ನವದೆಹಲಿ: ಗ್ರಾಹಕ ಮಾಡಿದ ಅವಮಾನಕ್ಕೆ ಬೇಸತ್ತು ಡೆಲಿವರಿ ಬಾಯ್ಯೊಬ್ಬ ವಿಷ ಸೇವಿಸಿ ಮೃತಪಟ್ಟಿರುವ ದಾರುಣ ಘಟನೆ ದೆಹಲಿಯ ವಿನೋದ್ ನಗರದಲ್ಲಿ ನಡೆದಿದೆ. ಸಮೀರ್ ಹುಸೇನ್ ಮೃತಪಟ್ಟ ಯುವಕ. ಕಾಫಿ ಡೆಲಿವರಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಹರಿದ ನೋಟನ್ನು ಸ್ವೀಕರಿಸಲು ನಿರಾಕರಿಸಿದ್ದೇ ವಿವಾದಕ್ಕೆ ಕಾರಣವಾಯಿತು.
ಮಾಹಿತಿಯ ಪ್ರಕಾರ, ಅಕ್ಟೋಬರ್ 4ರಂದು ರಾತ್ರಿ ಸಮೀರ್ ಹುಸೇನ್ ಕಾಫಿ ಡೆಲಿವರಿ ಮಾಡಲು ತೆರಳಿದ್ದರು. ಈ ವೇಳೆ ಗ್ರಾಹಕ ನೀಡಿದ ಹರಿದ ನೋಟನ್ನು ಪಡೆಯಲು ಅವರು ನಿರಾಕರಿಸಿ, ಬದಲಾಗಿ ಆನ್ಲೈನ್ ಮೂಲಕ ಹಣ ಪಾವತಿಸುವಂತೆ ಮನವಿ ಮಾಡಿದ್ದರು. ಆದರೆ, ಈ ಸಣ್ಣ ಹಣಕಾಸಿನ ವಿಚಾರದ ಬಳಿಕ ಈ ವಿವಾದಕ್ಕೆ ತಿರುಗಿತು ಎನ್ನಲಾಗಿದೆ.
ಹರಿದ ನೋಟಿನ ವಿಚಾರಕ್ಕೆ ಶುರುವಾದ ಜಗಳ
ಅಕ್ಟೋಬರ್ 4ರಂದು ರಾತ್ರಿ 11.03ರ ಸುಮಾರಿಗೆ ಸಮೀರ್ ಕಾಫಿ ಡೆಲಿವರಿ ಮಾಡಿದ್ದರು. ಈ ವೇಳೆ ಗ್ರಾಹಕ ಹಣ ಪಾವತಿಸಲು ಹರಿದ ನೋಟನ್ನು ನೀಡಿದ್ದಾನೆ ಎನ್ನಲಾಗಿದೆ. ಹರಿದ ನೋಟನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ಸಮೀರ್, ಆನ್ಲೈನ್ ಪಾವತಿ ಮಾಡುವಂತೆ ಕೇಳಿಕೊಂಡಿದ್ದರು.
ಆದರೆ, ತನ್ನ ಬಳಿ ಆನ್ಲೈನ್ ಪಾವತಿ ವ್ಯವಸ್ಥೆ ಇಲ್ಲ ಎಂದು ಗ್ರಾಹಕ ಹೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಸುಮಾರು 15 ನಿಮಿಷಗಳ ಕಾಲ ಸಮೀರ್ ಅವರನ್ನು ಸತಾಯಿಸಿದ ಬಳಿಕವೂ ಹರಿದ ನೋಟನ್ನೇ ಸ್ವೀಕರಿಸುವಂತೆ ಒತ್ತಾಯಿಸಿದ್ದ ಎಂಬ ಆರೋಪ ಕೇಳಿಬಂದಿದೆ.
ಡೆಲಿವರಿ ಬಾಯ್ಗೆ ಕಪಾಳಮೋಕ್ಷ ಮಾಡಿದ ಆರೋಪ
ಹರಿದ ನೋಟನ್ನು ಸ್ವೀಕರಿಸಲು ಸಮೀರ್ ನಿರಾಕರಿಸಿದಾಗ ಗ್ರಾಹಕನ ಮಗ ಅವರ ಕಪಾಳಕ್ಕೆ ಹೊಡೆದಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಸಮೀರ್ ಅವರ ಬಡತನದ ಹಿನ್ನೆಲೆಯನ್ನು ಉಲ್ಲೇಖಿಸಿ ಅವಮಾನಿಸಲಾಯಿತು ಎನ್ನಲಾಗಿದೆ.
ವಿಷ ಸೇವಿಸಿದ್ದ ಸಮೀರ್: ಆಸ್ಪತ್ರೆಗೆ ದಾಖಲು
ಇದಾದ ಬಳಿಕ ಸಮೀರ್ ವಿಷ ಸೇವಿಸಿದ್ದರು. ಅಕ್ಟೋಬರ್ 5ರಂದು ಅವರನ್ನು ದೆಹಲಿಯ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅಕ್ಟೋಬರ್ 20ರಂದು ಅವರು ಮೃತಪಟ್ಟಿದ್ದಾರೆ.
ಗ್ರಾಹಕನ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಪ್ರಕರಣ
ಸಮೀರ್ ಹುಸೇನ್ ಸಾವಿನ ಹಿನ್ನೆಲೆಗೆ ಸಂಬಂಧಪಟ್ಟ ಗ್ರಾಹಕನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಕೇಳಿಬಂದಿರುವ ಹಲ್ಲೆ ಮತ್ತು ಅವಮಾನದ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸಬೇಕಿದೆ.





