ಬೆಂಗಳೂರು, ನವೆಂಬರ್ 5: ಬೆಂಗಳೂರಿನ ಕೋರಮಂಗಲದಲ್ಲಿ ಪಬ್ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ರಾಜಸ್ಥಾನದ ಯುವತಿಯನ್ನು ಹೋಟೆಲ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು ಸಮೀರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿ ಕೋರಮಂಗಲದ ಪಬ್ಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪಬ್ನಲ್ಲಿ ಸಿಗರೇಟ್ ಸೇದಲು ಲೈಟರ್ ಕೇಳಿದಾಗ ಸಮೀರ್ ಎಂಬ ವ್ಯಕ್ತಿಯ ಪರಿಚಯವಾಗಿದೆ. ಈ ಸಣ್ಣ ಪರಿಚಯವನ್ನು ಬಳಸಿಕೊಂಡು ಆರೋಪಿ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಲೈಟರ್ ನೀಡುವ ಮೂಲಕ ಆರಂಭವಾದ ಪರಿಚಯ
ಪೊಲೀಸ್ ದೂರಿನ ಪ್ರಕಾರ, ಯುವತಿ ಪಬ್ನಲ್ಲಿ ಸಿಗರೇಟ್ ಸೇದಲು ಸಮೀರ್ ಬಳಿ ಲೈಟರ್ ಕೇಳಿದ್ದಾರೆ. ಈ ವೇಳೆ ಲೈಟರ್ ನೀಡಿದ ಸಮೀರ್, ಯುವತಿಯೊಂದಿಗೆ ಮಾತುಕತೆ ಆರಂಭಿಸಿದ್ದಾನೆ. ಬಳಿಕ ತನ್ನ ಮಾತುಗಳ ಮೂಲಕ ಆಕೆಯೊಂದಿಗೆ ಸ್ನೇಹ ಬೆಳೆಸಿಕೊಂಡು ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದಾನೆ ಎನ್ನಲಾಗಿದೆ.
ನಂತರ ಯುವತಿಯನ್ನು ಮಡಿವಾಳದ ಹೋಟೆಲ್ಗೆ ಆಹ್ವಾನಿಸಿದ್ದಾನೆ. ಆತನ ಆಹ್ವಾನದ ಮೇರೆಗೆ ಯುವತಿ ಹೋಟೆಲ್ಗೆ ತೆರಳಿದ್ದು, ಅಲ್ಲಿ ಇಬ್ಬರೂ ಮದ್ಯ ಸೇವಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಶೆಯಲ್ಲಿದ್ದಾಗ ಅತ್ಯಾಚಾರ ಎಸಗಿದ ಆರೋಪ
ಹೋಟೆಲ್ ಕೊಠಡಿಯಲ್ಲಿ ಮದ್ಯ ಸೇವಿಸಿದ ಬಳಿಕ ಯುವತಿಗೆ ನಶೆ ಬರುವಂತೆ ಮದ್ಯ ಕುಡಿಸಿ, ಆಕೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಸಂದರ್ಭದಲ್ಲಿ ಸಮೀರ್ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಈ ಘಟನೆ ನಡೆದ ಬಳಿಕ ಮಧ್ಯರಾತ್ರಿ ಎಚ್ಚರಗೊಂಡ ಯುವತಿ, ಹೋಟೆಲ್ ಕೊಠಡಿಯಿಂದ ಹೊರಬಂದು ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.
ಬಳಿಕ ಮಡಿವಾಳ ಪೊಲೀಸ್ ಠಾಣೆಗೆ ತೆರಳಿದ ಯುವತಿ ಘಟನೆ ಕುರಿತು ದೂರು ದಾಖಲಿಸಿದ್ದಾರೆ. ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆರೋಪಿಯನ್ನು ಬಂಧಿಸಿದ ಮಡಿವಾಳ ಪೊಲೀಸರು
ದೂರು ದಾಖಲಾದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಮಡಿವಾಳ ಪೊಲೀಸರು ಸಮೀರ್ನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದ್ಯ ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಯುವತಿ ನೀಡಿರುವ ದೂರಿನಲ್ಲಿನ ಆರೋಪಗಳು, ಘಟನೆಯ ಹಿನ್ನೆಲೆ ಹಾಗೂ ಹೋಟೆಲ್ನಲ್ಲಿ ನಡೆದಿರುವ ಸಂಗತಿಗಳ ಕುರಿತು ತನಿಖೆ ಮುಂದುವರಿದಿದೆ.





