ಸಿನಿಮಾ ಸ್ಟಾರ್‌ಗಳು ರಾಜಕಾರಣದತ್ತ ವಾಲುವುದು ಸರ್ವೇ ಸಾಮಾನ್ಯ. ಧರ್ಮೇಂದ್ರ ಕೂಡ ಅದ್ರಿಂದ ಹೊರತಾಗಿಲ್ಲ. ಅಷ್ಟೇ ಅಲ್ಲ, ಹೇಮಾ ಮಾಲಿನಿ ಜೊತೆ ತಾವು ಕೂಡ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಅಂತ ವಿವಾದಗಳ ಸುಳಿಗೆ ಸಿಲುಕಿಕೊಂಡಿದ್ರು ಲೆಜೆಂಡ್ ಧರ್ಮೇಂದ್ರ. ಅದ್ರಿಂದ ಹೇಗೆ ಹೊರಗೆ ಬಂದ್ರು..? ಏನು ಆ ವಿವಾದದ ಅಸಲಿಯತ್ತು ಅಂತೀರಾ..? ಇಲ್ಲಿದೆ ನೋಡಿ.
- ಪಂಜಾಬಿ, ಬೆಂಗಾಳಿ ಚಿತ್ರಗಳಲ್ಲೂ ಧರ್ಮೇಂದ್ರ ಅಭಿನಯ
- ರಿಯಾಲಿಟಿ ಶೋಗೆ ಜಡ್ಜ್.. ವೆಬ್ ಸೀರೀಸ್‌ನಲ್ಲೂ ಛಾಪು
- ಲೋಕಸಭಾ ಸದಸ್ಯರಾಗಿ ಆಯ್ಕೆ.. ಚುನಾವಣೆ ವೇಳೆ ವಿವಾದ
- ಸಿನಿಮಾ ಶೂಟಿಂಗ್, ಕೃಷಿ ಮಾಡ್ತಾ ಟೀಕೆಗೆ ಗುರಿಯಾಗಿದ್ದರು
ನಟ, ನಿರ್ಮಾಪಕರಾಗಿ ಧರ್ಮೇಂದ್ರ ಬಾಲಿವುಡ್‌ನಲ್ಲಿ ಮಿಂಚಿದ ಕಥೆ ಎಲ್ಲರಿಗೂ ಗೊತ್ತೇಯಿದೆ. ಆದ್ರೆ ಮಾತೃಭಾಷೆ ಆಗಿರೋ ಪಂಜಾಬಿ ಚಿತ್ರಗಳಲ್ಲೂ ಇವರು ನಟಿಸಿದ್ದಾರೆ. ಡು ಶೇರ್, ಡಬಲ್ ದಿ ಟ್ರುಪಲ್, ಖುರ್ಬಾನಿ ಜಾಟ್ ದಿ, ದುಃಖ ಭಂಜನ್ ತೇರಾ ನಾಮ್ ಸೇರಿದಂತೆ ಹಲವು ಪಂಜಾಬಿ ಚಿತ್ರಗಳಲ್ಲಿ ಪ್ರೇಕ್ಷಕರನ್ನ ರಂಜಿಸಿದ್ದಾರೆ ಧರ್ಮೇಂದ್ರ. ಅಲ್ಲದೆ, ಬೆಂಗಾಳಿಯ ಪಾರಿ ಚಿತ್ರದಲ್ಲಿ ಲೆಜೆಂಡ್ ದಿಲೀಪ್ ಕುಮಾರ್ ಜೊತೆ ತೆರೆಹಂಚಿಕೊಂಡಿದ್ರು.
ಇನ್ನು ಕಿರುತೆರೆಯಲ್ಲಿ ಕೂಡ ಕಮಾಲ್ ಮಾಡಿದ್ದ ಈ ಲೆಜೆಂಡರಿ ಆ್ಯಕ್ಟರ್, ಇಂಡಿಯಾಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋನ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ, ತಾಜ್ ಡಿವೈಡೆಡ್ ಬೈ ಬ್ಲಡ್ ಅನ್ನೋ ವೆಬ್ ಸೀರೀಸ್‌ನಲ್ಲೂ ಗರಂ ಧರಂ ನಟನಾ ಗಮ್ಮತ್ತು ತೋರಿದ್ದರು.
2004ರಿಂದ 2009ರ ತನಕ ಲೋಕಸಭಾ ಸದಸ್ಯರಾಗಿದ್ದ ಧರ್ಮೇಂದ್ರ, ಬಿಜೆಪಿ ಪಕ್ಷದಲ್ಲಿ ತಮ್ಮನ್ನ ಗುರ್ತಿಸಿಕೊಂಡಿದ್ದರು. ರಾಜಸ್ತಾನದ ಬಿಕನೆರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಹೋಗಿದ್ದ ಧರ್ಮೇಂದ್ರ, ಪಾರ್ಲಿಮೆಂಟ್‌ಗೆ ಸರಿಯಾಗಿ ಹೀಗದೆ ಟೀಕೆಗಳಿಗೆ ಗುರಿಯಾಗಿದ್ದರು. ಹೌದು.. ಸದಾ ಸಿನಿಮಾ ಶೂಟಿಂಗ್, ಕೃಷಿ ಅಂತ ಫಾರ್ಮ್ ಹೌಸ್‌ನಲ್ಲಿ ಸಮಯ ಕಳೆಯುತ್ತಾ, ತನ್ನ ಎಂಪಿ ವೃತ್ತಿಯನ್ನ ಸಮರ್ಪಕವಾಗಿ ನಿಭಾಯಿಸಲಿಲ್ಲ ಅಂತ ಜನರಿಂದ ಛೀಮಾರಿ ಕೂಡ ಹಾಕಿಸಿಕೊಂಡಿದ್ದರು.
