ಕೆಜಿಎಫ್, ಕಾಂತಾರ ಚಿತ್ರಗಳ ಬಳಿಕ ಸೌತ್ ಸಿನಿದುನಿಯಾಗೆ ಲಗ್ಗೆ ಇಟ್ಟಿದ್ದ ಹೊಂಬಾಳೆ ಫಿಲಂಸ್, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬಾಲಿವುಡ್‌ನ ಸೂಪರ್ ಸ್ಟಾರ್‌ಗೆ ಸಿನಿಮಾ ಮಾಡೋಕೆ ಮುಂದಾಗಿದೆ.
ಹೊಂಬಾಳೆ ಫಿಲಂಸ್ ಕೆಜಿಎಫ್, ಕಾಂತಾರ ಸಿನಿಮಾಗಳಿಂದ ನೂರಾರು ಕೋಟಿ ಗಳಿಸುವ ಮೂಲಕ, ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಹೆಮ್ಮೆಯ ಕನ್ನಡ ಪ್ರೊಡಕ್ಷನ್ ಹೌಸ್. ವಿಜಯ್ ಕಿರಗಂದೂರು ಹಾಗೂ ಚೆಲುವೆ ಗೌಡ ಕಟ್ಟಿದ ಹೊಂಬಾಳೆ ಫಿಲಂಸ್‌ಗೆ 11 ವರ್ಷ. ಒಂದೇ ದಶಕದಲ್ಲಿ ಇದು ಹಂತ ಹಂತವಾಗಿ ಇಂಟರ್‌ನ್ಯಾಷನಲ್ ಸಿನಿಮಾಗಳನ್ನ ಮಾಡುವ ಮಟ್ಟಕ್ಕೆ ಬೆಳೆದು ನಿಂತಿರೋದು ಇಂಟರೆಸ್ಟಿಂಗ್.
2014-15ರಲ್ಲಿ ನಿನ್ನಿಂದಲೇ ಹಾಗೂ ಮಾಸ್ಟರ್‌ಪೀಸ್ ಸಿನಿಮಾಗಳನ್ನ ಮಾಡಿ ಕೈಸುಟ್ಟಿಕೊಂಡಿತ್ತು ಹೊಂಬಾಳೆ ಫಿಲಂಸ್. ನಂತ್ರ ಕಳೆದುಕೊಂಡಲ್ಲೇ ಹುಡುಕಿಕೊಳ್ಳಬೇಕು ಅನ್ನೋ ಮಾತಿನಂತೆ ಮತ್ತದೇ ಅಪ್ಪು ಹಾಗೂ ಯಶ್ ಜೊತೆ ರಾಜಕುಮಾರ, ಕೆಜಿಎಫ್ ಸಿನಿಮಾಗಳನ್ನ ಮಾಡಿ ಸಾವಿರಾರು ಕೋಟಿ ವ್ಯವಹಾರ ಮಾಡಿತು. ಬಾಲಿವುಡ್ ಪ್ರೊಡಕ್ಷನ್ ಬ್ಯಾನರ್‌ಗಳೆಲ್ಲಾ ಕನ್ನಡದತ್ತ ತಲೆ ಎತ್ತಿ ನೋಡುವಂತೆ ಮಾಡಿತು.
ಸಲಾರ್ ಸಿನಿಮಾ ಮೂಲಕ ತೆಲುಗು, ರಘು ತಾತ ಚಿತ್ರದಿಂದ ತಮಿಳು, ಧೂಮಂ ಚಿತ್ರದಿಂದ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುವ ಮುಖೇನ ಕಂಪ್ಲೀಟ್ ಸೌತ್ ಸಿನಿದುನಿಯಾ ಕವರ್ ಮಾಡಿತ್ತು ಹೊಂಬಾಳೆ. ಇದೀಗ ಕಾಂತಾರ-1, ಸಲಾರ್-2ಗೂ ಮೊದಲೇ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಜೊತೆ ಸಿನಿಮಾ ಅನೌನ್ಸ್ ಮಾಡಿದೆ. ಕ್ರಿಶ್ ಹಾಗೂ ವಾರ್ ಸಿನಿಮಾಗಳ ಖ್ಯಾತಿಯ ನಟ, ನಿರ್ದೇಶಕ ಹೃತಿಕ್ ನಮ್ಮ ಕನ್ನಡದ ನಿರ್ಮಾಣ ಸಂಸ್ಥೆ ಜೊತೆ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯದಲ್ಲೇ ಹೃತಿಕ್ ಸಿನಿಮಾದ ಹೆಚ್ಚಿನ ಅಪ್ಡೇಟ್ಸ್ ನೀಡಲಿದೆಯಂತೆ ಹೊಂಬಾಳೆ ಫಿಲಂಸ್.