ನವದೆಹಲಿ: ಇನ್ಮುಂದೆ ವಿದ್ಯುತ್ ಬಳಸುವ ಸಮಯವೂ ನಿಮ್ಮ ಕರೆಂಟ್ ಬಿಲ್ ನಿರ್ಧರಿಸಲಿದೆ! ಹೌದು, ವಿದ್ಯುತ್ ಬಳಕೆಯ ಆಧಾರದ ಮೇಲೆ ಮಾತ್ರವಲ್ಲದೆ, ದಿನದ ಯಾವ ಸಮಯದಲ್ಲಿ ವಿದ್ಯುತ್ ಬಳಸಲಾಗಿದೆ ಎಂಬುದನ್ನೂ ಪರಿಗಣಿಸಿ ಶುಲ್ಕ ವಿಧಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಕೇಂದ್ರ ವಿದ್ಯುತ್ ಸಚಿವಾಲಯವು ‘ಟೈಮ್ ಆಫ್ ದಿ ಡೇ’ (Time of the Day – ToD) ದರ ನಿಗದಿ ನಿಯಮಾವಳಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಈ ಹೊಸ ವ್ಯವಸ್ಥೆ ಜಾರಿಗೆ ಬಂದರೆ ಗ್ರಾಹಕರು ದಿನದ ವಿವಿಧ ಸಮಯಗಳಲ್ಲಿ ಬಳಸುವ ವಿದ್ಯುತ್‌ಗೆ ಬೇರೆ ಬೇರೆ ದರ ಪಾವತಿಸಬೇಕಾಗುತ್ತದೆ. ಅಂದರೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ವಿದ್ಯುತ್ ಬಳಕೆಗೆ ಒಂದೇ ರೀತಿಯ ಶುಲ್ಕ ಇರುವುದಿಲ್ಲ. ವಿದ್ಯುತ್ ಬೇಡಿಕೆ ಹೆಚ್ಚಿರುವ ಸಮಯದಲ್ಲಿ ಹೆಚ್ಚಿನ ದರ ಹಾಗೂ ಬೇಡಿಕೆ ಕಡಿಮೆ ಇರುವ ಸಮಯದಲ್ಲಿ ಕಡಿಮೆ ದರ ವಿಧಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಏನಿದು ಟೈಮ್ ಆಫ್ ದಿ ಡೇ (ToD) ನಿಯಮ?
ಸಾಮಾನ್ಯವಾಗಿ ಗ್ರಾಹಕರು ತಿಂಗಳಿನಲ್ಲಿ ಎಷ್ಟು ಯೂನಿಟ್ ವಿದ್ಯುತ್ ಬಳಸಿದ್ದಾರೆ ಎಂಬುದರ ಆಧಾರದ ಮೇಲೆ ವಿದ್ಯುತ್ ಬಿಲ್ ಲೆಕ್ಕ ಹಾಕಲಾಗುತ್ತದೆ. ಆದರೆ ಹೊಸ ToD ವ್ಯವಸ್ಥೆಯಲ್ಲಿ ವಿದ್ಯುತ್ ಬಳಕೆಯ ಪ್ರಮಾಣದ ಜೊತೆಗೆ ಬಳಕೆಯ ಸಮಯಕ್ಕೂ ಮಹತ್ವ ನೀಡಲಾಗುತ್ತದೆ.
ಉದಾಹರಣೆಗೆ, ಸಂಜೆ ವೇಳೆಯಲ್ಲಿ ಮನೆಗಳು, ಕಚೇರಿಗಳು ಹಾಗೂ ಕೈಗಾರಿಕೆಗಳಲ್ಲಿ ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿರುವುದರಿಂದ ವಿದ್ಯುತ್ ವಿತರಣಾ ವ್ಯವಸ್ಥೆಯ ಮೇಲೆಯೂ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇಂತಹ ಗರಿಷ್ಠ ಬೇಡಿಕೆಯ ಸಮಯದಲ್ಲಿ ಬಳಸುವ ವಿದ್ಯುತ್‌ಗೆ ಹೆಚ್ಚಿನ ದರ ವಿಧಿಸಲು ಹೊಸ ನಿಯಮ ಅವಕಾಶ ಕಲ್ಪಿಸುತ್ತದೆ.
