ತಮಿಳುನಾಡು ಸಿಎಂ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಜನನಾಯಗನ್ ರಿಲೀಸ್‌ಗೆ ಇನ್ನೊಂದೇ ಒಂದು ದಿನ ಬಾಕಿ ಉಳಿದಿದೆ. ಇದೀಗ ಡೈರೆಕ್ಟರ್ ವಿನೋದ್ ಮೌನ ಮುರಿದಿದ್ದು, ಇದು ಭಗವಂತ್ ಕೇಸರಿ ರಿಮೇಕ್ ಎಂದಿದ್ದಾರೆ. ಇದರ ಜೊತೆ ಜನನಾಯಗನ್ ಸಿನಿಮಾದಿಂದ ಹಗಲು ದರೋಡೆಗೆ ಇಳಿದಿರೋ ಕರ್ನಾಟಕ ಪ್ರದರ್ಶಕರು ಇಟ್ಟಿರೋ ಟಿಕೆಟ್ ಪ್ರೈಸ್ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಇದರ ಫುಲ್ ಡಿಟೈಲ್ಸ್ ಇಲ್ಲಿದೆ..
- ಜನನಾಯಗನ್ ತೆಲುಗು ಚಿತ್ರದ ರಿಮೇಕ್ ಎಂದ ಡೈರೆಕ್ಟರ್
- ಟಿಕೆಟ್ ದರ 1500 ರೂ.. ಕರ್ನಾಟಕದಲ್ಲಿ ಹಗಲು ದರೋಡೆ
- ದಳಪತಿ ವಿಜಯ್ ಆ್ಯಕ್ಷನ್ ಟೀಸರ್ ಔಟ್.. ಎಲ್ಲೆಡೆ ಕ್ರೇಜ್
- ಕೆವಿಎನ್ ವೆಂಕಟ್‌ಗೆ ಈ ಬಾರಿ ಡಬಲ್ ಲಾಟರಿ ಗ್ಯಾರಂಟಿ..!
ಜನನಾಯಗನ್.. ಸಿಕ್ಕಾಪಟ್ಟೆ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬಿಗ್‌ಸ್ಕ್ರೀನ್‌ಗೆ ಎಂಟ್ರಿ ಕೊಡ್ತಿರೋ ಸಿನಿಮಾ. ತಮಿಳುನಾಡಿನ ಸ್ಟೈಲಿಶ್ ಹಾಗೂ ಪಾಪ್ಯುಲರ್ ಸಿಎಂ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ಆದ್ದರಿಂದ ಸಹಜವಾಗಿಯೇ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಸೆನ್ಸಾರ್ ವಿಘ್ನಗಳನ್ನ ಜಯಿಸಿ, ಕೊನೆಗೂ ವಿಜಯೋತ್ಸವ ಸಂಭ್ರಮಾಚರಣೆಗೆ ಬರ್ತಿದೆ ಜನನಾಯಗನ್.
ಇದೇ ಜುಲೈ 23ರಂದು ಅಂದ್ರೆ ಗುರುವಾರ ಜನನಾಯಗನ್ ರಿಲೀಸ್ ಆಗ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಕ್ರೇಜ್ ಮುಗಿಲು ಮುಟ್ಟಿದೆ. ಅಷ್ಟೇ ಅಲ್ಲ, ವರ್ಲ್ಡ್‌ವೈಡ್ ಈ ಸಿನಿಮಾ ಸಖತ್ ಸೌಂಡ್ ಮಾಡ್ತಿದೆ. ಒಂದು ಕಡೆ ಪೈರಸಿ ಕಾಪಿ ಹೆಚ್‌ಡಿ ಪ್ರಿಂಟ್ ಸೋರಿಕೆ ಆಗಿದ್ರೂ ಸಹ, ಈ ಸಿನಿಮಾ ಈ ಪಾಟಿ ಹೈಪ್ ತಗೊಂಡಿರೋದು ಅಚ್ಚರಿ ತಂದಿದೆ. ನಮ್ಮ ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾದಿಂದ ನಿರ್ಮಾಪಕರು ಒಂದು ಕಾಲದಲ್ಲಿ ಸಂಕಷ್ಟ ಅನುಭವಿಸಿದ್ದು ನಿಜ. ಆದ್ರೀಗ ಅವ್ರಿಗೆ ಡಬ್ಕಿ ಡಬಲ್ ಲಾಟರಿ ಅಂದ್ರೆ ತಪ್ಪಾಗಲ್ಲ.
ಯೆಸ್.. ತಮಿಳುನಾಡಿನಲ್ಲಿ ಏಕರೂಪ ಟಿಕೆಟ್ ನೀತಿ ದರ ಇರೋದ್ರಿಂದ 150 ರೂಪಾಯಿ ಅಷ್ಟೇ ಟಿಕೆಟ್ ದರ ನಿಗದಿ ಆಗಿದೆ. ಆದ್ರೆ ನಮ್ಮ ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಕನಿಷ್ಟ 1000 ರೂಪಾಯಿ, ಮಲ್ಟಿಪ್ಲೆಕ್ಸ್‌ಗಳು 2500 ರೂ ತನಕ ಟಿಕೆಟ್‌ಗಳನ್ನ ಮಾರಾಟ ಮಾಡ್ತಿರೋದು ಹಗಲು ದರೋಡೆಯೇ ಸರಿ. ಇಲ್ಲಿ ಪ್ರದರ್ಶಕರು ಹಾಗೂ ವಿತರಕರು ರಿಲೀಸ್‌ಗೂ ಮೊದಲೇ ಹಣ ಕೋಟಿ ಕೋಟಿ ದೋಚಲು ಶುರುವಿಟ್ಟಿದ್ದಾರೆ. ಇದೊಂದು ಸಿನಿಮಾ ಒಂದು ಶೋ ನೋಡಿದ ಚಿತ್ರಪ್ರೇಮಿಗಳು ಕನಿಷ್ಟ ಎರಡ್ಮೂರು ತಿಂಗಳ ಕಾಲ ಥಿಯೇಟರ್‌ಗಳ ಕಡೆ ಮುಖ ಮಾಡಲ್ಲ. ಯಾಕಂದ್ರೆ ಅವ್ರ ಜೋಬಿಗೆ ಅಷ್ಟು ದೊಡ್ಡ ಕತ್ತರಿ ಇದ್ರಿಂದ ಬೀಳ್ತಿದೆ.
ಇದಲ್ಲದೆ, ಜನನಾಯಗನ್ ಚಿತ್ರದ ನಿರ್ದೇಶಕ ವಿನೋದ್ ಇದೇ ಮೊದಲ ಬಾರಿಗೆ ಸಿನಿಮಾ ಬಗ್ಗೆ ಮೌನ ಮುರಿದಿದ್ದು, ಇದು ಸ್ವಮೇಕ್ ಅಲ್ಲ. ರಿಮೇಕ್ ಸಿನಿಮಾ ಅನ್ನೋ ಓಪನ್ ಸೀಕ್ರೆಟ್‌ನ ಬಹಳ ಮುಕ್ತವಾಗಿಯೇ ಒಪ್ಪಿಕೊಂಡಿದ್ದಾರೆ. ಹೌದು.. ಬಾಲಕೃಷ್ಣ ನಟನೆಯ ಭಗವಂತ್ ಕೇಸರಿ ಚಿತ್ರದ ರಿಮೇಕ್ ಇದಾಗಿದ್ದು, ಸೀನ್ ಟು ಸೀನ್, ಫ್ರೇಮ್ ಟು ಫ್ರೇಮ್ ಎಲ್ಲವೂ ಬಟ್ಟಿ ಇಳಿಸಿದಂತಿದೆ.
ಇವೆಲ್ಲವುಗಳ ಹೊರತಾಗಿಯೂ ಸಹ ಸಿನಿಮಾ ಕ್ರೇಜ್ ಪೀಕ್‌ನಲ್ಲಿದೆ. ಇತ್ತೀಚೆಗೆ ವಿಜಯ್ ಮಾಸ್ ಟೀಸರ್ ದೃಶ್ಯವೊಂದು ರಿವೀಲ್ ಆಗಿದ್ದು, ಸ್ಟೈಲ್ ಕಾ ಬಾಪ್ ದಳಪತಿ ಖದರ್ ಜೋರಿದೆ. ಒಟ್ಟಾರೆ ಸೌತ್ ಜೊತೆ ನಾರ್ತ್ ಇಂಡಿಯಾದಲ್ಲೂ ಜನನಾಯಗನ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿದೆ. ಸೋ.. ಕೆವಿಎನ್ ಪ್ರೊಡಕ್ಷನ್ಸ್‌ಗೆ ಇಲ್ಲಿಂದ ಶುಕ್ರದೆಸೆ ಶುರುವಾಗೋದು ಕನ್ಫರ್ಮ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





