ಉತ್ತರ ಪ್ರದೇಶ: ನವದಂಪತಿಗಳ ಹನಿಮೂನ್ ಪ್ರವಾಸವು ಪ್ರೀತಿ, ರೋಮಾನ್ಸ್ ಮತ್ತು ಖಾಸಗಿ ಕ್ಷಣಗಳ ಸಂಕೇತ. ಆದರೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಒಂದು ಘಟನೆ ಈ ಕಲ್ಪನೆಯನ್ನೇ ತಲೆಕೆಳಗಾಗುವಂತೆ ಮಾಡಿದೆ. ಹನಿಮೂನ್‌ಗೆ ಇಬ್ಬರ ಬದಲು ಇಡೀ ಕುಟುಂಬ ಕಾಣಿಸಿಕೊಂಡಿದ್ದರಿಂದ ಸಿಟ್ಟಿಗೆದ್ದ ನವವಧು, ಪ್ರವಾಸ ಮುಗಿದ ಕೂಡಲೇ ಗಂಡನಿಂದ ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ್ದಾಳೆ.
ದಿಲ್ಲಿಯ ಯುವಕನೊಬ್ಬನಿಗೆ ಮೀರತ್ ಜಿಲ್ಲೆಯ ಯುವತಿಯೊಂದಿಗೆ ಅರೇಂಜ್ ಮ್ಯಾರೇಜ್ ಆಗಿತ್ತು. ಸಂಪ್ರದಾಯದಂತೆ ಮದುವೆ ನಡೆದಿತ್ತು. ಮದುವೆಯ ನಂತರ ಹನಿಮೂನ್ ಟ್ರಿಪ್ ಪ್ಲಾನ್ ಮಾಡಲಾಯಿತು. ಆದರೆ ಆಕೆಯು ಇಬ್ಬರೂ ಏಕಾಂತದಲ್ಲಿ ಸಮಯ ಕಳೆಯುವ, ಹೊಸ ಸಂಬಂಧಕ್ಕೆ ತಳಹದಿ ಹಾಕುವ ಕನಸು ಕಂಡಿದ್ದಳು.
ಆದರೆ ಹನಿಮೂನ್ ಪ್ರಾರಂಭವಾದ ದಿನವೇ ಅವಳ ಕನಸು ಭಗ್ನವಾಯಿತು. ಟ್ರಿಪ್‌ಗೆ ತಾನು ಮತ್ತು ಗಂಡ ಮಾತ್ರವಲ್ಲ, ಗಂಡನ ತಂದೆ-ತಾಯಿ, ಸಹೋದರ, ಸಹೋದರಿಯರು ಸೇರಿದಂತೆ ಇಡೀ ಕುಟುಂಬವೇ ಬಂದಿದ್ದರು.
ನವವಧುಗೆ ಆಘಾತ, ಗಂಡನಿಗೆ ತಿಳಿಯದ ಪಾಠ
ಹನಿಮೂನ್ ಸಂದರ್ಭದಲ್ಲಿ ವಧು ತನ್ನ ಅಸಮಾಧಾನ ವ್ಯಕ್ತಪಡಿಸಿದಳು. ಆದರೆ ಗಂಡ ಮತ್ತು ಅತ್ತೆ-ಮಾವಂದಿರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಪ್ರವಾಸ ಮುಗಿಸಿ ಮನೆಗೆ ಬಂದ ಕೂಡಲೇ, ವಧು ನೇರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಇದು ಗಂಡನಿಗೆ ಶಾಕ್ ಆಯಿತು. “ನಾವು ಹನಿಮೂನ್ ಮುಗಿಸಿ ಬಂದೆವು, ಅದರಲ್ಲಿ ತಪ್ಪೇನಿತ್ತು?” ಎಂದು ಗಂಡ ಕೇಳಿದನು. ಆದರೆ ವಧು“ಹನಿಮೂನ್ ಗೆ ಇಬ್ಬರೇ ಹೋಗಬೇಕಿತ್ತು.. ಇಡೀ ಕುಟುಂಬ ಬಂದಿದ್ದೇಕೆ..? ಎಂದು ಸಿಟ್ಟಿಗೆದ್ದು ಪ್ರಶ್ನಿಸಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.
ಈ ವಿಚ್ಛೇದನ ಅರ್ಜಿಯನ್ನು ನೋಡಿದ ಕೋರ್ಟ್ ಮತ್ತು ದಂಪತಿಗಳ ಆಪ್ತ ಸಮಾಲೋಚಕರು ದಂಗಾಗಿದ್ದಾರೆ. ಸಾಮಾನ್ಯವಾಗಿ ಹೊಡೆದಾಟ, ವಂಚನೆ, ಹಣದ ಸಮಸ್ಯೆ, ಹೊಂದಾಣಿಕೆಯಾಗದಿರುವಿಕೆ ಇವು ವಿಚ್ಛೇದನಕ್ಕೆ ಸಾಮಾನ್ಯ ಕಾರಣಗಳಾಗಿರುತ್ತವೆ. ಕೆಲವರು ವಧುವಿನ ಬೆಂಬಲಕ್ಕೆ ನಿಂತರೆ, ಇನ್ನು ಕೆಲವರು “ಇದು ಸಣ್ಣ ವಿಷಯಕ್ಕೆ ದೊಡ್ಡ ನಿರ್ಧಾರ” ಎಂದಿದ್ದಾರೆ.
ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೆಲವರು “ವಧು ಸರಿಯಾಗಿಯೇ ಮಾಡಿದ್ದಾಳೆ, ಹನಿಮೂನ್ ಎಂದರೆ ಕುಟುಂಬದ ಜೊತೆ ಪ್ರವಾಸ ಅಲ್ಲ” ಎಂದಿದ್ದಾರೆ. ಇನ್ನು ಕೆಲವರು “ಮದುವೆ ಎಂದರೆ ಹೊಂದಾಣಿಕೆ, ಅಷ್ಟೊಂದು ಸಣ್ಣ ವಿಷಯಕ್ಕೆ ಡೈವೋರ್ಸ್ ಸರಿಯಲ್ಲ” ಎಂದು ವಾದಿಸುತ್ತಾರೆ.