ಇದಕ್ಕೆ ವಿರುದ್ಧವಾಗಿ ವಿದ್ಯುತ್ ಬೇಡಿಕೆ ಕಡಿಮೆ ಇರುವ ಸಮಯದಲ್ಲಿ ಗ್ರಾಹಕರು ವಿದ್ಯುತ್ ಬಳಸಿದರೆ ಕಡಿಮೆ ಶುಲ್ಕ ವಿಧಿಸುವ ವ್ಯವಸ್ಥೆ ಇರಲಿದೆ. ಇದರಿಂದ ಗ್ರಾಹಕರು ತಮ್ಮ ವಿದ್ಯುತ್ ಬಳಕೆಯ ಸಮಯವನ್ನು ಬದಲಾಯಿಸಿಕೊಳ್ಳಲು ಪ್ರೋತ್ಸಾಹ ಸಿಗಲಿದೆ.
ಹಗಲು, ರಾತ್ರಿ ವಿದ್ಯುತ್ ದರದಲ್ಲಿ ವ್ಯತ್ಯಾಸ!
ಹೊಸ ನಿಯಮದ ಪ್ರಮುಖ ಉದ್ದೇಶ ವಿದ್ಯುತ್ ಬೇಡಿಕೆಯನ್ನು ದಿನದ ವಿವಿಧ ಅವಧಿಗಳಿಗೆ ಹಂಚಿಕೆ ಮಾಡುವುದು. ಸಾಮಾನ್ಯವಾಗಿ ಗರಿಷ್ಠ ಬೇಡಿಕೆ ಇರುವ ಸಮಯದಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ವಿದ್ಯುತ್ ಜಾಲದ ಮೇಲಿನ ಒತ್ತಡ ತಗ್ಗಿಸುವುದು ಸರ್ಕಾರದ ಉದ್ದೇಶವಾಗಿದೆ.
ಉದಾಹರಣೆಗೆ, ಹೆಚ್ಚಿನ ವಿದ್ಯುತ್ ಬಳಸುವ ವಾಷಿಂಗ್ ಮೆಷಿನ್, ವಾಟರ್ ಹೀಟರ್ ಸೇರಿದಂತೆ ಕೆಲವು ಉಪಕರಣಗಳನ್ನು ಕಡಿಮೆ ದರದ ಅವಧಿಯಲ್ಲಿ ಬಳಸುವ ಮೂಲಕ ಗ್ರಾಹಕರು ಬಿಲ್ ಮೊತ್ತವನ್ನು ನಿಯಂತ್ರಿಸಿಕೊಳ್ಳಬಹುದು. ಆದರೆ ಯಾವ ಸಮಯದಲ್ಲಿ ಎಷ್ಟು ದರ ವಿಧಿಸಲಾಗುತ್ತದೆ ಎಂಬುದನ್ನು ರಾಜ್ಯಗಳ ವಿದ್ಯುತ್ ನಿಯಂತ್ರಣ ಆಯೋಗಗಳು ನಿರ್ಧರಿಸಲಿವೆ.
