ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯ ‘ಪೈರಸಿ’ ಎಂಬ ಮಹಾಮಾರಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ‘ಮಾರ್ಕ್’ (Mark) ಸಿನಿಮಾ ಇವೆಂಟ್‌ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಆಡಿದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಸುದೀಪ್ ಅವರು ಬೇರೊಬ್ಬ ನಟನಿಗೆ ಟಾಂಗ್ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಅವರ ಆಪ್ತ ಚಕ್ರವರ್ತಿ ಚಂದ್ರಚೂಡ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಸಿನಿಮಾಗಳನ್ನು ವ್ಯವಸ್ಥಿತವಾಗಿ ಹಾಳು ಮಾಡುವ ಒಂದು ಪಡೆ ಸಕ್ರಿಯವಾಗಿದೆ. ಕಷ್ಟಪಟ್ಟು ತಯಾರಿಸಿದ ಸಿನಿಮಾ ತೆರೆಗೆ ಬಂದ ಕೆಲವೇ ಗಂಟೆಗಳಲ್ಲಿ ಪೈರಸಿ ಲಿಂಕ್‌ಗಳು ಹರಿದಾಡುತ್ತಿವೆ. ಇದು ಚಿತ್ರರಂಗಕ್ಕೆ ತಗುಲಿರುವ ಶಾಪದಂತಿದೆ. ಈ ಕಿಡಿಗೇಡಿಗಳ ವಿರುದ್ಧ ತಾಳ್ಮೆಯಿಂದ ಇರೋದು ಸಾಕು, ಇನ್ನು ಮುಂದೆ ಅವರ ಭಾಷೆಯಲ್ಲೇ ಉತ್ತರ ಕೊಡಬೇಕಿದೆ ಮತ್ತು ಈ ಅಸಭ್ಯತೆಯ ವಿರುದ್ಧ ನಾನು ಯುದ್ಧ ಸಾರುತ್ತೇನೆ ಎಂದು ಸುದೀಪ್ ಹೇಳಿದ್ದರು. ಈ ಹೇಳಿಕೆಯನ್ನು ಕೆಲವರು ಸ್ಟಾರ್ ವಾರ್ ಎಂದು ಬಿಂಬಿಸುತ್ತಿದ್ದಾರೆ.
ಈ ಕುರಿತು ಫೇಸ್‌ಬುಕ್ ಲೈವ್‌ನಲ್ಲಿ ಸುದೀರ್ಘವಾಗಿ ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ್, ಸುದೀಪ್ ಅವರ ಮಾತಿನ ನಿಜವಾದ ಅರ್ಥ ಏನು ಎಂಬುದನ್ನ ಮಾತನಾಡುತ್ತಾ, ಪೈರಸಿ ಸಮಸ್ಯೆ ಕೇವಲ ಒಬ್ಬ ನಟನದ್ದಲ್ಲ. ಇದು ಇಡೀ ಚಿತ್ರರಂಗದ ಸಮಸ್ಯೆ. ನಾವಷ್ಟೇ ಅಲ್ಲ, ಶಿವರಾಜ್‌ಕುಮಾರ್ ಅವರ ’45’ ಇರಲಿ ಅಥವಾ ದರ್ಶನ್ ಅವರ ‘ಡೆವಿಲ್’ ಇರಲಿ, ಎಲ್ಲಾ ಸಿನಿಮಾಗಳಿಗೂ ಈ ಪೈರಸಿ ಕಾಟ ಎದುರಾಗಿದೆ. ಡೆವಿಲ್ ಚಿತ್ರತಂಡ ಕೂಡ 9,000ಕ್ಕೂ ಅಧಿಕ ಲಿಂಕ್ ಡಿಲೀಟ್ ಮಾಡಿದ್ದೇವೆ ಎಂದಿದ್ದಾರೆ. ಸುದೀಪ್ ಅವರು ಯುದ್ಧ ಸಾರಿದ್ದು ಈ ಪೈರಸಿ ವಿರುದ್ಧ ಎಂದು ಚಂದ್ರಚೂಡ್ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಫ್ಯಾನ್ ವಾರ್ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಚಂದ್ರಚೂಡ್, ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳುವುದು ಯಾಕೆ ? ಎಂದು ಪ್ರಶ್ನಿಸಿದ್ದಾರೆ. ಸುದೀಪ್ ಅವರು ಪೈರಸಿ ಮಾಡುವವರನ್ನು ಮತ್ತು ಸಿನಿಮಾವನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುವವರನ್ನು ಟೀಕಿಸಿದ್ದಾರೆ. ಇದನ್ನು ತಮಗೆ ಸಂಬಂಧಪಟ್ಟಿದ್ದು ಎಂದು ಯಾರಾದರೂ ಭಾವಿಸಿದರೆ ಅದಕ್ಕೆ ಸುದೀಪ್ ಜವಾಬ್ದಾರರಲ್ಲ ಎಂಬರ್ಥದಲ್ಲಿ ಚಂದ್ರಚೂಡ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆಯಾದಾಗ ಚಿತ್ರತಂಡ ಬರೋಬ್ಬರಿ 11,000ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡಿತ್ತು. ಇದೀಗ ‘ಡೆವಿಲ್’ ಚಿತ್ರಕ್ಕೂ ಅದೇ ಪರಿಸ್ಥಿತಿ ಬಂದಿದೆ. ಜಾತಿ, ಭೇದವಿಲ್ಲದೆ ಜನರನ್ನು ಒಂದುಗೂಡಿಸುವ ಏಕೈಕ ಜಾಗ ಚಿತ್ರಮಂದಿರ. ಅದಕ್ಕೆ ಕಲ್ಲು ಹಾಕುವ ಕೆಲಸ ನಿಲ್ಲಬೇಕು. ಈ ಅಸಭ್ಯತೆಯನ್ನು ತಡೆಯಲು ನಾವು ಮುಖ್ಯಮಂತ್ರಿಯವರಿಗೂ ಮನವಿ ಮಾಡಿದ್ದೇವೆ ಎಂದು ಚಂದ್ರಚೂಡ್ ತಿಳಿಸಿದ್ದಾರೆ.