ಇದಲ್ಲದೆ, ಎಲೆಕ್ಷನ್ ಕ್ಯಾಂಪೇನ್ ಮಾಡುವ ವೇಳೆ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದರು. ಪ್ರಜಾಪ್ರಭುತ್ವಕ್ಕೆ ಅಗತ್ಯವಿರುವ ಮೂಲಭೂತ ಶಿಷ್ಟಾಚಾರವನ್ನು ಕಲಿಸಲು ತಮ್ಮನ್ನು ಸರ್ವಾಧಿಕಾರಿಯಾಗಿ ಆಯ್ಕೆ ಮಾಡಬೇಕು ಅನ್ನೋ ಆಕ್ರಮಣಕಾರಿ ಹೇಳಿಕೆ ನೀಡಿದ್ದರು ಧರ್ಮೇಂದ್ರ. ಇದ್ರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ನಂತ್ರ ಪತ್ನಿ ಹೇಮಾ ಮಾಲಿನಿ ಕೂಡ ಲೋಕಸಭೆಗೆ ಒಮ್ಮೆ, ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿ ರಾಜಕಾರಣ ಮಾಡಿದ್ರು.
- ಇಸ್ಲಾಂಗೆ ಮತಾಂತರ.. ಧರ್ಮೇಂದ್ರ ದಂಪತಿ ವಿವಾದ
- ವಿವಾಹಕ್ಕಾಗಿಯೇ ಇಸ್ಲಾಂಗೆ ಮತಾಂತರ ಆರೋಪ..!
ಮೊದಲೇ ಮದ್ವೆ ಆಗಿ ನಾಲ್ಕು ಮಂದಿ ಮಕ್ಕಳಿದ್ದ ಧರ್ಮೇಂದ್ರ, ಮುಂಬೈಗೆ ಶಿಫ್ಟ್ ಆದ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ. ಹೇಮಾ ಮಾಲಿನಿಯನ್ನ ಪ್ರೀತಿಸಿ ಎರಡನೇ ಮದ್ವೆ ಕೂಡ ಆಗ್ತಾರೆ. ಆದ್ರೆ ಹೇಮಾ ಮಾಲಿನಿಯನ್ನ ವಿವಾಹವಾಗೋಕೆ ಅಂತಲೇ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಅನ್ನೋ ವದಂತಿಗಳು ಹರಿದಾಡುತ್ತವೆ. ಅದು ಸಾಕಷ್ಟು ವಿವಾದ ಸೃಷ್ಟಿಸಿ, ಅವ್ರ ಕರಿಯರ್‌ಗೆ ಕಪ್ಪು ಚುಕ್ಕೆಯಾಗಿಲಾರಂಭಿಸುತ್ತದೆ.
ಈ ಬಗ್ಗೆ 2004ರ ಚುನಾವಣಾ ಪ್ರಚಾರದಲ್ಲಿ ನಾವು ಯಾವುದೇ ಮತಾಂತರ ಆಗಿಲ್ಲ. ಧರ್ಮೇಂದ್ರ ಅವರು ಹಿಂದೂ ಆಗಿಯೇ ಉಳಿದಿದ್ದಾರೆ ಅಂತ ಬಲವಾಗಿ ಪ್ರತಿಪಾದಿಸುತ್ತಾರೆ. ಆ ಮೂಲಕ ಎಲ್ಲಾ ಅಂತೆ ಕಂತೆಗಳಿಗೆ ಫುಲ್‌ಸ್ಟಾಪ್ ಇಡ್ತಾರೆ ಹಿರಿಯನಟ ಧರ್ಮೇಂದ್ರ.
89ನೇ ವಯಸ್ಸಿನಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದ ಧರ್ಮೇಂದ್ರ ಅವರು ಸಾವಯವ ಕೃಷಿ ಪದ್ದತಿಗಳ ಉತ್ತೇಜಿಸೋ ವಿಡಿಯೋಗಳನ್ನ ಅಪ್‌ಲೋಡ್ ಮಾಡ್ತಿದ್ರು. ಟ್ರ್ಯಾಕ್ಟರ್ ಓಡಿಸುವ ವಿಡಿಯೋಗಳ ಜೊತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರೋ ದೃಶ್ಯಗುಚ್ಚಗಳನ್ನ ಅಪ್‌ಲೋಡ್ ಮಾಡ್ತಿದ್ರು. ಅದೇನೇ ಇರಲಿ, ಇಂದು ಭಾರತೀಯ ಚಿತ್ರರಂಗ ಅಪರೂಪದ ಸಿನಿಸಂತನನ್ನ ಕಳೆದುಕೊಂಡಿದೆ. ಇದು ನಿಜಕ್ಕೂ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಧರ್ಮೇಂದ್ರ ಕುಟುಂಬಗಳಿಗೆ ಈ ನೋವನ್ನು ಭರಿಸೋ ಶಕ್ತಿ ಕರುಣಿಸಲಿ ದೇವರು. ಅವ್ರ ಆತ್ಮಕ್ಕೆ ಶಾಂತಿ ದೊರಕಲಿ ಅನ್ನೋದು ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





