ಕಾಂತಾರ-1 ಸಿನಿಮಾಗಾಗಿ ರಿಷಬ್ ಶೆಟ್ಟಿ ಒಂದು ಹೊಸ ಪ್ರಪಂಚವನ್ನೇ ಕಟ್ಟಿದ್ದಾರೆ. ಕದಂಬ ಸಾಮ್ರಾಜ್ಯವನ್ನು ಮರುಸೃಷ್ಠಿಸಿರೋ ಶೆಟ್ರು, ನಾಗಸಾಧು ಆಗಿ ನೋಡುಗರಿಗೆ ರೋಮಾಂಚಕ ವಿಷಯಗಳ ಜೊತೆ ಬರ್ತಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೂ ಸಿನಿಮಾದ ರನ್ ಟೈಂ ಎಷ್ಟು..? ಚಿತ್ರದಲ್ಲಿರೋ ಟಾಪ್ ಮೋಸ್ಟ್ ಸೀಕ್ರೆಟ್‌ಗಳು ಏನು ಅನ್ನೋದ್ರ ಎಕ್ಸ್‌ಕ್ಲೂಸಿವ್ ಸ್ಟೋರಿ ನಿಮಗಾಗಿ ಕಾಯ್ತಿದೆ.
ದಂತಕಥೆ ಕಾಂತಾರ ನಿಮಗೆಲ್ಲಾ ಗೊತ್ತೇಯಿದೆ. ಇದೀಗ ಅದರ ಹಿಂದಿರೋ ಅಸಲಿ ವಿಷಯಗಳನ್ನ ಪ್ರೀಕ್ವೆಲ್ ಮೂಲಕ ಪ್ರೇಕ್ಷಕರ ಮುಂದೆ ತರ್ತಿದ್ದಾರೆ ನಟ, ನಿರ್ದೇಶಕ ರಿಷಬ್ ಶೆಟ್ಟಿ. ಇದೇ ಅಕ್ಟೋಬರ್ 2ಕ್ಕೆ ಕಾಂತಾರ ಚಾಪ್ಟರ್-1 ನಿಮ್ಮನ್ನ ರಂಜಿಸಲು ಬರ್ತಿದೆ. ಇದು ಬರೀ ಮನರಂಜನೆ ಅಷ್ಟೇ ಅಲ್ಲ, ನೋಡುಗರಿಗೆ ರೋಮಾಂಚನ ನೀಡಬಲ್ಲಂತಹ ದೈವಿಕ ಅಂಶಗಳಿಂದ ಕೂಡಿರೋ ದೃಶ್ಯಕಾವ್ಯ.
ಕದಂಬರ ಕಾಲದ ಕಾಂತಾರ-1.. ನಾಗಸಾಧು ಆಗಿ ರಿಷಬ್..?
1725 ವರ್ಷಗಳ ಹಿಂದಿನ ಕದಂಬ ಸಾಮ್ರಾಜ್ಯ ಮರುಸೃಷ್ಠಿ..!
ಸುಮಾರು 1725 ವರ್ಷಗಳಷ್ಟು ಹಳೆಯದಾದ ಕದಂಬ ಸಾಮ್ರಾಜ್ಯರ ಕಾಲದ ಕಥಾನಕ ಇದು ಎನ್ನಲಾಗ್ತಿದೆ. ಈ ಸಿನಿಮಾಗಾಗಿ ಸುಮಾರು 25 ಎಕರೆಯಷ್ಟು ವಿಸ್ತಾರವಾದ ಭೂಮಿಯಲ್ಲಿ ಇಡೀ ಕದಂಬ ಸಾಮ್ರಾಜ್ಯವನ್ನು ಮರುಸೃಷ್ಠಿಸಿದ್ರಾ ರಿಷಬ್ ಶೆಟ್ಟಿ ಅಂತ ಎಲ್ಲರೂ ಮಾತಾಡಿಕೊಳ್ತಿದ್ದಾರೆ. ಅಂದಹಾಗೆ ಕದಂಬ ಕನ್ನಡದ ಮೊಟ್ಟ ಮೊದಲ ರಾಜ ವಂಶ. ಹಲ್ಮಿಡಿ ಶಾಸನಕ್ಕಿಂತಲೂ ಹಳೆಯದಾದ ತಾಳಗುಂದ ಕಲ್ಲಿನ ಬರಹ ಈ ಕದಂಬರ ಆಳ್ವಿಕೆಗೆ ಸೇರಿದ್ದಾಗಿದೆ.
ಮನುಷ್ಯ ಹಾಗೂ ದೈವ ಶಕ್ತಿಯ ಶ್ರೇಷ್ಠ ಸಂಬಂಧದ ಕುರಿತ ಕಥೆ
2 ಗಂಟೆ 45 ನಿಮಿಷ ರನ್ ಟೈಂ.. ಏನೆಲ್ಲಾ ಅಂಶಗಳು ಅಡಗಿವೆ ?
ಬನವಾಸಿಯ ದಟ್ಟ ಕಾಡುಗಳಲ್ಲಿ ಚಿತ್ರಿಸಿರೋ ಈ ಕಾಂತಾರ-1, ಕದಂಬರ ರಾಜಧಾನಿ ಬನವಾಸಿ ಆಗಿರೋದಕ್ಕೂ ಲಿಂಕ್ ಇದೆ. ಅಂದಹಾಗೆ ಮಯೂರ ಚಿತ್ರದಲ್ಲಿ ನಟಸಾರ್ವಭೌಮ ಡಾ ರಾಜ್‌ಕುಮಾರ್, ನಾವು ಕದಂಬರು ಅಂತ ಹೊಡೆಯುವ ಮಾಸ್ ಡೈಲಾಗ್ ಈ ಸಂದರ್ಭದಲ್ಲಿ ನೆನೆಸಿಕೊಳ್ಳಬಹುದು.
