ಬೆಂಗಳೂರು (ಜುಲೈ 2): ಜಾಗತಿಕ ಮಟ್ಟದ ಪ್ರಮುಖ ಪಾನೀಯ ಮತ್ತು ಸ್ನ್ಯಾಕ್ಸ್ ತಯಾರಿಕಾ ಕಂಪನಿಯಾದ ‘ಪೆಪ್ಸಿಕೋ ಇಂಡಿಯಾ’ ಮಧ್ಯಪ್ರದೇಶದ ಐತಿಹಾಸಿಕ ನಗರಿ ಉಜ್ಜಯಿನಿಯಲ್ಲಿ ಅತ್ಯಾಧುನಿಕ ‘ಫ್ಲೇವರ್ ಉತ್ಪಾದನಾ ಘಟಕ’ವನ್ನು ಭಾನುವಾರ ಅಧಿಕೃತವಾಗಿ ಆರಂಭಿಸಿದೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ಈ ಬೃಹತ್ ಘಟಕವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಈ ವೇಳೆ ಪೆಪ್ಸಿಕೋ ಇಂಟರ್‌ನ್ಯಾಷನಲ್ ಬೆವರೇಜಸ್‌ನ ಸಿಇಒ ಯುಜೀನ್ ವಿಲ್ಲೆಮ್ಸೆನ್, ಪೆಪ್ಸಿಕೋ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಸಿಇಒ ಜಾಗೃತ್ ಕೋಟೆಚಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಭಾರತದಲ್ಲಿ 2ನೇ, ಜಗತ್ತಿನ 9ನೇ ಘಟಕ!
ಪೆಪ್ಸಿಕೋ ಸಂಸ್ಥೆಯು ಉಜ್ಜಯಿನಿಯ ಈ ಘಟಕಕ್ಕಾಗಿ ಬರೋಬ್ಬರಿ 1,266 ಕೋಟಿ ರೂ. ಹೂಡಿಕೆ ಮಾಡಿದೆ. ಇದು ಭಾರತದಲ್ಲಿ ಪೆಪ್ಸಿಕೋ ನಿರ್ಮಿಸಿದ 2ನೇ ಫ್ಲೇವರ್ ಉತ್ಪಾದನಾ ಘಟಕವಾಗಿದ್ದು, ಜಾಗತಿಕ ಮಟ್ಟದಲ್ಲಿ 9ನೇ ಘಟಕವಾಗಿದೆ.
ಪೆಪ್ಸಿಕೋ ಉತ್ಪನ್ನಗಳಿಗೆ ಬೇಕಾದ ‘ಬೆವರೇಜ್ ಕಾನ್ಸಂಟ್ರೇಟ್’ (ಪಾನೀಯಗಳ ಮೂಲ ಸಾರಾಂಶ)ಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. 22 ಎಕರೆ ವಿಸ್ತೀರ್ಣದಲ್ಲಿರುವ ಈ ಘಟಕದಿಂದಾಗಿ ಸುಮಾರು 500 ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಜೊತೆಗೆ ಸ್ಥಳೀಯ ಎಂಎಸ್‌ಎಂಇ ಮತ್ತು ಪೂರಕ ಕೈಗಾರಿಕೆಗಳ ಬೆಳವಣಿಗೆಗೆ ಇದು ದೊಡ್ಡ ಮಟ್ಟದ ಬೂಸ್ಟ್ ನೀಡಲಿದೆ.
ಮೇಕ್ ಇನ್ ಇಂಡಿಯಾ ಆಶಯಕ್ಕೆ ಬಲ
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್, “ಪೆಪ್ಸಿಕೋ ಸಂಸ್ಥೆಯ ಈ ಹೂಡಿಕೆಯು ಮಧ್ಯಪ್ರದೇಶದ ಮೇಲಿರುವ ಜಾಗತಿಕ ಕಂಪನಿಗಳ ವಿಶ್ವಾಸವನ್ನು ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದ್ದು, ಮಧ್ಯಪ್ರದೇಶವು ಕೈಗಾರಿಕೆಗಳಿಗೆ ನೆಚ್ಚಿನ ತಾಣವಾಗಿ ಹೊರಹೊಮ್ಮುತ್ತಿದೆ. ಈ ಘಟಕದಿಂದ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗಲಿದ್ದು, ಆರ್ಥಿಕ ಪ್ರಗತಿಗೆ ಸಹಾಯವಾಗಲಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.
