ಬೆಂಗಳೂರು (ಜುಲೈ 14): ದೇಶ ವಿರೋಧಿ ಚಟುವಟಿಕೆ ಹಾಗೂ ಐಸಿಸ್ (ISIS) ಉಗ್ರ ಸಂಘಟನೆಗೆ ನೆರವು ನೀಡಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ಎನ್‌ಐಎ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
- ಎನ್‌ಐಎ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಹನೀಫ್ ಖಾನ್‌ಗೆ ಜೀವಾವಧಿ ಶಿಕ್ಷೆ
- ಮತ್ತೋರ್ವ ಆರೋಪಿಗೆ 7 ವರ್ಷ ಜೈಲು ಹಾಗೂ ₹48 ಸಾವಿರ ದಂಡ
- 2020ರಲ್ಲಿ ದಾಖಲಾಗಿದ್ದ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲಾಗಿತ್ತು.
ಉಗ್ರ ಸಂಘಟನೆಗೆ ನೆರವು ನೀಡಿದ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಹನೀಫ್ ಖಾನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಮತ್ತೋರ್ವ ಆರೋಪಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ 48 ಸಾವಿರ ದಂಡ ರೂಪಾಯಿ ವಿಧಿಸಲಾಗಿದೆ.
ಈ ಪ್ರಕರಣವನ್ನು 2020ರಲ್ಲಿ ಕರ್ನಾಟಕ ರಾಜ್ಯ ಪೊಲೀಸರು ಮೊದಲಿಗೆ ದಾಖಲಿಸಿಕೊಂಡಿದ್ದರು. ಬಳಿಕ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದ್ದು, ಎನ್‌ಐಎ ಸಂಸ್ಥೆ ಪ್ರಕರಣದ ತನಿಖೆ ನಡೆಸಿ ಒಟ್ಟು 20 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿತ್ತು.
ವಿಚಾರಣೆ ವೇಳೆ ಪ್ರಮುಖ ಆರೋಪಿ ಮೊಹಮ್ಮದ್ ಹನೀಫ್ ಖಾನ್ ತನ್ನ ತಪ್ಪನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದನು. ಲಭ್ಯವಿದ್ದ ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ ವಿಶೇಷ ಎನ್‌ಐಎ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ತನಿಖೆಯ ಪ್ರಕಾರ, ಆರೋಪಿಗಳು ಐಸಿಸ್ ಸಂಘಟನೆಯ ಸದಸ್ಯರಿಗೆ ತರಬೇತಿ ನೀಡಲು ಹಾಗೂ ಅವರಿಗೆ ಸುರಕ್ಷಿತ ಅಡಗುತಾಣಗಳನ್ನು ಸೃಷ್ಟಿಸಲು ಸಹಕಾರ ನೀಡಿದ್ದರು. ಈ ಸಂಬಂಧ ಚಾಮರಾಜನಗರ ಜಿಲ್ಲೆಯ ಶಿವನಸಮುದ್ರ ಹಾಗೂ ಗುಂಡ್ಲುಪೇಟೆ ಭಾಗಗಳಿಗೆ ತೆರಳಿ ಚಟುವಟಿಕೆ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಎನ್‌ಐಎ ಅಧಿಕಾರಿಗಳು ಸಲ್ಲಿಸಿದ್ದ ಸಾಕ್ಷ್ಯಗಳು, ದಾಖಲೆಗಳು ಮತ್ತು ಇತರೆ ಪುರಾವೆಗಳ ಆಧಾರದ ಮೇಲೆ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ದೇಶದ ಭದ್ರತೆಗೆ ಧಕ್ಕೆ ಉಂಟುಮಾಡುವ ಉಗ್ರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ತೀರ್ಪು ಮಹತ್ವದ್ದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.