ಅಂದು ಅಣ್ಣಾವ್ರು ಬನವಾಸಿಯ ಕದಂಬರ ಚಕ್ರವರ್ತಿ ಮುಯೂರಶರ್ಮನಾಗಿ ಅಬ್ಬರಿಸಿ, ಆರ್ಭಟಿಸಿದ್ರು. ಅದಾದ ಬಳಿಕ ಇದೀಗ ಕಾಂತಾರ-1 ಚಿತ್ರದಲ್ಲಿ ಅದೇ ಕದಂಬ ಸಾಮ್ರಾಜ್ಯಕ್ಕೆ ಲಿಂಕ್ ಕೊಟ್ಟು ಸಿನಿಮಾ ಮಾಡಿದ್ದಾರೆ ರಿಷಬ್ ಶೆಟ್ಟಿ. ಕಾಂತಾರ ಚಾಪ್ಟರ್-1 ಒಬ್ಬ ನಾಗಸಾಧು ಕುರಿತ ಕಥಾನಕ ಆಗಿರಲಿದ್ದು, ಸ್ವತಃ ರಿಷಬ್ ಶೆಟ್ಟಿಯೇ ನಾಗಸಾಧು ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ಆತ ಮನುಷ್ಯ ಹಾಗೂ ದೈವಿಕ ಶಕ್ತಿಗಳಿಗೆ ಕೊಂಡಿಯಾಗಿದ್ದುಕೊಂಡು ಆ ಪವಿತ್ರವಾದ ಸಂಬಂಧಗಳನ್ನ ಎಳೆ ಎಳೆಯಾಗಿ ಬಿಚ್ಚಿಡೋ ಕಾರ್ಯ ಮಾಡಿದ್ದಾರಂತೆ.
ಆಧ್ಯಾತ್ಮ ಹಾಗೂ ಧಾರ್ಮಿಕ ಬದ್ದತೆಯಿಂದ ಕೂಡಿರೋ ಅಂಶಗಳ ಜೊತೆಗೆ ನಂಬಿಕೆ, ಭಕ್ತಿ, ಧಾರ್ಮಿಕ ಸಂಬಂಧಗಳ ಅನಾವರಣವೂ ಇಲ್ಲಿ ಆಗಲಿದೆಯಂತೆ. ಅಂದಹಾಗೆ ಕಾಂತಾರ ಸಿನಿಮಾ ಕ್ಲಿಕ್ ಆಗಿದ್ದೇ ಆ ಗುಳಿಗ ದೈವ ಹಾಗೂ ಅದ್ರ ಹಿಂದಿರೋ ಶಕ್ತಿಯಿಂದಾಗಿ. ಅದ್ರಲ್ಲೂ ರಿಷಬ್ ಶೆಟ್ಟಿಗೆ ಸ್ವತಃ ಆ ದೈವವೇ ಮೈ ಮೇಲೆ ಬಂದಂತೆ ವರ್ತಿಸಿದ್ರು. ಈಗಲೂ ಕೂಡ ನಾಗಸಾಧು ರೋಲ್‌ನಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠವಾದ ಪಾತ್ರಧಾರಿಯಾಗಿ ರಿಷಬ್ ಹೊರಹೊಮ್ಮಲಿದ್ದಾರೆ.
ಕಾಂತಾರ ಚಾಪ್ಟರ್-1 ರನ್ ಟೈಮ್ ಎಷ್ಟಿದೆ ಅನ್ನೋ ಕ್ಯೂರಿಯಾಸಿಟಿಗೂ ತೆರೆ ಬಿದ್ದಿದ್ದು, 2 ಗಂಟೆ 45 ನಿಮಿಷಗಳಷ್ಟು ದೊಡ್ಡ ಸಿನಿಮಾ ಅಂತಿದ್ದಾರೆ. ಹೊಂಬಾಳೆ ಫಿಲಂಸ್ ಈ ಸಿನಿಮಾನ ತುಂಬಾ ರಿಚ್ ಆಗಿ ನಿರ್ಮಾಣ ಮಾಡಿದ್ದು, ತುಂಬಾ ಸ್ವಾಭಾವಿಕ ಹಾಗೂ ಸಹಜತೆಯಿಂದ ದೃಶ್ಯಗಳು ಕೂಡಿರಲಿದೆಯಂತೆ. ಇಲ್ಲಿ ರಿಷಬ್‌ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದು, ಮಲಯಾಳಂನ ಜಯರಾಮ್, ಬಾಲಿವುಡ್‌ನ ಗುಲ್ಶನ್ ದೇವಯ್ಯ ಸೇರಿದಂತೆ ಬಹುಭಾಷಾ ಕಲಾವಿದರ ದಂಡು ಈ ಚಿತ್ರದಲ್ಲಿರಲಿದೆ. ಅಕ್ಟೋಬರ್ 2ಕ್ಕೆ ವಿಶ್ವದಾದ್ಯಂತ ಕಾಂತಾರ-1 ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, ಪ್ರೀ-ರಿಲೀಸ್ ಬ್ಯುಸಿನೆಸ್ ಮೂಲಕ ಎಲ್ಲರ ಹುಬ್ಬೇರಿಸಿದೆ.