ಬಾರ್ಡರ್ ಡೈರೀಸ್ ಚಿತ್ರದ ಆಡಿಯೋ ಲಾಂಚ್‌ಗೆ ಬಂದಂತಹ ಚಿತ್ರಸಾಹಿತಿ ಕವಿರಾಜ್.. ಯಶ್ ಟಾಕ್ಸಿಕ್ ಸಿನಿಮಾ ಡಿಸಾಸ್ಟರ್ ಅಂತ ಆಡಿಕೊಂಡವ್ರ ವಿರುದ್ಧ ಕಿಡಿ ಕಾರಿದ್ರು. ಸೋಲನ್ನ ಸಂಭ್ರಮಿಸಿದ ಮನಸ್ಸುಗಳಿಗೆ ನೇರವಾಗಿ ತಟ್ಟುವಂತೆ ಮಾತನಾಡಿದ್ರು. ಅಲ್ಲದೆ.. ಟಾಕ್ಸಿಕ್ ಜೊತೆ ಬಂದ ಇರುಮುಡಿ ಆವರೇಜ್ ಮೂವಿ. ಅದ್ಭುತ ಸಿನಿಮಾ ಏನಲ್ಲ ಅಂದ್ರು.
- ಯಶ್ ‘ಟಾಕ್ಸಿಕ್ ಡಿಸಾಸ್ಟರ್’.. ಆಡಿಕೊಂಡವ್ರ ವಿರುದ್ಧ ಕವಿರಾಜ್ ಕಿಡಿ
- ಚೆನ್ನಾಗಿಲ್ಲ ಅಂತ ಹೇಳೋದ್ರಲ್ಲಿ ವಿಷಾದ ಇರಲಿ.. ವಿಕೃತ ಸಂಭ್ರಮ ಏಕೆ?
- ದೊಡ್ಡ ಹೀರೋಗಳಿಗೆ ಇಂಡಸ್ಟ್ರಿಯ ಋಣವಿದೆ… ದಯವಿಟ್ಟು ತೀರಿಸಿ
- ಇರುಮುಡಿ ಅದ್ಭುತ ಅಲ್ಲ ಆವರೇಜ್..ಸ್ಟ್ರಾಟಜಿಯಿಂದ ಗೆಲ್ಲಿಸಿಕೊಂಡ್ರು
ಬಾರ್ಡರ್ ಡೈರೀಸ್ ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಎಎಸ್‌ಜಿ ಸಾಹಿತ್ಯ ರಚಿಸಿ, ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿ, ಶಮಿತಾ ಮಲ್ನಾಡ್ ಹಾಡಿರೋ ಹಾಡು ಕೂಡ ಈ ವೇಳೆ ಬಿಡುಗಡೆ ಆಯ್ತು. ಚಿತ್ರಸಾಹಿತಿ ಕಮ್ ಡೈರೆಕ್ಟರ್ ಕವಿರಾಜ್ ಮುಖ್ಯ ಅತಿಥಿಯಾಗಿ ಆಗಮಿಸಿ, ನಾಯಕನಟ ಅಂಜನ್ ನಾಗೇಂದ್ರ, ನಾಯಕಿ ಅಶ್ವಿತಾ ಹೆಗ್ಡೆ ಸೇರಿದಂತೆ ಇಡೀ ತಂಡಕ್ಕೆ ಶುಭ ಕೋರಿದ್ರು.
ಇದೇ ವೇಳೆ ಮಾತನಾಡಿದ ಕವಿರಾಜ್.. ಯಶ್ ಟಾಕ್ಸಿಕ್ ಡಿಸಾಸ್ಟರ್ ಅಂತ ಆಡಿಕೊಂಡು ಸಂಭ್ರಮಿಸಿದವರ ವಿರುದ್ಧ ಕಿಡಿಕಾರಿದರು. ಚಿತ್ರರಂಗ ಮುಖುಗಿ ಹೋಗ್ತಿದೆ. ಒಬ್ಬರಿಗೊಬ್ಬರು ಸಾಥ್ ಕೊಟ್ಟುಕೊಳ್ಳಬೇಕಿದೆ. ಡಿಸಾಸ್ಟರ್ ಅಂತ ಮೆಸೇಜ್ ಕಳುಹಿಸುವುದರಲ್ಲಿ ಸಂಭ್ರಮ ಕಾಣಿಸ್ತಿತ್ತು. ನಮ್ಮವರು ನಮ್ಮದನ್ನ ಚೆನ್ನಾಗಿಲ್ಲ ಅಂತ ಹೇಳೋದ್ರಲ್ಲಿ ಒಂದು ವಿಷಾದ ಇರಬೇಕಿತ್ತು. ಅಷ್ಟರ ಮಟ್ಟಿಗೆ ಮಾನವೀಯತೆ ನಮಗೆ ಬೇಕು. ಸಂಭ್ರಮಿಸಿದ್ರೆ.. ನಾವು ಮನುಷ್ಯರಾ ಅನಿಸಿಬಿಡುತ್ತೆ ಎಂದರು.
