ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶನಿವಾರದಿಂದ ಐತಿಹಾಸಿಕ ಬೃಹತ್ ಗೀತೋತ್ಸವ ಆರಂಭವಾಗಲಿದೆ. ಒಂದು ತಿಂಗಳ ಕಾರ್ಯಕ್ರಮದ ಭಾಗವಾಗಿ ನವೆಂಬರ್ 28ರಂದು ಪ್ರಧಾನಿ ನರೇಂದ್ರ ಮೋದಿ 1 ಲಕ್ಷ ಭಕ್ತರ ಜೊತೆಗೆ ‘ಲಕ್ಷ ಕಂಠ ಗೀತಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಗವದ್ಗೀತೆಯ 10 ಶ್ಲೋಕಗಳ ಪಠಣ ಮಾಡಲಿದ್ದಾರೆ.
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, “ನಾನು ಎರಡು ವರ್ಷಗಳ ಹಿಂದೆ ‘ಕೋಟಿ ಗೀತಾ ಲೇಖನ ಯಜ್ಞ’ ಸಂಕಲ್ಪಿಸಿದ್ದೆ. ಅದು ಈಗ ಪೂರ್ಣಗೊಳ್ಳುತ್ತಿದೆ. ಈ ಯಜ್ಞವನ್ನು ಶ್ರೀಕೃಷ್ಣನಿಗೆ ಪ್ರಧಾನಿ ನರೇಂದ್ರ ಮೋದಿಯವರ ಕೈಯಿಂದಲೇ ಅರ್ಪಿಸಬೇಕೆಂಬ ಆಶಯ ನನ್ನದು” ಎಂದು ಭಾವುಕರಾದರು. ಉತ್ಸವವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶನಿವಾರ ಉದ್ಘಾಟಿಸಲಿದ್ದಾರೆ.
ನವೆಂಬರ್ 28ರಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ ಕೃಷ್ಣಮಠಕ್ಕೆ ಆಗಮಿಸಲಿದ್ದಾರೆ. ಆಗಮನದೊಡನೆ ₹2.50 ಕೋಟಿ ವೆಚ್ಚದ ‘ಸುವರ್ಣ ತೀರ್ಥ ಮಂಟಪ’ ಮತ್ತು ‘ಕನಕನ ಕಿಂಡಿ’ ಚಿನ್ನದ ಹೊದಿಕೆಯ ಉದ್ಘಾಟನೆ ನೆರವೇರಲಿದೆ.
ಬಳಿಕ ಮಠದ ಬಳಿಯ ವಿಶಾಲ ಗದ್ದೆಯಲ್ಲಿ 1 ಲಕ್ಷ ಭಕ್ತರೊಂದಿಗೆ ಮೋದಿಯವರು ಭಗವದ್ಗೀತೆಯ ಕೊನೆಯ 10 ಶ್ಲೋಕಗಳನ್ನು ಗಾಯನ ಮಾಡಲಿದ್ದಾರೆ. ಈ ಗಾಯನಕ್ಕೆ ವಿಶ್ವದರ್ಜೆ ಧ್ವನಿವರ್ಧಕ, ಎಲ್‌ಇಡಿ ತೆರೆಗಳು, ಡ್ರೋನ್ ಕ್ಯಾಮೆರಾ ಲೈವ್ ಟೆಲಿಕಾಸ್ಟ್ ಸಿದ್ಧವಿದೆ. “ಇದು ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ದಾಖಲೆಯಾಗಲಿದೆ” ಎಂದು ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.
ನ.30: ಯೋಗಿ ಆದಿತ್ಯನಾಥ್ ಭೇಟಿ
ನವೆಂಬರ್ 30ರಂದು ‘ಸಂತ ಸಂಗಮ ಮತ್ತು ಭಜನೋತ್ಸವ’ ನಡೆಯಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ವೈಭವದ ಶೋಭಾಯಾತ್ರೆ, 4 ಗಂಟೆಗೆ ಸಾಮೂಹಿಕ ಭಜನೋತ್ಸವ ಆರಂಭವಾಗಲಿದೆ. ದೇಶದ 15ಕ್ಕೂ ಹೆಚ್ಚು ಮಠಾಧೀಶರು, ಸಂತರು ಭಾಗವಹಿಸಲಿದ್ದಾರೆ. ರಾಜ್ಯ-ರಾಷ್ಟ್ರ ಮಟ್ಟದ ನಾಯಕರೂ ಆಗಮಿಸುವ ನಿರೀಕ್ಷೆ ಇದೆ.





