾರ ಕ್ಯಾಪ್ಟನ್ ಆಗಿದ್ದ ಗಿಲ್ಲಿ ನಟ ಮತ್ತು ಅಶ್ವಿನಿ ನಡುವಿನ ಮಾತಿನ ಚಕಮಕಿ ಈಗ ನೆನಪಾಗುತ್ತಿದೆ. ಕೆಲಸದ ವಿಚಾರವಾಗಿ ಗಿಲ್ಲಿ ಆದೇಶ ನೀಡಿದಾಗ, ಅಶ್ವಿನಿ “ಕ್ಯಾಪ್ಟನ್ ಎಂದರೆ ನಿಂಗೇನು ಕೋಡು ಇರೋದಿಲ್ಲ” ಎಂದು ತಿರುಗೇಟು ನೀಡಿದ್ದರು. ಅದಕ್ಕೆ ಗಿಲ್ಲಿ, “ಮೊದಲು ನೀನು ಕ್ಯಾಪ್ಟನ್ ಆಗಿ ತೋರಿಸು, ಆಮೇಲೆ ಮಾತಾಡು” ಎಂದು ಚಾಲೆಂಜ್ ಹಾಕಿದ್ದರು.
ಇದೀಗ ಆ ಚಾಲೆಂಜ್ ನಿಜವಾಗಿದ್ದು, ಈ ಸೀಸನ್‌ನಲ್ಲಿ ಅಶ್ವಿನಿಗೆ ಕ್ಯಾಪ್ಟನ್ ಆಗುವ ಅವಕಾಶವೇ ಉಳಿದಿಲ್ಲ. ಆ ಮೂಲಕ ಗಿಲ್ಲಿ ಎದುರು ಅಶ್ವಿನಿ ಸೋತಂತೆ ಆಗಿದೆ.





