ರಾಯಚೂರು: ಬೀದಿ ನಾಯಿಗಳ ದಾಳಿಗೆ ಒಂದೂವರೆ ವರ್ಷದ ಮಗು ಬಲಿಯಾದ ದಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ. ಮೃತ ಮಗುವಿನ ತಂದೆ-ತಾಯಿ ಕೊಪ್ಪಳ ಮೂಲದವರಾಗಿದ್ದು, ದೇವರ ಕಾರ್ಯದಲ್ಲಿ ಭಾಗವಹಿಸಲು ಕೆ. ಹಂಚಿನಾಳ ಕ್ಯಾಂಪ್‌ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
ಈ ಕುಟುಂಬ ದೇವರ ಕಾರ್ಯದಲ್ಲಿ ಭಾಗವಹಿಸಲು ಕೆ. ಹಂಚಿನಾಳ ಕ್ಯಾಂಪ್‌ನಲ್ಲಿ ತಮ್ಮ ಸಂಬಂಧಿಕರಾದ ರಸೂಲ್ ಸಾಬ್ ಎಂಬುವವರ ಮನೆಯಲ್ಲಿ ತಂಗಿತ್ತು. ಈ ಮನೆ ರಸ್ತೆ ಬದಿಯಲ್ಲೇ ಇರುವುದರಿಂದ ಹೊರಭಾಗದಲ್ಲಿ ಜನರ ಓಡಾಟ ಸಾಮಾನ್ಯವಾಗಿತ್ತು.ಘಟನೆಯ ದಿನ ರಾತ್ರಿ ಕುಟುಂಬದ ಸದಸ್ಯರು ದೇವರ ಕಾರ್ಯದ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಎಲ್ಲರೂ ವಿಶ್ರಾಂತಿಗೆ ತೆರಳಿದ್ದರು. ಮಗುವನ್ನು ಮನೆಯ ಹೊರಭಾಗದಲ್ಲಿ ಜೋಳಿಗೆಯಲ್ಲಿ ಮಲಗಿಸಲಾಗಿತ್ತು. ತಂದೆ-ತಾಯಿ ಹಾಗೂ ಇತರ ಕುಟುಂಬ ಸದಸ್ಯರು ಮನೆಯೊಳಗೆ ಮಲಗಿದ್ದರು ಎಂದು ತಿಳಿದುಬಂದಿದೆ.
ಬೆಳಗಿನ ಜಾವ ಮಗು ಜೋಳಿಗೆಯಿಂದ ಎದ್ದು ರಸ್ತೆಯತ್ತ ಬಂದಿರಬಹುದು ಎಂದು ಶಂಕಿಸಲಾಗಿದೆ. ಇದೇ ವೇಳೆ ಅಲ್ಲೇ ಸಂಚರಿಸುತ್ತಿದ್ದ ಬೀದಿ ನಾಯಿಗಳ ಗುಂಪು ಮಗುವಿನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಘಟನೆ ನಡೆದ ಸಮಯದಲ್ಲಿ ಮನೆಯೊಳಗಿನವರು ಗಾಢ ನಿದ್ರೆಯಲ್ಲಿದ್ದರು. ಈ ಕಾರಣಕ್ಕೆ ತಕ್ಷಣ ಅವರಿಗೆ ಮಾಹಿತಿ ದೊರಕಿಲ್ಲ.
ಕೆಲ ಸಮಯದ ಬಳಿಕ ಮಗುವಿನ ಅಳುವ ಶಬ್ದ ಕೇಳಿ ಕುಟುಂಬದವರು ಹೊರಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಷ್ಟರಲ್ಲಾಗಲೇ ಆನಂನನ್ನ ಬೀದಿ ನಾಯಿಗಳು ಕಚ್ಚಿ ಸಾಯಿಸಿವೆ. ಮಗುವಿನ ಮೇಲೆ ನಾಯಿಗಳು ದಾಳಿ ನಡೆಸಿದ ದೃಶ್ಯ ಕಂಡು ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಪೋಲಿಸರು ಭೇಟಿ ನೀಡಿದ್ದು, ಪರೀಶಿಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಇದು ಮೊದಲ ಘಟನೆ ಅಲ್ಲ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬೀದಿ ನಾಯಿಗಳ ದಾಳಿ ಪ್ರಕರಣಗಳು ವರದಿಯಾಗುತ್ತಿವೆ. 2023ರಲ್ಲಿ ಬೆಂಗಳೂರಿನಲ್ಲಿ ಶಾಲೆಗೆ ತೆರಳುತ್ತಿದ್ದ ಬಾಲಕನ ಮೇಲೆ ನಾಯಿಗಳ ಗುಂಪು ದಾಳಿ ನಡೆಸಿದ್ದ ಘಟನೆ ಭಾರೀ ಚರ್ಚೆಗೆ ಕಾರಣವಾಗಿತ್ತು.