ಬೆಳಗಾಗುವಷ್ಟರಲ್ಲಿ ಮೆಸೇಜ್ ಕಳುಹಿಸಿಬಿಡುತ್ತಾರೆ.. ಒಂದಷ್ಟು ಜನಕ್ಕೆ ನಾನು ಬೈದಿದ್ದೂ ಉಂಟು. ಯಾಕೆ ಹೀಗೆ ಮಾಡ್ತೀರಾ ಅಂತ ಕೇಳಿದ್ದುಂಟು. ರಾತ್ರಿ ಇರುಮುಡಿ ನೋಡಿದೆ.. ನನಗೆ ಅದ್ಭುತ ಸಿನಿಮಾ ಅನಿಸಲಿಲ್ಲ. ಅದೇ ಯಾವಾಗ ಟಾಕ್ಸಿಕ್ ಸಿನಿಮಾ ಶೋಸ್ ಕಿತ್ಕೊಂಡಿದ್ದಾರೆ ಅಂತಾರೋ ಆಗ ಇಡೀ ತೆಲುಗು ಚಿತ್ರರಂಗ ಒಂದಾಗಿಬಿಡ್ತು. ಚಿರಂಜೀವಿ ಸಮೇತ ಪೋಸ್ಟ್ ಹಾಕ್ತಾರೆ. ಕಲೆಕ್ಷನ್ ಹೆಚ್ಚುತ್ತೆ. ಆ ಸಿನಿಮಾನ ಅವರು ಗೆಲ್ಲಿಸಿಕೊಳ್ತಾರೆ. ಖಂಡಿತ ಅದು ಆವರೇಜ್ ಮೂವಿ.
ನಮ್ಮ ಇಂಡಸ್ಟ್ರಿಯಲ್ಲಿ ಆ ಒಗ್ಗಟ್ಟು ಯಾಕಿಲ್ಲ..? ದೊಡ್ಡ ಸ್ಟಾರ್‌ಗಳು ಹೊಸಬರ ಕೈ ಹಿಡಿಯಬೇಕು. ಆಗಲೇ ಇಂಡಸ್ಟ್ರಿ ಬೆಳೆಯೋಕೆ ಸಾಧ್ಯ. ದೊಡ್ಡ ಹೀರೋಗಳಿಗೆ ಇಂಡಸ್ಟ್ರಿಯ ಋಣ ಇದೆ. ದಯವಿಟ್ಟು ಅವರು ಆ ಋಣವನ್ನು ತೀರಿಸಬೇಕಿದೆ. ಎಲ್ಲಾ ಸಿನಿಮಾಗಳಿಗೂ ಸಪೋರ್ಟ್ ಮಾಡದಿದ್ರೂ. ಒಳ್ಳೆಯ ಚಿತ್ರಗಳಿಗೆ ಸ್ಪಂದಿಸಬೇಕಿದೆ. ಅಂಥದ್ದೊಂದು ಮೆಚ್ಯೂರಿಟಿ ಬರಬೇಕು ಎಂದರು. ಅಲ್ಲದೆ.. ನಮ್ಮದೇ ಸಿನಿಮಾ ಚೆನ್ನಾಗಿಲ್ಲ ಅಂದ್ರೂ ಸ್ವಲ್ಪ ತಡ್ಕೊಳಿ.. ಕೂಡಲೇ ಪೋಸ್ಟ್ ಹಾಕಿ.. ಅದನ್ನ ಮರ್ಡರ್ ಮಾಡಬೇಕು ಅಂತಿಲ್ಲ. ನಮ್ಮ ಸಿನಿಮಾಗಳಿಗೆ ವೀಕ್ಷಕರು ಕಮ್ಮಿ.. ವಿಮರ್ಶಕರು ಜಾಸ್ತಿ. ನೋಡಿದಾಕ್ಷಣ ವಿಮರ್ಶೆ ಬರೆದು ಕಡೆವಿ ಬಿಡಬೇಕು ಅನ್ನೋ ರಣ ಉತ್ಸಾಹ ಯಾಕೋ ಗೊತ್ತಿಲ್ಲ ಅಂತ ಜಾಡಿಸಿದ್ರು.
ಒಟ್ಟಾರೆ ಕವಿರಾಜ್ ಮಾತು ಸ್ವಲ್ಪ ಖಾರವಾದ್ರೂ ಸಹ ಅಕ್ಷರಶಃ ಸತ್ಯವಾಗಿದೆ. ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ನಮ್ಮವರೇ ನಮ್ಮ ಸಿನಿಮಾಗಳನ್ನ ಕೊಲ್ಲುವ ಪ್ರವೃತ್ತಿ ಬಿಡಬೇಕಿದೆ. ಆಗಲೇ ಇಂಡಸ್ಟ್ರಿ ಉದ್ಧಾರ ಆಗೋಕೆ ಸಾಧ್ಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





