ಬೆಂಗಳೂರು (ಜೂನ್ 20): ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್, ರೈತರ ಪರವಾಗಿ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದೆ. ಯೋಜನೆ ವಿರೋಧಿಸಿ ನಾಳೆ (ಜೂನ್ 21) “ನಮ್ಮ ಭೂಮಿ-ನಮ್ಮ ಹಕ್ಕು” ಹೆಸರಿನಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯಲಿರುವ ಈ ಪಾದಯಾತ್ರೆ ಎರಡು ಹಂತಗಳಲ್ಲಿ ಆಯೋಜನೆಯಾಗಿದ್ದು, ಮೊದಲ ಹಂತದಲ್ಲಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಯ 10 ಗ್ರಾಮಗಳಲ್ಲಿ ಸುಮಾರು 11 ಕಿಲೋಮೀಟರ್ ಪಾದಯಾತ್ರೆ ನಡೆಸಲಾಗುತ್ತದೆ. ಅಂಚಿಪುರ, ಅಂಚಿಪುರ ಕಾಲೋನಿ, ಬನ್ನಿಗಿರಿ, ಮೆರವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಹಾಗೂ ಹೊಸೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ.
ಈ ನಡುವೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಪ್ರತಿಕ್ರಿಯಿಸಿ, ರೈತರ ಹೋರಾಟದ ಬಗ್ಗೆ ನಮಗೆ ಸಂಪೂರ್ಣ ಜವಾಬ್ದಾರಿ ಇದೆ ಎಂದು ಹೇಳಿದ್ದಾರೆ. “ಬಿಡದಿ
ಟೌನ್‌ಶಿಪ್ ನನ್ನ ಕೂಸು ಎಂದು ಹೇಳಿದ್ದೇನೆ. ಆದರೆ ಜನರಿಗೆ ನೋವು ಕೊಟ್ಟು ಯಾವುದೇ ಯೋಜನೆಯನ್ನು ಮುಂದುವರಿಸುವುದಿಲ್ಲ. ರೈತರ ಒಂದಿಂಚು ಫಲವತ್ತಾದ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ನಾನು 2007ರ ವಿಧಾನಸಭೆ ಕಲಾಪದಲ್ಲಿಯೇ ಸ್ಪಷ್ಟವಾಗಿ ಹೇಳಿದ್ದೇನೆ. ಅದರ ದಾಖಲೆಗಳು ಇಂದಿಗೂ ಇವೆ” ಎಂದು ಅವರು ತಿಳಿಸಿದ್ದಾರೆ.
2007ರ ಜುಲೈ 30, 31 ಹಾಗೂ ಆಗಸ್ಟ್ 1ರಂದು ನಡೆದ ವಿಧಾನಸಭೆ ಕಲಾಪದಲ್ಲಿ ಬಿಡದಿ ಮಾತ್ರವಲ್ಲದೆ ರಾಜ್ಯದ ಐದು ಟೌನ್‌ಶಿಪ್‌ಗಳ ಬಗ್ಗೆ ಚರ್ಚೆಯಾಗಿದ್ದು, ಅಂದಿನ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಾಯಕರು ಈ ಕುರಿತು ನಡೆಸಿದ ಚರ್ಚೆಗಳ ದಾಖಲೆಗಳು ಲಭ್ಯವಿವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಭೂಸ್ವಾಧೀನ ಪರಿಹಾರಕ್ಕೆ ಸಂಬಂಧಿಸಿದಂತೆ ಕೆಲ ರೈತರಿಗೆ ನೀಡಲಾದ ಚೆಕ್‌ಗಳ ವಿಚಾರವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, 500 ಎಕರೆ ಭೂಸ್ವಾಧೀನಕ್ಕೆ ನೋಟಿಫಿಕೇಶನ್ ಹೊರಡಿಸಿದ್ದರೂ ಕೇವಲ ಏಳು ಜನರಿಗೆ ಮಾತ್ರ ಚೆಕ್ ವಿತರಣೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪ್ರಶ್ನಿಸಿದರು.
ಭೂಸ್ವಾಧೀನ ಪರಿಹಾರದ ಚೆಕ್‌ಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಸಂಬಂಧಪಟ್ಟ ಅಧಿಕಾರಿಗಳು ನೀಡಬೇಕು. ಆದರೆ ಈಗ ಶಾಸಕರ ಮೂಲಕ ಚೆಕ್ ವಿತರಿಸುವ ಹೊಸ ಪದ್ಧತಿ ಆರಂಭಿಸಿರುವುದು ಏಕೆ?” ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ರೈತರು ತಾತ್ಕಾಲಿಕ ಹಣದ ಆಮಿಷಕ್ಕೆ ಒಳಗಾಗದೆ ತಮ್ಮ ಭೂಮಿಯನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾನೂನು ಹೋರಾಟದ ಜೊತೆಗೆ ರೈತರೊಂದಿಗೆ ನಾವು ಸದಾ ಇರುತ್ತೇವೆ ಎಂಬ ಸಂದೇಶವನ್ನು ನೀಡುವ ಉದ್ದೇಶದಿಂದ ಜೆಡಿಎಸ್ ಈ ಪಾದಯಾತ್ರೆಯನ್ನು ಆಯೋಜಿಸಿದ್ದು, ಹೋರಾಟಕ್ಕೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.





