ನವದೆಹಲಿ(ಜುಲೈ.28) : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಕಾಕ್ರೋಚ್ ಜನತಾ ಪಕ್ಷ’ (ಸಿಜೆಪಿ) ಮತ್ತು ಕೇಂದ್ರ ಸರ್ಕಾರದ ನಡುವಿನ ಮಾತುಕತೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ದೇಶವ್ಯಾಪಿ ಪ್ರತಿಭಟನೆಗಳನ್ನು ಮರುಆರಂಭಿಸುವುದಾಗಿ ಸಿಜೆಪಿ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಎಫ್‌ಐಆರ್‌ಗಳನ್ನು ಹಿಂಪಡೆಯುವುದು, ಬಂಧಿತರ ಬಿಡುಗಡೆ ಹಾಗೂ ಮುಂದಿನ ಪೊಲೀಸ್ ಕ್ರಮಗಳಿಂದ ರಕ್ಷಣೆ ನೀಡುವ ಕುರಿತು ಕರಡು ಅಧಿಸೂಚನೆಗಳನ್ನು ಸರ್ಕಾರದ ಪ್ರತಿನಿಧಿಗಳು ಹಂಚಿಕೊಂಡಿದ್ದಾರೆ ಎಂದು ಪಕ್ಷದ ವಕ್ತಾರ ಸೌರವ್ ದಾಸ್ ತಿಳಿಸಿದ್ದಾರೆ.
ಸಿಜೆಪಿ ನಾಯಕರಿಗೆ ಬಿಹಾರ ಮತ್ತು ಅಸ್ಸಾಂ ಸರ್ಕಾರಗಳ ಕರಡು ಅಧಿಸೂಚನೆಗಳ ಪ್ರತಿಗಳನ್ನು ನೀಡಲಾಗಿದ್ದು, ಪ್ರತಿಭಟನಾಕಾರರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವ ಭರವಸೆ ನೀಡಲಾಗಿದೆ ಎನ್ನಲಾಗಿದೆ. ಇದೇ ರೀತಿಯ ಅಧಿಸೂಚನೆಗಳನ್ನು ಕೇಂದ್ರ ಸರ್ಕಾರ ಹಾಗೂ ಇತರ ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳು ಮಂಗಳವಾರದೊಳಗೆ ಹೊರಡಿಸುವ ನಿರೀಕ್ಷೆಯಿದೆ.
ಜುಲೈ 25ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ, 49 ದಿನಗಳ ಕಾಲ ನಡೆದಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯನ್ನು ಸಿಜೆಪಿ ಹಿಂಪಡೆದಿತ್ತು. ಆದರೆ, ಒಪ್ಪಂದದಂತೆ ಎಫ್‌ಐಆರ್‌ಗಳನ್ನು ಹಿಂಪಡೆಯದೇ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರ ಮೇಲೆ ಕಣ್ಗಾವಲು ಹಾಗೂ ಕಿರುಕುಳ ಮುಂದುವರಿದಿದೆ ಎಂದು ಸಿಜೆಪಿ ಮತ್ತು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ, ಲಿಖಿತ ಭರವಸೆ ನೀಡದಿದ್ದರೆ ದೇಶಾದ್ಯಂತ ಮತ್ತೆ ಪ್ರತಿಭಟನೆ ಆರಂಭಿಸುವುದಾಗಿ ಸಿಜೆಪಿ ಎಚ್ಚರಿಕೆ ನೀಡಿತ್ತು. ಇದರ ನಂತರ ಸರ್ಕಾರದ ಪ್ರತಿನಿಧಿಗಳು ಮತ್ತು ಸಿಜೆಪಿ ನಾಯಕರ ನಡುವೆ ಸುಮಾರು ಮೂರು ಗಂಟೆಗಳ ಕಾಲ ಮಹತ್ವದ ಸಭೆ ನಡೆಯಿತು.
ಸಭೆಯ ಬಳಿಕ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಸೌರವ್ ದಾಸ್, “ಕೇಂದ್ರ ಸರ್ಕಾರ ಮತ್ತು ಬಿಜೆಪಿ-ಎನ್‌ಡಿಎ ಆಡಳಿತದ ರಾಜ್ಯಗಳಿಂದ ಮಂಗಳವಾರದೊಳಗೆ ಅಧಿಕೃತ ಖಾತರಿ ಅಧಿಸೂಚನೆಗಳು ಹೊರಬೀಳಲಿವೆ. ಯಾವುದೇ ಪ್ರತಿಭಟನಾಕಾರರನ್ನು ಒಂಟಿಯಾಗಿ ಬಿಡುವುದಿಲ್ಲ. ಎಲ್ಲರಿಗೂ ನ್ಯಾಯ ದೊರೆಯುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ತಿಳಿಸಿದ್ದಾರೆ.





