ಚಿಕ್ಕಬಳ್ಳಾಪುರ, ಆಗಸ್ಟ್ 03, 2025: ಫ್ರೆಂಡ್‌ಶಿಪ್ ಡೇ ಹಿನ್ನಲೇ ನಂದಿ ಬೆಟ್ಟಕ್ಕೆ ಹೋಗಿದ್ದ ಯುವಕರಿಬ್ಬರು ಬೈಕ್ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ನಡೆದಿದೆ. ಮೃತರನ್ನು ಚಿಕ್ಕಬಳ್ಳಾಪುರ ತಾಲೂಕಿನ ಕಣಿತಹಳ್ಳಿ ನಿವಾಸಿ ಅರವಿಂದ್ (21) ಮತ್ತು ನಂದಗುಡಿ ಮೂಲದ ಶ್ರೀಕಾಂತ್ (21) ಎಂದು ಗುರತಿಸಲಾಗಿದೆ.
ಘಟನೆಯ ವಿವರ
ಪ್ರೆಂಡ್‌ಶಿಪ್ ಡೇ ಆಚರಣೆಗಾಗಿ ಸ್ನೇಹಿತರ ತಂಡವೊಂದು ಇಂದು ಚಿಕ್ಕಬಳ್ಳಾಪುರದ ಜನಪ್ರಿಯ ಪ್ರವಾಸಿ ತಾಣವಾದ ನಂದಿ ಬೆಟ್ಟಕ್ಕೆ ಭೇಟಿ ನೀಡಿದರು. ಬೆಟ್ಟದಿಂದ ಕೆಳಗಿಳಿಯುವ ವೇಳೆ ಈ ದುರಂತ ಸಂಭವಿಸಿದೆ. ಅರವಿಂದ್ ಮತ್ತು ಶ್ರೀಕಾಂತ್ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. 18ನೇ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ, ರಸ್ತೆಯ ಬದಿಯ ಕಲ್ಲಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಸ್ಥಳಕ್ಕೆ ತಕ್ಷಣವೇ ಆಗಮಿಸಿದ ನಂದಿ ಗಿರಿಧಾಮ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅರವಿಂದ್, ತಿರುಮಲಪ್ಪ ಮತ್ತು ಮುನಿಲಕ್ಷ್ಮಮ್ಮ ದಂಪತಿಗಳ ಏಕೈಕ ಪುತ್ರನಾಗಿದ್ದ. ಶ್ರೀಕಾಂತ್ ಮತ್ತು ಅರವಿಂದ್ ಒಂದೇ ಕುಟುಂಬದ ಬಾವ-ಬಾಮೈದರಾಗಿದ್ದರು. ಈ ದುರಂತ ಇಡೀ ಕುಟುಂಬಕ್ಕೆ ಭಾರೀ ಆಘಾತವನ್ನುಂಟು ಮಾಡಿದೆ. “ನಮ್ಮ ಏಕೈಕ ಮಗನನ್ನು ಕಳೆದುಕೊಂಡೆವು. ಅವನಿಲ್ಲದೆ ಜೀವನ ಊಹಿಸಲಾಗದು,” ಎಂದು ಅರವಿಂದನ ತಾಯಿ ಮುನಿಲಕ್ಷ್ಮಮ್ಮ ಕಣ್ಣೀರಿಟ್ಟಿದ್ದಾರೆ.





