ಬೆಂಗಳೂರು: ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ (Gali Anjaneya Temple) ಆಡಳಿತವನ್ನು ಮುಜರಾಯಿ ಇಲಾಖೆ(Muzrai Department) ತನ್ನ ವಶಕ್ಕೆ ತೆಗೆದುಕೊಂಡಿದೆ. ದೇವಾಲಯದ ನಿರ್ವಹಣೆಯಲ್ಲಿ ಹಣದ ದುರುಪಯೋಗ ಮತ್ತು ಅವ್ಯವಸ್ಥೆ ಕಂಡುಬಂದಿದ್ದರಿಂದ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ. ದೇವಾಲಯದ ಟ್ರಸ್ಟ್ ಮಂಡಳಿ ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ನಲ್ಲಿ (Karnataka High Court) ಮನವಿ ಸಲ್ಲಿಸಿತ್ತು. ಆದರೆ, ನ್ಯಾಯಮೂರ್ತಿ ಸುನೀಲ್ ದತ್ತ್ ಯಾದವ್ ಅವರ ಪೀಠವು ಸರ್ಕಾರದ ನಡವಳಿಕೆಯನ್ನು ಸರಿ ಎಂದು ಪರಿಗಣಿಸಿ, ಟ್ರಸ್ಟ್‌ಗೆ ತಡೆಯಾಜ್ಞೆ ನಿರಾಕರಿಸಿದೆ.
ಕಳೆದ ವರ್ಷ ದೇವಸ್ಥಾನದ ಹುಂಡಿ ಹಣ ಎಣಿಕೆ ವೇಳೆ ಆಡಳಿತ ಮಂಡಳಿಯ ಕೆಲವು ಸದಸ್ಯರು ಹಣವನ್ನು ದುರುಪಯೋಗ ಮಾಡಿರುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆಯ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರವು ಮುಜರಾಯಿ ಇಲಾಖೆಗೆ ಸೂಚನೆ ನೀಡಿತ್ತು. ತನಿಖೆ ವರದಿಯಲ್ಲಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ವರ್ಗಾಯಿಸುವ ಶಿಫಾರಸು ಮಾಡಲಾಗಿತ್ತು. ಈ ಶಿಫಾರಸನ್ನು ಒಪ್ಪಿಕೊಂಡ ಸರ್ಕಾರವು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997ರ ಕಲಂ 42 ಮತ್ತು 43ರನ್ವಯ ಗಾಳಿ ಆಂಜನೇಯ ದೇವಸ್ಥಾನವನ್ನು “ಘೋಷಿತ ಸಂಸ್ಥೆ” ಎಂದು ಘೋಷಿಸಿತ್ತು.
ಸರ್ಕಾರದ ಆದೇಶದ ಪ್ರಕಾರ, ಬ್ಯಾಟರಾಯನಪುರದಲ್ಲಿರುವ ಶ್ರೀ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಅವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ ಎಂಬುದು ತನಿಖೆಯಲ್ಲಿ ಕಂಡುಬಂದಿದೆ. ಟ್ರಸ್ಟ್‌ನಿಂದ ಹಣ ದುರುಪಯೋಗ ಮತ್ತು ನಿರ್ವಹಣೆಯಲ್ಲಿ ಕೊರತೆ ಇದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣಕ್ಕೆ, ದೇವಾಲಯದ ಆಡಳಿತವನ್ನು ಸರ್ಕಾರವು ತನ್ನ ವಶಕ್ಕೆ ತೆಗೆದುಕೊಂಡಿದೆ. ಈಗಾಗಲೇ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯಪಾಲಕ ಅಧಿಕಾರಿ ನಾರಾಯಣಸ್ವಾಮಿ ಅವರು ದೇವಾಲಯದ ಆಡಳಿತವನ್ನು ವಹಿಸಿಕೊಂಡಿದ್ದಾರೆ.
ಈ ನಿರ್ಧಾರವನ್ನು ದೇವಾಲಯದ ಆಡಳಿತ ಮಂಡಳಿಯು ತೀವ್ರವಾಗಿ ಖಂಡಿಸಿದೆ. “ನಮ್ಮ ಪೂರ್ವಿಕರಿಂದ ದೇವಸ್ಥಾನದ ಆಡಳಿತವನ್ನು ನಾವು ನಿರ್ವಹಿಸಿಕೊಂಡು ಬಂದಿದ್ದೇವೆ. ದೇವಾಲಯದ ಅಭಿವೃದ್ಧಿಗಾಗಿ ದಶಕಗಳಿಂದ ಶ್ರಮಿಸಿದ ನಮಗೆ ಈ ಕ್ರಮದಿಂದ ಅನ್ಯಾಯವಾಗಿದೆ,” ಎಂದು ಟ್ರಸ್ಟ್ ಸದಸ್ಯರು ಮತ್ತು ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





