ಎ.ಕೆ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಮೊಹಮ್ಮದ್ ಅತೀಕ್ ನಿರ್ಮಾಣ ಮಾಡುತ್ತಿರುವ, ಶ್ರೀನಿವಾಸ್ ಜಯರಾಮ್ ಕಥೆ ಬರೆದು ನಿರ್ದೇಶಿಸುತ್ತಿರುವ ‘ಪತ್ತೇದಾರಿ’ ಚಿತ್ರದ ಪೋಸ್ಟರ್ ಅನಾವರಣ ಸಮಾರಂಭ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಚಿತ್ರದ ಮೂಲಕ ಕಿಝಾರ್ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವಾರು ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಮಾರಂಭದಲ್ಲಿ ನಟರಾದ ಮಯೂರ್ ಪಟೇಲ್, ‘ಶಿಷ್ಯ’ ದೀಪಕ್, ಕಾಕ್ರೋಜ್ ಸುಧೀ, ಚೆಲುವರಾಜ್, ಅರವಿಂದ್, ಗಿರೀಶ್ ಜತ್ತಿ, ‘ಭೀಮ’ ಖ್ಯಾತಿಯ ನಟಿ ಪ್ರಿಯಾ, ‘ಕೆಜಿಎಫ್’ ರೆಡ್ಡಿ, ವಿಕ್ಟರಿ ವಾಸು, ನಿರ್ದೇಶಕ ಸಹನಮೂರ್ತಿ ಹಾಗೂ ಪತ್ರಕರ್ತ ಮತ್ತು ನಿರೂಪಕ ಹರೀಶ್ ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಎಲ್ಲರೂ ಸೇರಿ ಚಿತ್ರದ ಪೋಸ್ಟರ್ ಅನಾವರಣಗೊಳಿಸಿ ಚಿತ್ರ ಯಶಸ್ವಿಯಾಗಲೆಂದು ಶುಭಕೋರಿದರು.
ನಂತರ ಮಾತನಾಡಿದ ನಿರ್ದೇಶಕ ಶ್ರೀನಿವಾಸ್ ಜಯರಾಮ್, ‘ಗಜಪಡೆ’ ಚಿತ್ರದ ಬಳಿಕ ನಿರ್ದೇಶಿಸುತ್ತಿರುವ ತಮ್ಮ ಎರಡನೇ ಸಿನಿಮಾ ‘ಪತ್ತೇದಾರಿ’. ಶೀರ್ಷಿಕೆಗೆ ತಕ್ಕಂತೆ ಇದು ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಇದೇ ಮಾದರಿಯ ಅನೇಕ ಚಿತ್ರಗಳಿಂದ ಪ್ರೇರಣೆ ಪಡೆದು ವಿಭಿನ್ನ ರೀತಿಯ ಕಥೆ ಹಾಗೂ ಚಿತ್ರಕಥೆಯನ್ನು ರೂಪಿಸಲಾಗಿದೆ ಎಂದರು.
ಚಿತ್ರದಲ್ಲಿ ನಾಲ್ಕು ಪ್ರಮುಖ ಪಾತ್ರಗಳ ಸುತ್ತ ಕಥೆ ಸಾಗಲಿದ್ದು, ನಾಯಕ ಕಿಝಾರ್ ಜೊತೆಗೆ ಗಿರಿ, ರೂಪ ಹಾಗೂ ಸಿದ್ದೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು, ಮುಂದಿನ ತಿಂಗಳಿಂದ ಶೂಟಿಂಗ್ ಆರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ನಾಯಕ ಕಿಝಾರ್ ಮಾತನಾಡಿ, ನಿರ್ದೇಶಕರು ಹೇಳಿದ ಕಥೆ ಮತ್ತು ತಮ್ಮ ಪಾತ್ರ ಎರಡೂ ಬಹಳ ಇಷ್ಟವಾಗಿದ್ದು, ಯಾವುದೇ ನಟನಾ ಶಾಲೆಯಲ್ಲಿ ತರಬೇತಿ ಪಡೆಯದೆ ಕನ್ನಡದ ಮೇರು ನಟರಾದ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಶಿವರಾಜಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡಿ ಅಭಿನಯ ಕಲಿತಿದ್ದೇನೆ ಎಂದು ಹೇಳಿದರು. ಈ ದಿಗ್ಗಜರೇ ತಮ್ಮ ಸ್ಪೂರ್ತಿ ಎಂದು ಅವರು ತಿಳಿಸಿದರು.
ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಸಿದ್ದೇಶ್, ನಿರ್ದೇಶಕರು ಉತ್ತಮ ಕಥೆಯನ್ನು ಸಿದ್ಧಪಡಿಸಿದ್ದು, ಎ.ಕೆ. ಪ್ರೊಡಕ್ಷನ್ಸ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದೆ. ತಮ್ಮ ಪಾತ್ರಕ್ಕೂ ವಿಶೇಷ ಮಹತ್ವವಿದೆ ಎಂದು ಹೇಳಿದರು.
ನಟಿ ರೂಪ ಮಾತನಾಡಿ, ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಕ್ರೈಮ್ ಥ್ರಿಲ್ಲರ್ ಕಥೆಯಾಗಿದ್ದು, ಕಥೆ ಮತ್ತು ತಮ್ಮ ಪಾತ್ರ ಎರಡೂ ಆಕರ್ಷಕವಾಗಿವೆ ಎಂದರು. ಇದೇ ವೇಳೆ ನಟ ಕಾಕ್ರೋಜ್ ಸುಧೀ, ಈ ಹಿಂದೆ ನಿರ್ದೇಶಕ ಹಾಗೂ ನಾಯಕನೊಂದಿಗೆ ಕೆಲಸ ಮಾಡಿರುವ ಅನುಭವವಿದ್ದು, ‘ಪತ್ತೇದಾರಿ’ ಚಿತ್ರದಲ್ಲೂ ಅಭಿನಯಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.





