ಬಿಗ್‌ಬಾಸ್ ಕನ್ನಡ ಸೀಸನ್ 12 ತನ್ನ ರೋಚಕ ಹಾದಿಯಲ್ಲಿ ಮುಂದುವರೆಯುತ್ತಿದ್ದು, ಇತ್ತೀಚಿಗೆ ಎದುರಾದ ಸಣ್ಣ ಸಮಸ್ಯೆಯ ನಂತರ ಮೊದಲ ಬಾರಿಗೆ ನಿರೂಪಕ ಕಿಚ್ಚ ಸುದೀಪ್ ವಾರದ ಪಂಚಾಯಿತಿಯಲ್ಲಿ ಭಾವುಕವಾಗಿ ಮಾತನಾಡಿದ್ದಾರೆ. ಜಾಲಿವುಡ್ ಸ್ಟುಡಿಯೋದಲ್ಲಿ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ನೋಟಿಸ್‌ಗೆ ಸಂಬಂಧಿಸಿದಂತೆ ಸ್ಪರ್ಧಿಗಳನ್ನು 24 ಗಂಟೆಗಳ ಕಾಲ ಈಗಲ್‌ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲ್ಪಟ್ಟಿತ್ತು. ಆದರೆ, ಸುದೀಪ್ ಅವರ ಪ್ರಯತ್ನಗಳು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹಸ್ತಕ್ಷೇಪದಿಂದ ಶೋ ಮತ್ತೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಸುದೀಪ್ ಧನ್ಯವಾದ ಹೇಳಿದರು.
ಬಿಗ್‌ಬಾಸ್ ಕನ್ನಡ ಸೀಸನ್ 12 ಅಕ್ಟೋಬರ್ 1ರಂದು ಆರಂಭವಾಗಿ, ಎರಡು ವಾರಗಳಲ್ಲಿ ಒಟಿಟಿ ಶೋ ಸಹ ನಡೆದಿದೆ. ಆದರೆ, ಕೋವಿಡ್ ಹೊರತುಪಡಿಸಿ ಯಾವುದೇ ಸೀಸನ್‌ನಲ್ಲಿ ಇಂತಹ ಸಮಸ್ಯೆ ಎದುರಾಗಿರಲಿಲ್ಲ. ಜಾಲಿವುಡ್ ಸ್ಟುಡಿಯೋದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನೋಟಿಸ್‌ಗೆ ಸ್ಪಂದಿಸದ ಕಾರಣೆ ಜಿಲ್ಲಾ ಆಡಳಿತವು ಸ್ಟುಡಿಯೋ ಮುಚ್ಚಿ, ಸ್ಪರ್ಧಿಗಳನ್ನು ಹೊರಗೆ ಕಳಿಸಿತು. ಇದರಿಂದ ಶೋ ತಾತ್ಕಾಲಿಕವಾಗಿ ನಿಂತಿತು. ಆದರೆ, ಸುದೀಪ್ ಅವರು ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ ನಂತರ, ಉಪಮುಖ್ಯಮಂತ್ರಿಯವರು ಡಿಸಿ ಅವರಿಗೆ ಸೂಚನೆ ನೀಡಿ ಸೀಲ್ ತೆಗೆಸಿದರು. ಕೇವಲ 24 ಗಂಟೆಗಳಲ್ಲಿ ಸ್ಪರ್ಧಿಗಳು ಮನೆಗೆ ಮರಳಿದರು.
ವಾರದ ಪಂಚಾಯಿತಿಯಲ್ಲಿ ಸುದೀಪ್ ಮಾತನಾಡಿ, “ಬಿಗ್‌ಬಾಸ್ ಕನ್ನಡಿಗರ ಹೆಮ್ಮೆಯ ಶೋ. 12 ಸೀಸನ್‌ಗಳಿಂದ ಕನ್ನಡಿಗರು ಇದನ್ನು ಬೆಳೆಸಿಕೊಂಡಿದ್ದಾರೆ. ಇದನ್ನು ಹಾಳು ಮಾಡುವುದು ಸುಲಭವಲ್ಲ. ಕನ್ನಡಿಗರ ಪ್ರೀತಿ ಇರುವವರೆಗೆ ಬಿಗ್‌ಬಾಸ್ ಮುನ್ನುಗ್ಗುತ್ತದೆ. ಇತ್ತೀಚಿನ ಸಮಸ್ಯೆಯಲ್ಲಿ ಬಿಗ್‌ಬಾಸ್ ಜ್ಯೋತಿ ಆರದಂತೆ ಕಾಪಾಡಿದ ಎಲ್ಲರಿಗೂ ಧನ್ಯವಾದಗಳು” ಎಂದರು.
ಮುಂದುವರೆದು, “ಕೆಲವರ ಕಣ್ಣು ನಮ್ಮ ಶೋ ಮೇಲೆ ಬಿದ್ದಿರಬಹುದು. ಆದರೆ, ಇದು ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದು, ಹಲವರ ಜೀವನ ಬದಲಾಯಿಸಿದ್ದು. ನಮ್ಮ ಡಿಕೆ ಸಾಹೇಬ್‌ರಿಗೂ, ಆತ್ಮೀಯ ಗೆಳೆಯ ನಲಪಾಡ್ ಅವರಿಗೂ ಧನ್ಯವಾದಗಳು. ಬಿಗ್‌ಬಾಸ್‌ಗೆ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ ಆಡಳಿತ ಅಧಿಕಾರಿಗಳಿಗೂ ಧನ್ಯವಾದಗಳು” ಎಂದು ಸುದೀಪ್ ಹೇಳಿದರು.