ತಾನು ಆರಾಧಿಸೋ ಬಾಸ್.. ಡಿಬಾಸ್ ದರ್ಶನ್ ಜೈಲು ಸೇರಿ, ಇಲಿ ಬಿಲ ಸೇರಿದಂತೆ ಆಗಿದೆ. ಆದ್ರೆ ಶಿಷ್ಯ ಧನ್ವೀರ್ಗೆ ಮಾತ್ರ ಇಂದಿಗೂ ಬುದ್ಧಿ ಬಂದಿಲ್ಲ. ದರ್ಶನ್ ಅಂತಹ ಆಜಾನುಬಾಹುನೇ ಬಾಲ ಬಿಚ್ಚದೆ ಮೂಲೆಯಲ್ಲಿ ತೆಪ್ಪಗೆ ಕುಳಿತಿರುವಾಗ.. ಶಿಷ್ಯ ಮಾತ್ರ ಸಿಕ್ಕಾಪಟ್ಟೆ ಮೆರೆಯುತ್ತಿದ್ದಾನೆ. ಬಾಯಿ ಬಿಟ್ರೆ ಬೋ ಪದ ಸೂ ಪದ. ಅಬ್ಬಬ್ಬಾ.. ಆ ಸಂಸ್ಕೃತವನ್ನ ಕೇಳಿದ್ರೆ ಕಿವಿಯಲ್ಲಿ ರಕ್ತಸ್ತ್ರಾವ ಆಗೋದು ಗ್ಯಾರಂಟಿ. ದುರಹಂಕಾರಿ ಧನ್ವೀರನ ಎಲುಬಿಲ್ಲದ ನಾಲಿಗೆ ಮಾಡಿದ ಎಡವಟ್ ನ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ…
- ಬಾಸ್ ಬಿಲ ಸೇರಿದ್ರೂ ಬುದ್ಧಿ ಕಲಿಯದ ಶಿಷ್ಯ..ಅಬ್ಬಬ್ಬಾ.. ಏನೀ ದುರಹಂಕಾರ..?
- ಸಿಎಂ, ಪಿಎಂ, ಮಿನಿಸ್ಟರ್, ಮೀಡಿಯಾ ಯಾರಿಗೂ ರೆಸ್ಪೆಕ್ಟ್ ಇಲ್ಲ
- ಡಿಬಾಸ್ ಶಿಷ್ಯ ಅಂತ ಬಂದವ್ನು.. ಈಗ ದರ್ಶನ್ ರೀತಿ ಆಡ್ತಿದ್ದಾನೆ
- ಮಾಡಿದ್ದೇ 5 ಸಿನಿಮಾ.. ಕೇಸ್ ಮಾತ್ರ 7.. ಅಣ್ಣಂಗೆ ED ಸಂಕಷ್ಟ..!
ಮಾಡಿರೋದು ಬೆರಳೆಣಿಕೆಯಷ್ಟು ಸಿನಿಮಾಗಳಾದರೂ ಗಾಂಧಿನಗರದ ಅಂಗಳದಲ್ಲಿ ಸೃಷ್ಟಿಸಿರೋ ವಿವಾದಗಳು ಮಾತ್ರ ಬೆಟ್ಟದಷ್ಟು. ಬಾಸ್ ದರ್ಶನ್ ನೆರಳಿನಲ್ಲಿ ಬೆಳಕಿಗೆ ಬಂದ ಈ ಬಜಾರ್ ಹುಡುಗ, ಈಗ ತಾನೇ ಸ್ವತಃ ವಿವಾದಗಳ ಬಜಾರ್ ಓಪನ್ ಮಾಡಿಕೊಂಡಂತಿದೆ. ಬಾಸ್ ಜೈಲಿನಲ್ಲಿ ಕಾಲ ಕಳೆಯುತ್ತಿದ್ದರೆ, ಅವರ ಸಾಕುಶಿಷ್ಯ ಅಂತಾನೇ ಬಿಂಬಿಸಿಕೊಂಡಿದ್ದ ಧನ್ವೀರ್ ಮಾತ್ರ ಹಾದಿಬೀದಿಯಲ್ಲಿ ತನ್ನ ಅಹಂಕಾರದ ಪ್ರದರ್ಶನಕ್ಕಿಳಿದಿದ್ದಾನೆ. ಬಾಯಿಗೆ ಬಂದಂತೆ ಬೈಗುಳ, ಸಾಲು ಸಾಲು ಲೀಕ್ ಆಡಿಯೋಗಳು, ಸಿಕ್ಕ ಸಿಕ್ಕವರ ವಿರುದ್ಧ ನಾಲಿಗೆ ಹರಿಹಾಯಿಸೋ ಚಾಳಿ—ಇದೆಲ್ಲವನ್ನು ನೋಡಿದ್ರೆ ಈತನಿಗೆ ನಿಜಕ್ಕೂ ಬುದ್ಧಿ ಬಂದಿದೆಯಾ ಅನ್ನೋ ಅನುಮಾನ ಕಾಡದಿರದು.
ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ಗೆ ಫೋನ್ ಮಾಡಿ ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸಿ, ಬೆದರಿಕೆ ಹಾಕಿದ ಆರೋಪದ ಮೇಲೆ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಷ್ಟೇ ಅಲ್ಲ, 10 ಕೋಟಿಯ ವಿವಾದಾತ್ಮಕ ಜಗಳದ ಸತ್ಯಾಸತ್ಯತೆಗಳು ಈಗ ಹಾದಿ-ಬೀದಿಗೆ ಬಂದು ನಿಂತಿವೆ. ಬಾಸ್ ಇಲ್ಲದ ಸಮಯದಲ್ಲಿ ಅವರ ಕುಟುಂಬಕ್ಕೇ ಗೌರವ ಕೊಡದೆ ನಾಲಿಗೆ ಎಸೆದಿರೋ ಈತನ ದುರಹಂಕಾರ ಕಂಡು ಸ್ವತಃ ದರ್ಶನ್ ಅಭಿಮಾನಿಗಳೇ ಕೆಂಡಾಮಂಡಲವಾಗಿದ್ದಾರೆ.
ಇಷ್ಟಕ್ಕೇ ಮುಗೀತಾ ಈತನ ನಾಲಿಗೆಯ ಕಿತಾಪತಿ..? ಖಂಡಿತ ಇಲ್ಲ. ನಟ ಝೈದ್ ಖಾನ್ ವಿರುದ್ಧ ಅತ್ಯಂತ ಅಸಭ್ಯವಾಗಿ ಮಾತನಾಡಿದ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆ ಫಿಲಂ ಚೇಂಬರ್ ಅಂಗಳಕ್ಕೂ ದೂರು ತಲುಪಿದೆ. ಆಕ್ರೋಶಗೊಂಡ ಅಭಿಮಾನಿಗಳು ಧನ್ವೀರ್ ಭಾವಚಿತ್ರಕ್ಕೆ ಮಸಿ ಬಳಿದು ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ. ಮತ್ತೊಂದೆಡೆ, ರಾಜ್ಯದ ಮುಖ್ಯಮಂತ್ರಿಗಳು, ಮಾಧ್ಯಮ ಮಿತ್ರರು ಸೇರಿದಂತೆ ಪ್ರಜಾಪ್ರಭುತ್ವದ ನಾಲ್ಕೂ ರಂಗಗಳನ್ನು ಕೀಳು ಭಾಷೆಯಲ್ಲಿ ನಿಂದಿಸಿದ ಆಡಿಯೋ ವೈರಲ್ ಆಗಿ ಇಡೀ ಸ್ಯಾಂಡಲ್ವುಡ್ ತಲೆ ತಗ್ಗಿಸುವಂತೆ ಮಾಡಿದೆ.
ಮಾಡಿದ ಸಿನಿಮಾಗಳು 5, ಆದರೆ ಪೊಲೀಸ್ ಠಾಣೆಯಲ್ಲಿ ಬಿದ್ದಿರೋ ಪ್ರಕರಣಗಳು, ಎನ್ಸಿಆರ್ಗಳು ಒಂದೆರಡಲ್ಲ. ದಿನಕ್ಕೊಂದು ವಿವಾದಾತ್ಮಕ ಆಡಿಯೋ ಬಾಂಬ್ ಸಿಡಿಸುತ್ತಾ, ಕಾನೂನಿನ ಭಯವೇ ಇಲ್ಲದಂತೆ ಮೆರೆಯುತ್ತಿರುವ ಈ ನಟನಿಗೆ ಈಗ ಸಾಲು ಸಾಲು ಕೇಸ್ಗಳ ಬಿಸಿ ತಟ್ಟಲಾರಂಭಿಸಿದೆ. ಇಡಿ ತನಿಖೆಯ ಭೀತಿಯ ಜೊತೆಗೆ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರ ನೋಟಿಸ್ ಬೆನ್ನತ್ತಿದ್ದು, ಯಾವ ಕ್ಷಣದಲ್ಲಾದರೂ ಅರೆಸ್ಟ್ ಆಗೋ ಭೀತಿ ಎದುರಾಗಿದೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಮಾತಿದೆ, ಆದ್ರೆ ಬಣ್ಣದ ಲೋಕಕ್ಕೆ ಬಂದು 7ವರ್ಷ ಕಳೆಯುವಷ್ಟರಲ್ಲೇ ಇಷ್ಟೊಂದು ಅಹಂಕಾರ ಹಾಗೂ ಸಂಸ್ಕಾರವಿಲ್ಲದ ಮಾತುಗಳನ್ನು ಆಡುತ್ತಿರುವ ಈ ಶೋಕ್ದಾರ್ ಗೆ ಸೂಕ್ತ ಪಾಠ ಕಲಿಸಲೇಬೇಕು ಅನ್ನೋ ಧ್ವನಿ ಗಟ್ಟಿಯಾಗುತ್ತಿದೆ. ಖದರ್ ತೋರಿಸಲು ಹೋಗಿ ಸಾಲು ಸಾಲು ಕೇಸ್ಗಳಲ್ಲಿ ಸಿಲುಕಿರುವ ಈ ಶೋಕ್ದಾರ್ಗೆ ಈಗ ಜೈಲಿನ ಸರಳುಗಳೇ ಸ್ವಾಗತ ಕೋರುತ್ತಿವೆ. ಬಾಸ್ ದಾರಿಯಲ್ಲೇ ಸಾಗುತ್ತಿರುವ ಈ ದುರಹಂಕಾರಿ ಶಿಷ್ಯನಿಗೆ ನ್ಯಾಯಾಲಯದಲ್ಲಿ ತಕ್ಕ ಪಾಠ ಕಾದಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





