ಬೆಂಗಳೂರು: ರಾಮನಗರ ಜಿಲ್ಲೆಯ ಜಾಲಿವುಡ್ ಸ್ಟುಡಿಯೋಸ್ ಗೆ ಬೀಗ ಹಾಕಿದ ಜಿಲ್ಲಾಡಳಿತದ ಕ್ರಮ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನೀಡಿದ ನೋಟೀಸ್ ಅನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ನಾಳೆ (ಅಕ್ಟೋಬರ್ 09) ನಡೆಯಲಿದೆ. ಈ ತೀರ್ಪು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಭವಿಷ್ಯವನ್ನು ನಿರ್ಧರಿಸಲಿದೆ .
ಈ ಪ್ರಕರಣದಲ್ಲಿ ಎರಡು ಪ್ರತ್ಯೇಕ ಅರ್ಜಿಗಳು ಹೈಕೋರ್ಟ್‌ನ ಮುಂದಿವೆ. ಮೊದಲನೆಯದು, ಜಿಲ್ಲಾಡಳಿತವು ಸ್ಟುಡಿಯೋಗೆ ಬೀಗ ಹಾಕಿದ ಕ್ರಮವನ್ನು ಪ್ರಶ್ನಿಸಿದರೆ, ಎರಡನೆಯ ಅರ್ಜಿಯು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಹಿಂದೆ ಜಾಲಿವುಡ್ ಸ್ಟುಡಿಯೋಸ್ ಗೆ ನೀಡಿದ್ದ ನೋಟೀಸ್ ವಿರುದ್ಧವಾಗಿದೆ . ಸ್ಟುಡಿಯೋ ಮಾಲೀಕರು ಈ ಎರಡೂ ಆದೇಶಗಳನ್ನು ರದ್ದುಗೊಳಿಸಿ,ತುರ್ತು ವಿಚಾರಣೆ ನಡೆಸುವಂತೆ ಕೋರ್ಟಗೆ ಮನವಿ ಮಾಡಿದ್ದಾರೆ.
ಅಕ್ಟೋಬರ್ 6 ರಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ಟುಡಿಯೋಗೆ ನೋಟೀಸ್ ನೀಡಿತ್ತು. ಈ ನೋಟೀಸ್ನಲ್ಲಿ, ಸ್ಟುಡಿಯೋವು ಜಲ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣಾ ಕಾಯ್ದೆ, 1974 ಮತ್ತು ವಾಯು ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯ್ದೆ, 1998 ಅಡಿಯಲ್ಲಿ ಅಗತ್ಯವಿರುವ ಅನುಮತಿಗಳನ್ನು ಪಡೆಯದೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಲಾಗಿತ್ತು . ದಿನವಹಿ 2.5 ಲಕ್ಷ ಲೀಟರ್ ನೀರು ಬಳಕೆಯಾಗುತ್ತಿದ್ದು, ಈ ತ್ಯಾಜ್ಯ ನೀರನ್ನು ಸರಿಯಾಗಿ ಶುದ್ಧೀಕರಿಸದೆ ನೇರವಾಗಿ ಪರಿಸರಕ್ಕೆ ಬಿಡುತ್ತಿದ್ದಾರೆ ಎಂದು ಆರೋಪವಿತ್ತು . ಇದರ ಪರಿಣಾಮವಾಗಿ, ಅಕ್ಟೋಬರ್ 7 ರಂದು ರಾಮನಗರ ಜಿಲ್ಲಾಡಳಿತ ಅಧಿಕಾರಿಗಳು ಸ್ಟುಡಿಯೋವನ್ನು ಸೀಲ್ ಮಾಡಿದರು .
ಸ್ಟುಡಿಯೋ ಸೀಲ್ ಆದ ನಂತರ, ಶೋದ 17 ಮಂದಿ ಸ್ಪರ್ಧಿಗಳನ್ನು ಬಿಡದಿಯಲ್ಲಿರುವ ಈಗಲ್ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಲಾಯಿತು. ಸ್ಪರ್ಧಿಗಳಿಗೆ ಮೊಬೈಲ್ ಫೋನ್ ಮತ್ತು ಟೆಲಿವಿಷನ್ ಬಳಕೆಯ ಮೇಲೆ ನಿರ್ಬಂಧವನ್ನು ಹೇರಲಾಗಿದೆ ಎಂದು ತಿಳಿದುಬಂದಿದೆ . ಈ ನಡುವೆ, ಚಿತ್ರೀಕರಣ ಸ್ಥಗಿತಗೊಂಡಿದ್ದರೂ, ಮುಂಚೆ ರೆಕಾರ್ಡ್ ಆಗಿದ್ದ ದೃಶ್ಯಗಳನ್ನು ಬಳಸಿಕೊಂಡು ಶೋದ ಪ್ರಸಾರ ಮುಂದುವರೆಸಲಾಗುತ್ತಿದೆ.
ಈ ವಿವಾದದ ಬಗ್ಗೆ ಕರ್ನಾಟಕದ ಅರಣ್ಯ ಮತ್ತು ಪರಿಸರ ಮಂತ್ರಿ ಈಶ್ವರ ಖಂಡ್ರೆ ಅವರು ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರು ನೀಡಿದ ಪ್ರತಿಕ್ರಿಯೆಯಲ್ಲಿ, “ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪರಿಸರ ಕಾಯ್ದೆ ಉಲ್ಲಂಘಿಸಿದರೆ ಕ್ರಮ ಅನಿವಾರ್ಯ” ಎಂದು ತಿಳಿಸಿದ್ದಾರೆ . ಸ್ಟುಡಿಯೋ ವಿರುದ್ಧ ಮಂಡಳಿಯು ಎರಡು ಬಾರಿ ನೋಟೀಸ್ ನೀಡಿದ್ದರೂ, ಅದನ್ನು ಪಾಲಿಸಲಾಗಿಲ್ಲ ಎಂದೂ ಅವರು ಸೂಚಿಸಿದ್ದಾರೆ.