ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಸಾಮಾನ್ಯವಾಗಿ ಭಾನುವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಆದರೆ ಸೆಪ್ಟೆಂಬರ್ 27, 2026ರ ಭಾನುವಾರದಂದು ದೇಶದ ಬ್ಯಾಂಕ್‌ಗಳ ಶಾಖೆಗಳು ಹಾಗೂ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಉಂಟಾಗಬಹುದಾದ ತೊಂದರೆಯನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಹಣಕಾಸು ಸಚಿವಾಲಯದ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 27ರಂದು ಬ್ಯಾಂಕ್‌ಗಳ ಕಾರ್ಯಾಚರಣೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆ ನೀಡಿದೆ. ಹೀಗಾಗಿ ಸರ್ಕಾರಿ ಬ್ಯಾಂಕ್‌ಗಳು ಸೇರಿದಂತೆ ಸಂಬಂಧಿತ ಬ್ಯಾಂಕಿಂಗ್ ಸೇವೆಗಳು ಭಾನುವಾರವೂ ಸಾರ್ವಜನಿಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 26 ನಾಲ್ಕನೇ ಶನಿವಾರವಾಗಿದ್ದು, ಅಂದು ಸಾಮಾನ್ಯವಾಗಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಇದರ ಬೆನ್ನಲ್ಲೇ ಸೆಪ್ಟೆಂಬರ್ 27 ಭಾನುವಾರವಾಗುತ್ತದೆ. ನಂತರ ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ಉದ್ಯೋಗಿಗಳ ಮುಷ್ಕರ ನಡೆಯಲಿದೆ. ಹೀಗಾಗಿ ಸೆಪ್ಟೆಂಬರ್ 26ರಿಂದ 30ರವರೆಗೆ ಸತತ ಐದು ದಿನ ಬ್ಯಾಂಕಿಂಗ್ ಸೇವೆಗಳಿಗೆ ವ್ಯತ್ಯಯ ಉಂಟಾಗುವ ಸಾಧ್ಯತೆ ಇತ್ತು.
ಸತತ ಐದು ದಿನ ಬ್ಯಾಂಕ್‌ಗಳು ಮುಚ್ಚಿದರೆ ಗ್ರಾಹಕರಿಗೆ ಹಣಕಾಸು ವ್ಯವಹಾರ, ಚೆಕ್ ಕ್ಲಿಯರೆನ್ಸ್, ದಾಖಲೆ ಸಲ್ಲಿಕೆ ಸೇರಿದಂತೆ ಹಲವು ಸೇವೆಗಳಲ್ಲಿ ತೊಂದರೆಯಾಗಬಹುದಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಸೆಪ್ಟೆಂಬರ್ 27ರಂದು ಬ್ಯಾಂಕ್‌ಗಳನ್ನು ತೆರೆಯುವ ವ್ಯವಸ್ಥೆ ಮಾಡಲಾಗಿದೆ.
ಆರ್‌ಬಿಐ ಅನುಮೋದನೆಯಂತೆ ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂಗೆ ಸಂಬಂಧಿಸಿದ ಕಚೇರಿಗಳು ಹಾಗೂ ಕರೆನ್ಸಿ ಚೆಸ್ಟ್‌ಗಳು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಬ್ಯಾಂಕ್‌ಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೂ ಈ ದಿನ ಸೇವೆ ನೀಡುವಂತೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬ್ಯಾಂಕ್ ನೌಕರರ ಮುಷ್ಕರಕ್ಕೆ ಕಾರಣವೇನು?
ಬ್ಯಾಂಕ್ ಉದ್ಯೋಗಿಗಳ ವಿವಿಧ ಬೇಡಿಕೆಗಳ ಹಿನ್ನೆಲೆಯಲ್ಲಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮುಷ್ಕರಕ್ಕೆ ಕರೆ ನೀಡಿದೆ. ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ ಎರಡು ದಿನ ರಜೆ ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.
ಈ ಹಿಂದೆ ಸೆಪ್ಟೆಂಬರ್ 13ರಂದು ಒಂದು ದಿನದ ಮುಷ್ಕರವನ್ನೂ ನಡೆಸಲಾಗಿತ್ತು. ಇದೀಗ ಸೆಪ್ಟೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ. ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅಕ್ಟೋಬರ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಎಚ್ಚರಿಕೆಯನ್ನೂ ಒಕ್ಕೂಟ ನೀಡಿದೆ.
ಇದೇ ವೇಳೆ ಮುಷ್ಕರವನ್ನು ಕೈಬಿಡುವಂತೆ ಹಣಕಾಸು ಸೇವೆಗಳ ಇಲಾಖೆ, ಭಾರತೀಯ ಬ್ಯಾಂಕುಗಳ ಸಂಸ್ಥೆ ಹಾಗೂ ವಿವಿಧ ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಯುಎಫ್‌ಬಿಯುಗೆ ಮನವಿ ಮಾಡಿವೆ. ಸರ್ಕಾರ ತಮ್ಮ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರೆ ಮುಷ್ಕರದಿಂದ ಹಿಂದೆ ಸರಿಯುವುದಾಗಿ ಒಕ್ಕೂಟ ತಿಳಿಸಿದೆ.
ಹೀಗಾಗಿ ಸೆಪ್ಟೆಂಬರ್ 27ರಂದು ಬ್ಯಾಂಕ್ ಸೇವೆ ಪಡೆಯಬೇಕಿರುವ ಗ್ರಾಹಕರು ತಮ್ಮ ಶಾಖೆಯ ಸ್ಥಳೀಯ ಕಾರ್ಯಾಚರಣೆ ಸಮಯವನ್ನು ಮುಂಚಿತವಾಗಿ ಖಚಿತಪಡಿಸಿಕೊಳ್ಳುವುದು ಸೂಕ್ತ.





