ಹೊಸ ಅಲೆಯ ಚಿತ್ರಗಳನ್ನು ಕನ್ನಡ ಪ್ರೇಕ್ಷಕರು ಹಿಂದಿನಿಂದಲೂ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಅಂಥಾ ಮತ್ತೊಂದು ಸೈಂಟಿಫಿಕ್ ಫ್ಯಾಂಟಸಿ ಥ್ರಿಲ್ಲರ್ ಚಿತ್ರ ‘ಮಿಸ್ಟರ್ ಲಕ್ಕಿ’ ಬಿಡುಗಡೆಗೆ ಸಿದ್ದವಾಗಿದೆ. ನಿರ್ದೇಶಕ ಹರ್ಷಿತ್ ರಂಗಸ್ವಾಮಿ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ‘ಟೋಪಿ’ ಒಂದು ಪಾತ್ರವಾಗಿದೆ. ಇದರಮೇಲೆ ಸಾಂಗ್ ಮಾಡಲಾಗಿದೆ. ಆ ಹಾಡು ಹಾಗೂ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಹೆಚ್.ಆರ್. ವಿಜನ್ಸ್ ಮೂಲಕ ಚಂದನ್ ರಂಗಸ್ವಾಮಿ, ವಸಂತ್, ನಾರಾಯಣ ಸ್ವಾಮಿ, ಅನ್ನಪೂರ್ಣ, ಪವನ್ ಶೆಟ್ಟಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಾಮ್ ತೇಜ್, ರಿತಿ ಶೆಟ್ಟಿ ನಾಯಕ, ನಾಯಕಿಯಾಗಿದ್ದು, ಸಹೋದರಿ ಪಾತ್ರದಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದಾರೆ.
ಈ ವೇಳೆ ನಿರ್ದೇಶಕ ಹರ್ಷಿತ್ ಮಾತನಾಡಿ ಐಟಿನಲ್ಲಿ ವರ್ಕ್ ಮಾಡ್ತಿದ್ದೆ. ಸಿನಿಮಾ ಮಾಡಬೇಕೆಂದೇ ಬ್ರೇಕ್ ತಗೊಂಡು ನಾವೆಲ್ಲ ಸ್ನೇಹಿತರೇ ಸೇರಿ ಈ ಪ್ರಾಜೆಕ್ಟ್ ಮಾಡಿದ್ದೇವೆ. ಇದಕ್ಕೂ ಮೊದಲು ಗುಣ ಎಂಬ ಕಿರುಚಿತ್ರ ನಿರ್ದೇಶಿಸಿದ್ದೆ. ಇದೊಂದು ಫ್ಯಾಂಟಸಿ ಥ್ರಿಲ್ಲರ್, ನಾಯಕ, ನಾಯಕಿ, ಐಶ್ವರ್ಯ, ಶ್ರೀನಿಧಿ ಇವರೆಲ್ಲ ಅನುಭವಿ ಕಲಾವಿದರಂತೆ ಅದ್ಭುತವಾಗಿ ನಟಿಸಿದ್ದಾರೆ. ‘ಲಕ್ಕಿ’ ನಾಯಕ ಲಕ್ಷ್ಮಣನ ನಿಕ್ ನೇಮ್. ಹೆಸರು ಲಕ್ಕಿ ಅದರೂ ಆತನ ಲೈಫಲ್ಲಿ ಲಕ್ಕೇ ಇರಲ್ಲ, ಒಮ್ಮೆ ಮ್ಯಾಜಿಕಲ್ ಕ್ಯಾಪ್ ಸಿಗುತ್ತೆ. ಅದು ಸಿಕ್ಕ ನಂತರ ಆತನ ಜೀವನದಲ್ಲಿ ಏನೇನೆಲ್ಲ ಆಗುತ್ತದೆ ಅನ್ನೋದನ್ನು ಥ್ರಿಲ್ಲಿಂಗ್ ಆಗಿ ಚಿತ್ರದಲ್ಲಿ ಹೇಳಿದ್ದೇವೆ. ಡಿ ಬಾಸ್ ಅಭಿಮಾನಿಗಳಿಗಾಗಿ ಒಂದು ಕಾಮಿಡಿ ಸೀನ್ ಮಾಡಿದ್ದೇವೆ. ಅದು ಬಿಟ್ಟರೆ ಪೂರ್ತಿ ಥ್ರಿಲ್ಲರ್ ಆಗಿ ಸಾಗುತ್ತೆ, ದಯಮಾಡಿ ಬಂದು ಚಿತ್ರ ನೋಡಿ, ಸಧ್ಯದಲ್ಲೇ ಟ್ರೈಲರ್ ಲಾಂಚ್ ಮಾಡಿ, ಅ.೩೦ಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದರು.
