ರವಿವರ್ಮಾ ರೀತಿ ಕನ್ನಡದ ಮತ್ತೊಬ್ಬ ಸಾಹಸ ನಿರ್ದೇಶಕ ಕನ್ನಡದ ಜೊತೆ ಸೂಪರ್ ಸ್ಟಾರ್‌ಗಳ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚು ಹರಿಸುತ್ತಿದ್ದಾರೆ. ಉಡುಪಿಯಿಂದ ತಲೈವಾ ರಜನಿಕಾಂತ್ ಜೈಲರ್-2 ತನಕ ಆತನ ಜರ್ನಿ ಬಹಳ ಇಂಟರೆಸ್ಟಿಂಗ್ ಹಾಗೂ ಇಂಪ್ರೆಸ್ಸೀವ್ ಆಗಿದೆ. ಆತ ಯಾರು..? ಯಾವ್ಯಾವ ಸ್ಟಾರ್ಸ್ ಜೊತೆ ಕೆಲಸ ಮಾಡಿದ್ದಾರೆ.. ಈಗ ಮಾಡ್ತಿದ್ದಾರೆ..? ಅನ್ನೋದ್ರ ಇನ್ಸೈಡ್ ಸ್ಟೋರಿ ಇಲ್ಲಿದೆ…
- ರವಿವರ್ಮಾ ಹಾದಿಯಲ್ಲಿ ಸಾಹಸ ನಿರ್ದೇಶಕ ಚೇತನ್
- ಕರಾವಳಿ to ರಜನಿಕಾಂತ್ ಜೈಲರ್-2 ರೋಚಕ ಜರ್ನಿ
- ಸೂಪರ್ ಸ್ಟಾರ್ಸ್‌ಗೆ ಫೇವರಿಟ್ ಕನ್ನಡದ ಫೈಟ್ ಮಾಸ್ಟರ್
- ಸೌತ್‌ನ ಸೆನ್ಸೇಷನಲ್ ಮಾಸ್ಟರ್ ಈ ಚೇತನ್ ಡಿಸೋಜಾ
ಉಡುಪಿ ಮೂಲದ ಕನ್ನಡಿಗ ಚೇತನ್ ಡಿಸೋಜಾ ಸದ್ಯ ಇದೇ ವಾರ ರಿಲೀಸ್ ಆಗ್ತಿರೋ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್ 2 ಚಿತ್ರಕ್ಕೆ ಎಲ್ಲಾ ಫೈಟ್‌ಗಳನ್ನ ಕಂಪೋಸ್ ಮಾಡಿದ್ದಾರೆ. ಯೆಸ್.. ಅಕ್ಟೋಬರ್ 15ಕ್ಕೆ ತೆರೆಗೆ ಬರ್ತಿರೋ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿಗೆ ಚೇತನ್ ಡಿಸೋಜ ಅವರದ್ದು ಸಿಂಗಲ್ ಕಾರ್ಡ್ ಆ್ಯಕ್ಷನ್ ಕ್ರೆಡಿಟ್. ಚಿತ್ರದ ಎಲ್ಲಾ ಸಾಹಸ ಸನ್ನಿವೇಶಗಳಿಗೂ ಚೇತನ್ ಅವ್ರೇ ಸಾಹಸ ಸಂಯೋಜನೆ ಮಾಡಿರೋದು ಕನ್ನಡಿಗರಾದ ನಾವು ಹೆಮ್ಮೆ ಪಡುವ ವಿಷಯ.
ಶಾಲಾ ದಿನಗಳಲ್ಲೇ ಕರಾಟೆ ಕಲಿಯಲು ಆರಂಭಿಸಿದ್ದ ಚೇತನ್, ನಂತರ ಜಿಮ್ನಾಸ್ಟಿಕ್ಸ್, ಕ್ಯಾಲಿಸ್ಥೆನಿಕ್ಸ್ ಸೇರಿದಂತೆ ವಿವಿಧ ಮೂವ್‌ಮೆಂಟ್ ಆರ್ಟ್ಸ್‌ಗಳಲ್ಲಿ ಪರಿಣಿತಿ ಪಡೆದರು. ಪಿಯುನಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ ಈ ಟ್ಯಾಲೆಂಟ್.. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ.. ಎರಡು ಬಾರಿ ರಾಜ್ಯ ಮಟ್ಟದ ಗ್ರ್ಯಾಂಡ್ ಚಾಂಪಿಯನ್ ಕೂಡ ಆಗಿದ್ದಾರೆ.
ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದ ಬಳಿಕ, 2007ರಲ್ಲಿ ಬೆಂಗಳೂರಿಗೆ ಬಂದು ಅಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಆರಂಭಿಸಿದ್ರು. ಉದ್ಯೋಗದ ಜೊತೆಗೆ ಜಿಮ್ನಾಸ್ಟಿಕ್ಸ್ ಕೂಡ ಮುಂದುವರಿಸಿ ವ್ರಾಂಗ್ ಮೂವ್ ಅನ್ನೋ ಕಿರುಚಿತ್ರವನ್ನ ನಿರ್ಮಿಸಿದರು. ಈ ಕಿರುಚಿತ್ರ ನಿರ್ದೇಶಕ ಲೂಸಿಯಾ, ಪವನ್ ಕುಮಾರ್ ಅವರ ಗಮನ ಸೆಳೆಯಿತು. ಆಗ U Turn ಚಿತ್ರದ ಮೂಲಕ ಸಾಹಸ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ರು ಚೇತನ್ ಡಿಸೋಜಾ.
ಕನ್ನಡ ಚಿತ್ರರಂಗದಲ್ಲಿ ರಾಜರತ್ನ ಅಪ್ಪು ಸಹಕಾರದಿಂದ ಸ್ಟಂಟ್ ಯೂನಿಯನ್ ಕಾರ್ಡ್ ಪಡೆದು, ಸಾಹಸ ನಿರ್ದೇಶಕರಾಗಿ ಮುಂದುವರೆದರು. ಶಿವಣ್ಣ, ಪುನೀತ್, ಸುದೀಪ್, ಉಪೇಂದ್ರ, ಶ್ರೀಮುರಳಿ, ರಾಜ್ ಬಿ ಶೆಟ್ಟಿ ಸೇರಿದಂತೆ ಹಲವು ನಟರ ಚಿತ್ರಗಳಲ್ಲಿ ಚೇತನ್ ಡಿಸೋಜಾ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಘೀರ, ಯುಐ, 45, ಭೈರತಿ ರಣಗಲ್, ಮ್ಯಾಕ್ಸ್.. ಚೇತನ್ ಸಾಹಸ ಸಂಯೋಜಿಸಿರೋ ಪ್ರಮುಖ ಚಿತ್ರಗಳು.
ಧೂಮಂ ಚಿತ್ರದ ಸಂದರ್ಭದಲ್ಲಿ ನಟ ಫಹದ್ ಫಾಸಿಲ್ ಪರಿಚಯದ ಮೂಲಕ ಆವೇಷಂ ಚಿತ್ರಕ್ಕೆ ಅವಕಾಶ ದೊರೆಯಿತು. 2024ರಲ್ಲಿ ಬಿಡುಗಡೆಯಾದ ಆವೇಷಂನ ಆ್ಯಕ್ಷನ್ ದೃಶ್ಯಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದವು. ಇದೇ ಕೆಲಸ ಜೈಲರ್-2 ತಂಡದ ಗಮನ ಸೆಳೆಯಲು ಕಾರಣವಾಯಿತು. ಮೊದಲಿಗೆ 2025ರ ಜನವರಿಯಲ್ಲಿ ಬಿಡುಗಡೆಯಾದ ಮೊದಲ ಟೀಸರ್‌ನ ಆ್ಯಕ್ಷನ್ ವಿನ್ಯಾಸ ಮಾಡಿದ ಚೇತನ್, ಬಳಿಕ ಇಡೀ ಚಿತ್ರಕ್ಕೆ ಸಾಹಸ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರೋದು ವಿಶೇಷ.
ಸೂಪರ್ ಸ್ಟಾರ್ ರಜನಿಕಾಂತ್ ಅಂತಹಹ ದಿಗ್ಗಜ ನಟರೊಂದಿಗೆ ಕೆಲಸ ಮಾಡಿರೋ ಚೇತನ್, Jr NTR ಅಭಿನಯದ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಡ್ರ್ಯಾಗನ್, ಪ್ರಭಾಸ್ ಅಭಿನಯದ ಫೌಜಿ ಹಾಗೂ ಸೂರ್ಯ ನಟನೆಯ ಸೀನ್ ಸಿನಿಮಾಗೂ ಇವರೇ ಸ್ಟಂಟ್ಸ್ ಕಂಪೋಸ್ ಮಾಡ್ತಿದ್ದಾರೆ. ಚೇತನ್ CF Action Design ಸಂಸ್ಥೆಯ ಸಂಸ್ಥಾಪಕರಾಗಿದ್ದು, ಬೆಂಗಳೂರಿನಲ್ಲಿ ಸ್ಟಂಟ್ ತರಬೇತಿ ಕೇಂದ್ರ Chaos Faktoryಯ ಸಹ-ಸಂಸ್ಥಾಪಕರೂ ಆಗಿದ್ದಾರೆ. 7 ಭಾಷೆಗಳಲ್ಲಿ 68ಕ್ಕೂ ಅಧಿಕ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡೋ ಮೂಲಕ ಸೆನ್ಸೇಷನಲ್ ಸ್ಟಂಟ್ ಮಾಸ್ಟರ್ ಆಗಿ ರಾರಾಜಿಸ್ತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