2027ರ ಏಪ್ರಿಲ್‌ನಿಂದ ಹೊಸ ನಿಯಮ ಜಾರಿ
ಕೇಂದ್ರ ವಿದ್ಯುತ್ ಸಚಿವಾಲಯ ಈ ಸಂಬಂಧ ಕರಡು ನಿಯಮಾವಳಿಯನ್ನು ಸಿದ್ಧಪಡಿಸಿದೆ. ಇದರ ಪ್ರಕಾರ 2027ರ ಏಪ್ರಿಲ್ 1ರಿಂದ ಹೊಸ ToD ದರ ವ್ಯವಸ್ಥೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಆರಂಭಿಕ ಹಂತದಲ್ಲಿ 10 ಕಿಲೋವ್ಯಾಟ್‌ಗಿಂತ ಹೆಚ್ಚಿನ ಗರಿಷ್ಠ ವಿದ್ಯುತ್ ಬೇಡಿಕೆ ಹೊಂದಿರುವ ಗ್ರಾಹಕರನ್ನು ಈ ವ್ಯವಸ್ಥೆಯಡಿ ತರಲು ಯೋಜಿಸಲಾಗಿದೆ. 2028ರ ಏಪ್ರಿಲ್ 1ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಇನ್ನು ಇತರೆ ಗ್ರಾಹಕರನ್ನು 2029ರ ಏಪ್ರಿಲ್ 1ರೊಳಗೆ ಹೊಸ ದರ ವ್ಯವಸ್ಥೆಯ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. ಅಂದರೆ ಮುಂದಿನ ಕೆಲವು ವರ್ಷಗಳಲ್ಲಿ ಬಹುತೇಕ ಎಲ್ಲಾ ವಿದ್ಯುತ್ ಗ್ರಾಹಕರು ಈ ಹೊಸ ನಿಯಮದ ವ್ಯಾಪ್ತಿಗೆ ಬರಲಿದ್ದಾರೆ.
ರೈತರಿಗೆ ಹೊಸ ನಿಯಮದಿಂದ ವಿನಾಯಿತಿ
ಈ ಹೊಸ ವಿದ್ಯುತ್ ದರ ವ್ಯವಸ್ಥೆಯಿಂದ ಕೃಷಿಕ ಗ್ರಾಹಕರನ್ನು ಹೊರಗಿಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಹೀಗಾಗಿ ಕೃಷಿ ಉದ್ದೇಶಕ್ಕಾಗಿ ವಿದ್ಯುತ್ ಬಳಸುವ ಗ್ರಾಹಕರಿಗೆ ಈ ToD ನಿಯಮ ಅನ್ವಯವಾಗುವುದಿಲ್ಲ.
ಇನ್ನು ಹೊಸ ವ್ಯವಸ್ಥೆಯಲ್ಲಿ ಯಾವ ಸಮಯದಲ್ಲಿ ವಿದ್ಯುತ್ ದರ ಹೆಚ್ಚಿರಬೇಕು, ಯಾವ ಅವಧಿಯಲ್ಲಿ ಕಡಿಮೆ ಇರಬೇಕು ಹಾಗೂ ವಿವಿಧ ಗ್ರಾಹಕರಿಗೆ ಅನ್ವಯವಾಗುವ ದರಗಳೇನು ಎಂಬುದನ್ನು ನಿರ್ಧರಿಸುವ ಹೊಣೆಗಾರಿಕೆಯನ್ನು ರಾಜ್ಯಗಳ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ ನೀಡಲಾಗಿದೆ.
ಗ್ರಾಹಕರಿಗೆ ಅನುಕೂಲವಾಗುತ್ತಾ ಹೊಸ ಯೋಜನೆ?
ಕೇಂದ್ರ ಸರ್ಕಾರದ ಈ ಯೋಜನೆಯಿಂದ ಗ್ರಾಹಕರು ವಿದ್ಯುತ್ ಬಳಕೆಯ ಸಮಯವನ್ನು ಯೋಜಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದೆ. ಗರಿಷ್ಠ ಬೇಡಿಕೆಯ ಅವಧಿಯಲ್ಲಿ ಅನಗತ್ಯ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿ, ಕಡಿಮೆ ದರದ ಅವಧಿಯಲ್ಲಿ ಹೆಚ್ಚಿನ ವಿದ್ಯುತ್ ಬಳಕೆಯನ್ನು ನಿರ್ವಹಿಸಿದರೆ ಬಿಲ್ ಉಳಿತಾಯ ಮಾಡಲು ಅವಕಾಶ ಸಿಗಬಹುದು.





