ದುಬೈನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾಕಪ್ 2026ರಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಹಾಂಗ್ ಕಾಂಗ್ ಚೀನಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 137 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ್ದು, ಸತತ ಎರಡನೇ ಜಯದೊಂದಿಗೆ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಭಾರತದ ಗೆಲುವಿನ ಪ್ರಮುಖ ಆಕರ್ಷಣೆಯಾಗಿದ್ದು ಸ್ಮೃತಿ ಮಂಧಾನ ಅವರ ದಾಖಲೆಯ ಶತಕ.
ಟಾಸ್ ಗೆದ್ದ ಹಾಂಗ್ ಕಾಂಗ್ ಚೀನಾ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಉತ್ತಮ ಆರಂಭ ನೀಡಿದರು. ದುಬೈ ಪಿಚ್‌ನಲ್ಲಿ ಆರಂಭದಲ್ಲಿ ಬೌಲರ್‌ಗಳಿಗೆ ನೆರವು ಸಿಕ್ಕಿದ್ದರಿಂದ ಮಂಧಾನ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದರು. ಮತ್ತೊಂದೆಡೆ ಶಫಾಲಿ ತಮ್ಮ ಎಂದಿನ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು. ಇಬ್ಬರೂ ಸೇರಿ ಭಾರತವನ್ನು ವೇಗವಾಗಿ 50 ರನ್‌ಗಳ ಗಡಿ ದಾಟಿಸಿದರು.
ಶಫಾಲಿ ವರ್ಮಾ 17 ಎಸೆತಗಳಲ್ಲಿ 28 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕವೂ ಮಂಧಾನ ಭಾರತದ ರನ್‌ವೇಗವನ್ನು ಹೆಚ್ಚಿಸಿದರು. ಅರ್ಧಶತಕ ತಲುಪಿದ ನಂತರ ಮತ್ತಷ್ಟು ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಅವರು ಕೇವಲ 64 ಎಸೆತಗಳಲ್ಲಿ 124 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರ ಈ ಪಾರಿಯಲ್ಲಿ 14 ಬೌಂಡರಿ ಹಾಗೂ 7 ಸಿಕ್ಸರ್‌ಗಳು ಸೇರಿದ್ದವು.
ಮಿಥಾಲಿ ರಾಜ್ ದಾಖಲೆ ಮುರಿದ ಮಂಧಾನ
ಈ ಶತಕದೊಂದಿಗೆ ಸ್ಮೃತಿ ಮಂಧಾನ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಮಿಥಾಲಿ ರಾಜ್ ಅವರ 10,868 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದ ಮಂಧಾನ ಒಟ್ಟು 10,880 ರನ್‌ಗಳೊಂದಿಗೆ ಹೊಸ ದಾಖಲೆ ಬರೆದಿದ್ದಾರೆ.
ಇದರ ಜೊತೆಗೆ ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ್ತಿಯರ ಪಟ್ಟಿಯಲ್ಲೂ ಮಂಧಾನ ಅಗ್ರಸ್ಥಾನಕ್ಕೇರಿದ್ದಾರೆ. ಹಾಂಗ್ ಕಾಂಗ್ ವಿರುದ್ಧದ ಶತಕ ಅವರ ವೃತ್ತಿಜೀವನದ 18ನೇ ಅಂತರರಾಷ್ಟ್ರೀಯ ಶತಕವಾಗಿದೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಅವರ ಎರಡನೇ ಶತಕವಾಗಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.
ಮಂಧಾನ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 193 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
56 ರನ್‌ಗಳಿಗೆ ಕುಸಿದ ಹಾಂಗ್ ಕಾಂಗ್
193 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಹಾಂಗ್ ಕಾಂಗ್ ಚೀನಾ ತಂಡಕ್ಕೆ ಭಾರತದ ಬೌಲರ್‌ಗಳು ಯಾವುದೇ ಅವಕಾಶ ನೀಡಲಿಲ್ಲ. ಆರಂಭದಿಂದಲೇ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿದ ಹಾಂಗ್ ಕಾಂಗ್ ತಂಡ 16.2 ಓವರ್‌ಗಳಲ್ಲಿ ಕೇವಲ 56 ರನ್‌ಗಳಿಗೆ ಆಲೌಟ್ ಆಯಿತು.
ತಂಡದ ಪರ ನಾಯಕಿ ನತಾಶಾ ಮೈಲ್ಸ್ 15 ರನ್ ಗಳಿಸಿದರೆ, ಮರೀನಾ ಲ್ಯಾಂಪ್ಲೌ 14 ರನ್‌ಗಳ ಕೊಡುಗೆ ನೀಡಿದರು. ಇವರನ್ನು ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಎರಡಂಕಿ ಮೊತ್ತ ತಲುಪಲು ವಿಫಲರಾದರು.
ಭಾರತದ ಪರ ದೀಪ್ತಿ ಶರ್ಮಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ 3 ವಿಕೆಟ್ ಪಡೆದರು. ಸ್ರೀ ಚರಣಿ, ನಂದಿನಿ ಶರ್ಮಾ ಹಾಗೂ ಪ್ರೇಮಾ ರಾವತ್ ಕೂಡ ಪರಿಣಾಮಕಾರಿ ಬೌಲಿಂಗ್ ನಡೆಸಿ ಹಾಂಗ್ ಕಾಂಗ್ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು.
ಹೀಗೆ ಬ್ಯಾಟಿಂಗ್‌ನಲ್ಲಿ ಮಂಧಾನ ಅವರ ದಾಖಲೆಯ ಶತಕ ಮತ್ತು ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನದ ನೆರವಿನಿಂದ ಭಾರತ 137 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ಮಹಿಳಾ ಏಷ್ಯಾಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿರುವ ಮೊದಲ ತಂಡವಾಗಿದೆ.





