ಹರಾಡೂನ್ (ಜುಲೈ. 10) : ಉತ್ತರಾಖಂಡ ರಾಜ್ಯದಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತ ಭೀತಿಯಿಂದ ರಾಜ್ಯದ ಹಲವು ಭಾಗಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, 100ಕ್ಕೂ ಹೆಚ್ಚು ರಸ್ತೆಗಳನ್ನು ಬಂದ್ ಮಾಡಲಾಗಿದೆ. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಜನರು ಅನಗತ್ಯ ಪ್ರಯಾಣ ತಪ್ಪಿಸಿ ಸುರಕ್ಷಿತ ಸ್ಥಳಗಳಲ್ಲಿ ಉಳಿಯುವಂತೆ ಮನವಿ ಮಾಡಲಾಗಿದೆ.
ಹವಾಮಾನ ಇಲಾಖೆ ಶುಕ್ರವಾರ ಉತ್ತರಾಖಂಡದ ಹಲವು ಜಿಲ್ಲೆಗಳಿಗೆ ‘ರೆಡ್’ ಮತ್ತು ‘ಆರೆಂಜ್’ ಅಲರ್ಟ್ ಘೋಷಿಸಿದ್ದು, ಮುಂದಿನ ಕೆಲವು ಗಂಟೆಗಳು ಮತ್ತು ದಿನಗಳಲ್ಲಿಯೂ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಡೆಹ್ರಾಡೂನ್, ಹರಿದ್ವಾರ, ಪೌರಿ, ನೈನಿತಾಲ್, ತೆಹ್ರಿ ಮತ್ತು ಉಧಮ್ ಸಿಂಗ್ ನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನು ಉಧಮ್ ಸಿಂಗ್ ನಗರ, ನೈನಿತಾಲ್ ಹಾಗೂ ಚಂಪಾವತ್‌ನ ಕೆಲವು ಭಾಗಗಳಿಗೆ ರೆಡ್ ಅಲರ್ಟ್ ಜಾರಿಗೊಳಿಸಲಾಗಿದೆ.
ನಿರಂತರ ಮಳೆಯ ಪರಿಣಾಮ ಗುಡ್ಡಗಳು ಕುಸಿದು ಕಲ್ಲು-ಬಂಡೆಗಳು ರಸ್ತೆಗಳಿಗೆ ಬಿದ್ದಿರುವುದರಿಂದ ಸದ್ಯ 118 ರಸ್ತೆಗಳು ಸಂಚಾರಕ್ಕೆ ಅಸಾಧ್ಯವಾಗಿವೆ. ರುದ್ರಪ್ರಯಾಗದಲ್ಲಿ 22, ಡೆಹ್ರಾಡೂನ್‌ನಲ್ಲಿ 21, ಚಮೋಲಿಯಲ್ಲಿ 16, ನೈನಿತಾಲ್‌ನಲ್ಲಿ 13 ಹಾಗೂ ಪಿಥೋರಗಢ್‌ನಲ್ಲಿ 12 ರಸ್ತೆಗಳು ಬಂದ್ ಆಗಿರುವುದು ಪರಿಸ್ಥಿತಿಯ ತೀವ್ರತೆಯನ್ನು ತೋರಿಸುತ್ತದೆ. ಭೂಕುಸಿತದಿಂದ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯ ನಾಲುಪಾನಿ ಭಾಗದಲ್ಲಿ ವಾಹನ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಮತ್ತೊಂದೆಡೆ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ಸ್ಯಾನಾಚಟ್ಟಿ ಬಳಿ ಗುರುವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಸುಮಾರು 100 ಮೀಟರ್ ರಸ್ತೆ ಸಂಪೂರ್ಣ ಹಾನಿಗೊಳಗಾಗಿದೆ.
ಮಳೆ ಅಬ್ಬರದ ನಡುವೆ ರಾಜ್ಯದ ಪ್ರಮುಖ ನದಿಗಳೂ ಉಕ್ಕಿ ಹರಿಯುತ್ತಿವೆ. ಭಾಗೀರಥಿ ಮತ್ತು ಅಲಕನಂದಾ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಆತಂಕ ಹೆಚ್ಚಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿ ತೀರದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸ್ಥಳೀಯ ಆಡಳಿತ ಸೂಚಿಸಿದೆ.
ಉತ್ತರಾಖಂಡದಲ್ಲಿ ಮಳೆ ಮತ್ತು ಭೂಕುಸಿತದ ದ್ವಂದ್ವ ಸಂಕಷ್ಟ ಜನಜೀವನವನ್ನು ಹಿಂಸಿಸುತ್ತಿದ್ದು, ಸಂಚಾರ ವ್ಯವಸ್ಥೆ, ವ್ಯಾಪಾರ ಚಟುವಟಿಕೆಗಳು ಹಾಗೂ ದೈನಂದಿನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪ್ರವಾಸಿಗರು ಹಾಗೂ ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಹವಾಮಾನ ಇಲಾಖೆಯ ಮುನ್ಸೂಚನೆ ಗಮನಿಸಿದರೆ ಮುಂದಿನ ದಿನಗಳಲ್ಲೂ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇರುವುದರಿಂದ ಆಡಳಿತವು ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ವೇಗಗೊಳಿಸಿದೆ.