ಪೆಪ್ಸಿಕೋ ಇಂಡಿಯಾದ ಸಿಇಒ ಜಾಗೃತ್ ಕೋಟೆಚಾ ಮಾತನಾಡಿ, “ಭಾರತದೊಂದಿಗಿನ ನಮ್ಮ ಪಾಲುದಾರಿಕೆಗೆ ಈ ಘಟಕವೇ ಸಾಕ್ಷಿ. ‘ಭಾರತದಲ್ಲಿ, ಭಾರತಕ್ಕಾಗಿ’ ಎಂಬ ನಮ್ಮ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ. ಈ ಬೃಹತ್ ಯೋಜನೆಗೆ ಬೆಂಬಲ ನೀಡಿದ ಮಧ್ಯಪ್ರದೇಶ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ,” ಎಂದರು.
2030ರ ವೇಳೆಗೆ 5,700 ಕೋಟಿ ರೂ. ಹೂಡಿಕೆ ಗುರಿ
ಭಾರತವು ಪೆಪ್ಸಿಕೋಗೆ ಪ್ರಮುಖ ಮಾರುಕಟ್ಟೆಯಾಗಿದೆ. ಹೀಗಾಗಿ, 2030ರ ವೇಳೆಗೆ ಭಾರತದಲ್ಲಿ ಒಟ್ಟು 5,700 ಕೋಟಿ ರೂ. ಹೂಡಿಕೆ ಮಾಡುವ ಬೃಹತ್ ಗುರಿಯನ್ನು ಪೆಪ್ಸಿಕೋ ಹೊಂದಿದೆ. ಉಜ್ಜಯಿನಿ ಘಟಕವು ಇದೇ ಹೂಡಿಕೆಯ ಒಂದು ಭಾಗವಾಗಿದೆ. ಈಗಾಗಲೇ ಮಧ್ಯಪ್ರದೇಶದ 2,000ಕ್ಕೂ ಹೆಚ್ಚು ರೈತರೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪೆಪ್ಸಿಕೋ, ಲೇಸ್ ಚಿಪ್ಸ್‌ಗೆ ಬೇಕಾದ ಆಲೂಗಡ್ಡೆಯನ್ನು ಅವರಿಂದಲೇ ಖರೀದಿಸುವ ಮೂಲಕ ರೈತರಿಗೂ ನೆರವಾಗುತ್ತಿದೆ.
ಸಂಪೂರ್ಣ ಪರಿಸರ ಸ್ನೇಹಿ ಘಟಕ
ಪೆಪ್ಸಿಕೋ ತನ್ನ ಈ ಹೊಸ ಘಟಕವನ್ನು ಸಂಪೂರ್ಣ ಪರಿಸರ ಸ್ನೇಹಿಯಾಗಿ ವಿನ್ಯಾಸಗೊಳಿಸಿದೆ. ಈ ಘಟಕವು ಶೇ. 100ರಷ್ಟು ನವೀಕರಿಸಬಹುದಾದ ವಿದ್ಯುತ್ ಶಕ್ತಿಯಿಂದಲೇ ಕಾರ್ಯನಿರ್ವಹಿಸಲಿದೆ. ಇಲ್ಲಿ ‘ಶೂನ್ಯ ತ್ಯಾಜ್ಯ ನೀರು’ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಘಟಕದಲ್ಲಿ ಬಳಸಲಾದ ಶೇ. 100ರಷ್ಟು ನೀರನ್ನು ಮರುಪೂರಣ ಮಾಡುವ ಮೂಲಕ ಜಲ ಸಂರಕ್ಷಣೆಗೂ ಸಂಸ್ಥೆ ಒತ್ತು ನೀಡಿದೆ.





