ಕೇಂದ್ರ ಸರ್ಕಾರ ಶೀಘ್ರದಲ್ಲೇ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರಿಗೆ ಮಹತ್ವದ ಡಿಜಿಟಲ್ ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ. ಹೊಸ ವ್ಯವಸ್ಥೆ ಜಾರಿಗೆ ಬಂದ ಬಳಿಕ ಪಿಎಫ್ (PF) ಹಣವನ್ನು ಹಿಂಪಡೆಯುವ ಪ್ರಕ್ರಿಯೆ ಇನ್ನಷ್ಟು ಸುಲಭವಾಗಲಿದೆ ಎಂದು ಹೇಳಲಾಗುತ್ತಿದೆ. ಇನ್ಮುಂದೆ ಪಿಎಫ್ ಚಂದಾದರರು ಯುಪಿಐ (UPI) ಆ್ಯಪ್‌ಗಳು ಮತ್ತು EPFO ಗೆ ಲಿಂಕ್ ಆಗಿರುವ ಎಟಿಎಂ ಸೇವೆಗಳ ಮೂಲಕ ತಮ್ಮ ಹಣ ಪಡೆಯಲು ಸಾಧ್ಯವಾಗಲಿದೆ.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಈ ನೂತನ ತಂತ್ರಜ್ಞಾನ ಆಧಾರಿತ ಸೌಲಭ್ಯವು ಇದೇ ಜೂನ್ ತಿಂಗಳ ಅಂತ್ಯದ ವೇಳೆಗೆ ಅಧಿಕೃತವಾಗಿ ಜಾರಿಗೆ ಬರುವ ಸಾಧ್ಯತೆ ಇದೆ. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೂಡ ಈ ಯೋಜನೆಯ ಕುರಿತು ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವ ಸೂಚನೆ ನೀಡಿದ್ದಾರೆ.
ಪ್ರಯೋಗ ಪರೀಕ್ಷೆ ಯಶಸ್ವಿ
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಈ ಅತ್ಯಾಧುನಿಕ ಸೌಲಭ್ಯದ ವ್ಯವಸ್ಥೆಯ ಪರೀಕ್ಷೆಗಳು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ತಕ್ಷಣವೇ ಶೇ.75ರಷ್ಟು ಹಣ ಲಭ್ಯ!
ಹೊಸ ನಿಯಮಗಳ ಪ್ರಕಾರ, EPFO ಸದಸ್ಯರು ತಮ್ಮ PF ಖಾತೆಯಲ್ಲಿರುವ ಮೊತ್ತದ ಶೇ.75ರ ವರೆಗೆ ಹಣವನ್ನು ತುರ್ತು ಸಂದರ್ಭಗಳಲ್ಲಿ ಯುಪಿಐ ಅಥವಾ UPI ಸೌಲಭ್ಯ ಹೊಂದಿರುವ ಎಟಿಎಂಗಳ ಮೂಲಕ ತಕ್ಷಣವೇ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳುವ ಅವಕಾಶ ಪಡೆಯಬಹುದು.
ಪ್ರಸ್ತುತ ಇರುವ ನಿಯಮಗಳ ಪ್ರಕಾರ, PF ಹಣ ಪಡೆಯಲು ಸದಸ್ಯರು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಕ್ಲೈಮ್ ಸಲ್ಲಿಸಿ, ಅನುಮೋದನೆಗಾಗಿ ಹಲವು ದಿನಗಳ ಕಾಲ ಕಾಯಬೇಕಾಗುತ್ತಿತ್ತು. ಹೊಸ ವ್ಯವಸ್ಥೆಯಿಂದ ಈ ದೀರ್ಘ ಪ್ರಕ್ರಿಯೆಗೆ ಕಡಿವಾಣ ಬೀಳಲಿದ್ದು, ಸಮಯ ಉಳಿತಾಯವಾಗಲಿದೆ.
ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಇತರೆ ಅಗತ್ಯ ಸಂದರ್ಭಗಳಲ್ಲಿ ಉದ್ಯೋಗಿಗಳಿಗೆ ತಮ್ಮದೇ ಉಳಿತಾಯದ ಹಣವನ್ನು ವೇಗವಾಗಿ ಬಳಸಿಕೊಳ್ಳಲು ಈ ಸೌಲಭ್ಯ ಸಹಕಾರಿಯಾಗಲಿದೆ. ಆದರೆ, ಹಣದ ಸುರಕ್ಷತೆಗಾಗಿ ಬಲವಾದ ದೃಢೀಕರಣ (Authentication) ಮತ್ತು ವಂಚನೆ ತಡೆ ಕ್ರಮಗಳು ಅತ್ಯಂತ ಮುಖ್ಯವಾಗಲಿವೆ.
ಖಾಸಗಿ ಹಣಕಾಸು ತಂತ್ರಜ್ಞಾನ ಸಂಸ್ಥೆ ‘ರೆಡ್ಯೂಕ್ಯೂ’ ನ ಸಿಇಒ ದೀಪಾಲ್ ದತ್ತಾ ಅವರ ಪ್ರಕಾರ, EPFO 3.0 ಭಾರತದಲ್ಲಿನ ಡಿಜಿಟಲ್ ಹಣಕಾಸು ಪಾವತಿ ವ್ಯವಸ್ಥೆಯ ಮತ್ತೊಂದು ಪ್ರಮುಖ ಹೆಜ್ಜೆಯಾಗಲಿದೆ. “ಲಕ್ಷಾಂತರ ಉದ್ಯೋಗಿಗಳಿಗೆ ಅವರ ಪ್ರಾವಿಡೆಂಟ್ ಫಂಡ್ (PF) ಉಳಿತಾಯವೇ ಅವರ ಬದುಕಿನ ಅತ್ಯಂತ ದೊಡ್ಡ ಹಣಕಾಸು ಆಸ್ತಿಯಾಗಿರುತ್ತದೆ. ನಿವೃತ್ತಿ ಉಳಿತಾಯದಂತಹ ಮಹತ್ವದ ನಿಧಿಯನ್ನು ಆಧುನಿಕ ಡಿಜಿಟಲ್ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಮೂಲಕ ಗ್ರಾಹಕರಿಗೆ ಹೆಚ್ಚು ವೇಗವಾದ ಮತ್ತು ಪಾರದರ್ಶಕ ಸೇವೆ ದೊರೆಯಲಿದೆ.
ಈ ಬದಲಾವಣೆಯು ಅನೇಕ ಸಂಬಳ ಪಡೆಯುವ ಉದ್ಯೋಗಿಗಳಿಗೆ ಅನುಕೂಲವಾಗುವ ಸಾಧ್ಯತೆಯಿದ್ದು, ಭಾರತದ ಡಿಜಿಟಲ್ ಆರ್ಥಿಕ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲಾಗಲಿದೆ.





