ಸಾಮಾನ್ಯವಾಗಿ ಕೋಟ್ಯಾಧಿಪತಿಗಳು ಮತ್ತು ಬಿಲಿಯನೇರ್‌ಗಳು ವಿಶ್ವದ ಪ್ರಮುಖ ನಗರಗಳಲ್ಲಿ ಐಷಾರಾಮಿ ಮನೆಗಳು, ವಿಲ್ಲಾಗಳು ಹಾಗೂ ದುಬಾರಿ ಆಸ್ತಿಗಳನ್ನು ಖರೀದಿಸುತ್ತಾರೆ. ಆದರೆ ಮೈಕ್ರೋಸಾಫ್ಟ್‌ನ ಖ್ಯಾತ ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಬಿಲಿಯನೇರ್ ಚಾರ್ಲ್ಸ್ ಸಿಮೋನಿ ಅವರು ಎಲ್ಲರಿಗಿಂತ ಭಿನ್ನವಾದ ಜೀವನಶೈಲಿಯನ್ನು ಆರಿಸಿಕೊಂಡಿದ್ದಾರೆ. ಭೂಮಿಯಲ್ಲಿ ಮನೆ ಕಟ್ಟಿಕೊಳ್ಳುವುದಕ್ಕಿಂತ ಸಮುದ್ರವನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡಿರುವುದು ಅವರ ವಿಶೇಷತೆಯಾಗಿದೆ.
ಮೈಕ್ರೋಸಾಫ್ಟ್ ವರ್ಡ್ ಮತ್ತು ಎಕ್ಸೆಲ್ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ ಚಾರ್ಲ್ಸ್ ಸಿಮೋನಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿದ್ದಾರೆ. ಫೋರ್ಬ್ಸ್ ಅಂದಾಜಿನ ಪ್ರಕಾರ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 7.2 ಬಿಲಿಯನ್ ಡಾಲರ್ ಆಗಿದೆ. ಇಷ್ಟೊಂದು ಸಂಪತ್ತಿದ್ದರೂ ಅವರು ದುಬಾರಿ ಬಂಗಲೆ ಅಥವಾ ಅರಮನೆಗಳಲ್ಲಿ ವಾಸಿಸುವುದನ್ನು ಬಿಟ್ಟು ಸಮುದ್ರದ ಮಧ್ಯೆ ತೇಲುವ ಅರಮನೆಯನ್ನು ನಿರ್ಮಿಸಿಕೊಂಡಿದ್ದರು.
ಅವರು ನಿರ್ಮಿಸಿದ “ಸ್ಕಾಟ್” (Skat) ಎಂಬ ಸೂಪರ್‌ಯಾರ್ಚ್ ಸುಮಾರು 233 ಅಡಿ ಉದ್ದವಿದ್ದು, ಅದರ ಮೌಲ್ಯ ಸುಮಾರು 100 ಮಿಲಿಯನ್ ಡಾಲರ್( 800 ಕೋಟಿ) ಆಗಿದೆ. ಸ್ಕಾಟ್ ಸೂಪರ್‌ಯಾರ್ಚ್ ಕೇವಲ ಪ್ರಯಾಣಕ್ಕಾಗಿ ಇರುವ ದೋಣಿಯಾಗಿರಲಿಲ್ಲ. ಸಿಮೋನಿ ಅದನ್ನು ತನ್ನ ಕಚೇರಿಯಾಗಿ, ಮನೆಯಾಗಿ, ಬಳಸುತ್ತಿದ್ದರು. ಮತ್ತು ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದರು. ವರ್ಷದಲ್ಲಿ ಸುಮಾರು ಆರು ತಿಂಗಳ ಕಾಲ ಅವರು ಇದೇ ಹಡಗಿನಲ್ಲಿ ವಾಸಿಸುತ್ತಿದ್ದರು.
