ಬೆಂಗಳೂರು/ಧಾರವಾಡ (ಏಪ್ರಿಲ್ 15, 2026): ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಅವರ ಕೊಲೆ ಪ್ರಕರಣಕ್ಕೆ ಇಂದು ನ್ಯಾಯಾಂಗವು ಮಹತ್ವದ ತೀರ್ಪು ನೀಡಿದೆ. ಸತತ 10 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 19 ಮಂದಿ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ.
ಒಟ್ಟು 21 ಆರೋಪಿಗಳ ಪೈಕಿ ಇಬ್ಬರು ಮಾಫಿಸಾಕ್ಷಿಗಳಾದ (approvers) ಹಿನ್ನೆಲೆ, ನ್ಯಾಯಾಲಯವು ಉಳಿದ 19 ಮಂದಿ ವಿರುದ್ಧವೇ ತೀರ್ಪು ಪ್ರಕಟಿಸಿದೆ. ದೋಷಿಗಳ ಪಟ್ಟಿಯಲ್ಲಿ ಎ15 ನೇ ಆರೋಪಿಯಾಗಿರುವ ವಿನಯ್ ಕುಲಕರ್ಣಿ ಪ್ರಮುಖ ಹೆಸರಾಗಿದ್ದಾರೆ. ಈ ತೀರ್ಪಿನೊಂದಿಗೆ, 2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯ ಜಿಮ್‌ನಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದ ಯೋಗೇಶ್ ಗೌಡರ ಕುಟುಂಬಕ್ಕೆ 10 ವರ್ಷಗಳ ಬಳಿಕ ನ್ಯಾಯ ದೊರಕಿದಂತಾಗಿದೆ.
ಪ್ರಕರಣದ ಹಿನ್ನೆಲೆ
2016ರ ಜೂನ್ 15ರಂದು ಧಾರವಾಡದ ಸಪ್ತಾಪುರದ ಜಿಮ್‌ನಲ್ಲಿ ದುಷ್ಕರ್ಮಿಗಳು ಯೋಗೇಶ್ ಗೌಡರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂದು ಆರಂಭದಲ್ಲಿ ಪೊಲೀಸರು ತನಿಖೆ ನಡೆಸಿದ್ದರು. ಆರು ಮಂದಿ ಆರೋಪಿಗಳು ಪೊಲೀಸರ ಮುಂದೆ ಶರಣಾಗಿದ್ದರು. ಆದರೆ, ಯೋಗೇಶ್ ಗೌಡರ ಕುಟುಂಬಸ್ಥರು ನ್ಯಾಯದ ಮೇಲಿನ ಅನುಮಾನ ವ್ಯಕ್ತಪಡಿಸಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು. 2019ರಲ್ಲಿ ರಾಜ್ಯ ಸರ್ಕಾರವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತು.
ಸಿಬಿಐ ತನಿಖೆ ಮತ್ತು ಬಂಧನ
ಸಿಬಿಐ ತನಿಖೆಯಲ್ಲಿ ಈ ಕೊಲೆ ಹಿಂದೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಕೈವಾಡವಿದೆ ಎಂಬುದು ಬೆಳಕಿಗೆ ಬಂದಿತ್ತು. 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ತನಿಖೆ ಮುಂದುವರಿದಂತೆ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು. ಇತ್ತೀಚೆಗೆ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಆದರೆ, ಇಂದಿನ ತೀರ್ಪು ಅವರ ಮೇಲಿನ ದೋಷಾರೋಪವನ್ನು ಸಾಬೀತುಪಡಿಸಿದೆ.




