ಬೆಂಗಳೂರು: ಕೆ.ಆರ್.ಪುರಂನ ಬಸವೇಶ್ವರ ನಗರದ ಗಾಯಿತ್ರಿ ಲೇಔಟ್‌ನಲ್ಲಿ 40 ವರ್ಷದ ಮಂಗಳಮುಖಿ ತನುಶ್ರೀ ಅವರನ್ನು ಮಾರಕಾಸ್ತ್ರದಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಘಟನೆಯು ತನುಶ್ರೀ ಅವರ ಮನೆಯಲ್ಲಿ ನಡೆದಿದ್ದು, ಕೃತ್ಯವು ಕಳೆದ ಮೂರು ದಿನಗಳ ಹಿಂದೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ತನುಶ್ರೀ ಕಳೆದ ಮೂರು ತಿಂಗಳ ಹಿಂದೆ ಜಗನ್ನಾತ್ ಎಂಬಾತನೊಂದಿಗೆ ವಿವಾಹವಾಗಿದ್ದರು. ಕೃತ್ಯದ ಬಳಿಕ ಜಗನ್ನಾತ್ ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾನೆ.
ತನುಶ್ರೀ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತೆಯಾಗಿದ್ದು, ಸಂಗಮ ಎನ್‌ಜಿಒವನ್ನು ನಡೆಸುತ್ತಿದ್ದರು. ಕನ್ನಡ ಪರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಕೋಟಿ ಕೋಟಿ ಆಸ್ತಿಯನ್ನು ಹೊಂದಿದ್ದರು ಎಂದು ಮಾಹಿತಿ ತಿಳಿದುಬಂದಿದೆ.
ಕೆ.ಆರ್.ಪುರಂ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರಿದಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.





