ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ಕನ್ನಡ ಕಂಠೀರವ ಡಾ.ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ ” ಜಗಮೆಚ್ಚಿದ ಮಗ”. ಕಪ್ಪು – ಬಿಳುಪಿನ ಈ ಚಿತ್ರ ಈಗ ಆಧುನಿಕ ತಂತ್ರಜ್ಞಾನದಿಂದ ಸಿಂಗಾರಗೊಂಡು ಬಿಡುಗಡೆಯಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಚಿತ್ರ ಕಲರ್ ನಲ್ಲಿ ಬಿಡುಗಡೆಯಾಗಲಿದೆ. ನಿರ್ಮಾಪಕರಾಗಿ ಹಾಗೂ ವಿತರಕರಾಗಿ ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿರುವ ಎಸ್ ಉದಯಶಂಕರ್ ಅವರು ಜನ ಮೆಚ್ಚಿದ “ಜಗಮೆಚ್ಚಿದ ಮಗ” ಚಿತ್ರವನ್ನು ಕಲರ್ ನಲ್ಲಿ ತರುವ ಪ್ರಯತ್ನ ಮಾಡಿದ್ದಾರೆ.
ನಾನು, ಡಾ.ರಾಜಕುಮಾರ್ ಅವರ ಅಭಿಮಾನಿ. ನಿರ್ಮಾಪಕನಾಗಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಕೆಲವು ಚಿತ್ರಗಳನ್ನು ವಿತರಣೆ ಮಾಡಿದ್ದೇನೆ. ಈಗ 1972ರಲ್ಲಿ ತೆರೆಕಂಡ ಭಾವನಾರಾಯಣ್ ಅವರು ನಿರ್ಮಾಣ ಮಾಡಿದ್ದ, ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಹಾಗೂ ಡಾ.ರಾಜಕುಮಾರ್, ಭಾರತಿ, ಕೆ.ಎಸ್ ಅಶ್ವತ್, ಎಂ.ವಿ.ರಾಜಮ್ಮ, ನರಸಿಂಹರಾಜು ಮುಂತಾದವರು ಅಭಿನಯಿಸಿದ್ದ “ಜಗಮೆಚ್ಚಿದ ಮಗ” ಕಪ್ಪು ಬಿಳುಪಿನ ಚಿತ್ರವನ್ನು ಸಿನಿಮಾಸ್ಕೋಪ್ ಚಿತ್ರವಾಗಿಸಿ, 5.1 ಸೌಂಡ್ ಎಫೆಕ್ಟ್ ಅಳವಡಿಸಿ ಈಗಿನ ಆಧುನಿಕ ತಂತ್ರಜ್ಞಾನಕ್ಕೆ ತಕ್ಕ ಹಾಗೆ ಸಿದ್ದಮಾಡಿ ಇದೇ ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇನೆ. ಈವರೆಗೂ “ಸತ್ಯ ಹರಿಶ್ಚಂದ್ರ” ಹಾಗೂ “ಕಸ್ತೂರಿ ನಿವಾಸ” ಚಿತ್ರಗಳು ಕಲರ್ ನಲ್ಲಿ ಬಿಡುಗಡೆಯಾಗಿದ್ದವು.
ಈಗ “ಜಗಮೆಚ್ಚಿದ ಮಗ” ಚಿತ್ರ ಬಿಡುಗಡೆಯಾಗುತ್ತಿದೆ. ಮುಂದೆ “ಮಂತ್ರಾಲಯ ಮಹಾತ್ಮೆ” ಚಿತ್ರವನ್ನು ಕಲರ್ ನಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ. “ಜಗಮೆಚ್ಚಿದ ಮಗ” ಚಿತ್ರವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡುವುದು ನನ್ನ ಹಲವು ವರ್ಷಗಳ ಕನಸು. ಆದರೆ, ಐವತ್ತು ವರ್ಷಗಳ ಹಿಂದಿನ ಕಪ್ಪು ಬಿಳುಪಿನ ಚಿತ್ರವನ್ನು ಈಗಿನ ಆಧುನಿಕ ರೀತಿಗೆ ಬದಲಿಸುವುದು ಅಷ್ಟು ಸುಲಭವಲ್ಲ.
ಒಂದುವರೆ ವರ್ಷಗಳಿಂದ ಚೆನ್ನೈನ ಪ್ರಸಾದ್ ಸ್ಟುಡಿಯೋದಲ್ಲಿ ಈ ಚಿತ್ರಕ್ಕೆ ಸಂಬಂಧಿಸಿದ ಕೆಲಸಗಳೆಲ್ಲಾ ನಡೆದಿದೆ. ಈಗ ಚಿತ್ರ ಹೊಸರೂಪದಲ್ಲಿ ತೆರೆಗೆ ಬರಲು ಸಿದ್ದವಾಗಿದೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಎಸ್ ಉದಯಶಂಕರ್ ತಿಳಿಸಿದ್ದಾರೆ.





