ರಾಯಚೂರು: ಕಲ್ಲಿನಿಂದ ಜಜ್ಜಿ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದ ಜಮೀನಿನಲ್ಲಿ ನಡೆದಿದೆ. ಮಹಿಳೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವೇಳೆ ಆಕೆಯ ಎರಡು ವರ್ಷದ ಮಗು ಪಕ್ಕದಲ್ಲೇ ಅಳುತ್ತಿರುವ ದೃಶ್ಯ ಮನಕಲಕುವಂತಿದೆ.
ಮೃತ ಮಹಿಳೆಯನ್ನು ಆರ್.ಎಚ್.ಕ್ಯಾಂಪ್ 4ರ ನಿವಾಸಿ ಸ್ನೇಹಾ (25/26) ಎಂದು ಗುರುತಿಸಲಾಗಿದೆ. ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಗಂಭೀರವಾಗಿ ಗಾಯಗೊಂಡಿದ್ದ ಸ್ಥಿತಿಯಲ್ಲೇ ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ತಾಯಿಯ ಸ್ಥಿತಿ ಅರಿಯದ ಎರಡು ವರ್ಷದ ಮಗು ಆಕೆಯ ಎದೆ ಮೇಲೆಯೇ ಮಲಗಿದ್ದ ಹೃದಯವಿದ್ರಾವಕ ಘಟನೆ ನಡೆದಿದೆ.
ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಗಂಭೀರವಾಗಿ ಗಾಯಗೊಂಡಿದ್ದ ಸ್ನೇಹಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಾಳೆ. ಮಗುವಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಚೇತರಿಸಿಕೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತಳ ಪತಿ ಅಮಿತ್ ಹಾಗೂ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾದ ಶುಭಂನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಮಹಿಳೆಯ ಹತ್ಯೆಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಸ್ನೇಹಾ ಹಾಗೂ ಆಕೆಯ ಪತಿ ಅಮಿತ್ ನಡುವೆ ಕೆಲ ದಿನಗಳಿಂದ ಮನಸ್ತಾಪವಿತ್ತು ಎನ್ನಲಾಗಿದೆ. ಪತಿಯೊಂದಿಗೆ ಜಗಳ ಮಾಡಿಕೊಂಡಿದ್ದ ಸ್ನೇಹಾ ಸುಮಾರು 15 ದಿನಗಳ ಹಿಂದೆ ತವರು ಮನೆಗೆ ತೆರಳಿದ್ದಳು ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 19ರಂದು ಬೆಳಗಿನ ಜಾವ ಸುಮಾರು 4 ಗಂಟೆ ವೇಳೆಗೆ ಆಕೆ ತನ್ನ ಅಣ್ಣನ ಮನೆಯಿಂದ ಹೊರಗೆ ಬಂದಿದ್ದಳು ಎನ್ನಲಾಗಿದೆ.
ಆ ಬಳಿಕ ಆಕೆ ಆರ್.ಎಚ್.ಕ್ಯಾಂಪ್ 5ರ ಹೊರವಲಯದ ಜಮೀನಿನ ಬಳಿ ಹೇಗೆ ತೆರಳಿದಳು? ಅಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿದವರು ಯಾರು? ಹತ್ಯೆಗೆ ನಿಖರ ಕಾರಣವೇನು? ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ಮಹಿಳೆಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಿಂದ ದೊರೆತ ಸಾಕ್ಷ್ಯಗಳು, ಮೊಬೈಲ್ ಫೋನ್ ಮಾಹಿತಿ ಹಾಗೂ ಇತರ ದಾಖಲೆಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ. ಮೃತಳ ಕುಟುಂಬಸ್ಥರು ನೀಡಿರುವ ಮಾಹಿತಿ ಮತ್ತು ಶಂಕಿತರ ಹೇಳಿಕೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳ ಪರಿಶೀಲನೆ ಬಳಿಕ ಅಧಿಕಾರಿಗಳಿಂದ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಸದ್ಯ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ತನಿಖೆಯ ಬಳಿಕವಷ್ಟೇ ಹತ್ಯೆಯ ಹಿಂದಿನ ನಿಖರ ಕಾರಣ ಹಾಗೂ ಘಟನೆಯಲ್ಲಿ ಯಾರ ಪಾತ್ರವಿದೆ ಎಂಬುದು ಸ್ಪಷ್ಟವಾಗಬೇಕಿದೆ.