“ಸ್ಕಾಟ್” ಸೂಪರ್‌ಯಾರ್ಚ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿದ್ದು, ಐಷಾರಾಮಿ ಕೊಠಡಿಗಳು, ಹೆಲಿಪ್ಯಾಡ್, ಕಲಾ ಗ್ಯಾಲರಿ, ಉನ್ನತ ಮಟ್ಟದ ತಂತ್ರಜ್ಞಾನ ವ್ಯವಸ್ಥೆಗಳು ಮತ್ತು ವಿಶೇಷ ವಿಶ್ರಾಂತಿ ವಲಯಗಳಿದ್ದವು. ಯುರೋಪಿನ ಅನೇಕ ಪ್ರಮುಖ ಬಂದರುಗಳಲ್ಲಿ ಈ ಹಡಗು ಕಾಣಿಸಿಕೊಳ್ಳುತ್ತಿತ್ತು.
ಇದರ ವಿನ್ಯಾಸವೂ ವಿಶಿಷ್ಟವಾಗಿತ್ತು. ಸಾಮಾನ್ಯ ಯಾರ್ಚ್‌ಗಳಂತೆ ದುಂಡಾದ ವಿನ್ಯಾಸವನ್ನು ಬಿಟ್ಟು, ಮಿಲಿಟರಿ ಹಡಗನ್ನು ಹೋಲುವಂತೆ ಇದನ್ನು ನಿರ್ಮಿಸಲಾಗಿತ್ತು. ಬೂದು ಬಣ್ಣದ ಈ ಯಾರ್ಚ್‌ನ್ನು ಕೆಲವರು ಯುದ್ಧನೌಕೆ ಎಂದು ತಪ್ಪಾಗಿ ಭಾವಿಸಿದ್ದ ಉದಾಹರಣೆಗಳೂ ಇವೆ.
ಶಾಂತ ವಾತಾವರಣಕ್ಕಾಗಿ ವಿಶೇಷ ಶಬ್ದ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಲಾಗಿತ್ತು. ಎಂಜಿನ್ ಹಾಗೂ ಯಂತ್ರಗಳ ಶಬ್ದ ಒಳಭಾಗಕ್ಕೆ ತಲುಪದಂತೆ ತಂತ್ರಜ್ಞಾನ ಬಳಸಲಾಗಿದ್ದು, ಒಳಗೆ ಲೈಬ್ರರಿಯಷ್ಟು ನಿಶ್ಶಬ್ದ ವಾತಾವರಣ ನಿರ್ಮಾಣವಾಗುತ್ತಿತ್ತು.
ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ, ಬಾಹ್ಯಾಕಾಶ ಕ್ಷೇತ್ರದಲ್ಲೂ ಚಾರ್ಲ್ಸ್ ಸಿಮೋನಿ ಹೆಸರು ಮಾಡಿದ್ದರು. 2007 ಮತ್ತು 2009ರಲ್ಲಿ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದರು. ಎರಡು ಬಾರಿ ಬಾಹ್ಯಾಕಾಶ ಪ್ರವಾಸ ಮಾಡಿದ ಮೊದಲ ಖಾಸಗಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
2021ರಲ್ಲಿ “ಸ್ಕಾಟ್” ಯಾರ್ಚ್ ಮಾರಾಟ ಮಾಡಿದ ಬಳಿಕ ಅವರು “ನಾರ್ನ್” (Norn) ಎಂಬ ಇನ್ನಷ್ಟು ದೊಡ್ಡ ಹಾಗೂ ಐಷಾರಾಮಿ ಸೂಪರ್‌ಯಾರ್ಚ್ ಖರೀದಿಸಿದ್ದಾರೆ. ಸುಮಾರು 295 ಅಡಿ ಉದ್ದದ ಈ ಯಾರ್ಚ್ ಮೌಲ್ಯ 250 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಭೂಮಿಯ ಬದಲು ಸಮುದ್ರವನ್ನೇ ತಮ್ಮ ಮನೆಯನ್ನಾಗಿ ಮಾಡಿಕೊಂಡಿರುವ ಚಾರ್ಲ್ಸ್ ಸಿಮೋನಿ ಅವರ ಜೀವನಶೈಲಿ ಇಂದು ಜಗತ್ತಿನಾದ್ಯಂತ ಗಮನ ಸೆಳೆಯುತ್ತಿದೆ.