ನಿರ್ಮಾಪಕರಲ್ಲೊಬ್ಬರಾದ ವಸಂತ್ ಮಾತನಾಡಿ ನಿರ್ದೇಶಕರು ನಮ್ಮೂರಿನವರು. ಅವರ ಶಾರ್ಟ್ ಫಿಲಂ ನೋಡಿ ಇಷ್ಟಪಟ್ಟು ಈ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದೆ ಎಂದರು.
ನಾಯಕ ರಾಮ್ ತೇಜ್ ಮಾತನಾಡಿ ನಾನು ರಂಗಸಾರೋಟು ತಂಡದಲ್ಲಿದ್ದೆ. ಕೆಲ ಸೀರಿಯಲ್ಗಳಲ್ಲಿ ನಟಿಸಿದ್ದೇನೆ. ನಂತರ ಹರ್ಷಿತ್ ಸಿಕ್ಕರು. ಮುಂಚೆ ಚಿತ್ರಕ್ಕೆ ‘ಕ್ಯಾಪ್ ಆಫ್ ಲಕ್’ ಟೈಟಲ್ ಇತ್ತು. ನಾನು, ಐಶ್ವರ್ಯ, ರಿತಿ ಮೇಲೆ ಬಹುತೇಕ ಕಥೆ ಸಾಗುತ್ತದೆ. ‘ಟೋಪಿ’ ಈ ಚಿತ್ರದ ಕಥೆಯಲ್ಲಿ ಪ್ರಮುಖ ಪಾತ್ರವಾಗಿದೆ. ಶ್ರೀನಿಧಿ ಬೆಂಗಳೂರು ವಿಶೇಷ ಪಾತ್ರ ಮಾಡಿದ್ದಾರೆ ಎಂದರು.
ನಾಯಕಿ ರಿತಿ ಶೆಟ್ಟಿ ಮಾತನಾಡಿ ನಾನು ಲಕ್ಕಿಗೆ ಲಕ್ ತರೋ ಹುಡುಗಿ. ಹರ್ಷಿತ್ ಕಷ್ಟಪಟ್ಟು ಈ ಚಿತ್ರ ಮಾಡಿದ್ದಾರೆ ಎಂದರೆ, ಐಶ್ವರ್ಯ ಮಾತನಾಡಿ ಲಕ್ಕಿಯ ತಂಗಿ ಪಾತ್ರ ಮಾಡಿದ್ದೇನೆ, ನಮ್ಮಿಬ್ಬರ ಬಾಂಡಿಂಗ್ ಚೆನ್ನಾಗಿತ್ತು ಎಂದರು.
ಸಂಗೀತ ನಿರ್ದೇಶಕ ಪ್ರಸನ್ನ ಕುಮಾರ್ ಎಂ.ಎಸ್. ಮಾತನಾಡಿ ಚಿತ್ರದಲ್ಲಿ ೪ ಹಾಡುಗಳಿದ್ದು, ತ್ರಿಲೋಕ್ ತ್ರಿವಿಕ್ರಮ, ಶ್ರೀನಿಧಿ, ಪ್ರಮೋದ್ ಸಾಹಿತ್ಯ ಬರೆದಿದ್ದಾರೆ ಎಂದರು. ಹರಿ ಸಮಷ್ಠಿ ನಾಯಕನ ತಂದೆಯಾಗಿ, ರಾಯ ಸ್ನೇಹಿತನಾಗಿ ನಟಿಸಿದ್ದಾರೆ. ಸಾಗರ್ ಎನ್. ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.





