ಬೆಂಗಳೂರು, ಜೂನ್ 07: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ತಮ್ಮ ತವರು ಕ್ಷೇತ್ರ ಕನಕಪುರಕ್ಕೆ ಭೇಟಿ ನೀಡುತ್ತಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರು ಇಂದು ವಿಶೇಷ ಪ್ರಯಾಣ ಮಾಡಿದ್ದಾರೆ. ನಕಪುರ ಪ್ರವಾಸದ ವೇಳೆ ಸಾರ್ವಜನಿಕರಿಗೆ ಯಾವುದೇ ರೀತಿಯ ಟ್ರಾಫಿಕ್ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಅವರು ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ಬಳಸದೇ, ಮೆಟ್ರೋ ರೈಲಿನಲ್ಲಿಯೇ ಪ್ರಯಾಣಿಸಿದ್ದಾರೆ.
ಮೆಟ್ರೋದಲ್ಲೇ ಕನಕಪುರ ರಸ್ತೆಗೆ ಸಿಎಂ ಪ್ರಯಾಣ
ವಿಧಾನಸೌಧದ ಬಳಿಯ ಮೆಟ್ರೋ ನಿಲ್ದಾಣದಿಂದ ಹತ್ತಿದ ಸಿಎಂ ಡಿಕೆಶಿ, ಕನಕಪುರ ರಸ್ತೆಯ ಕೊನೆಯ ಮೆಟ್ರೋ ಸ್ಟೇಷನ್ವರೆಗೆ ಸಾರ್ವಜನಿಕರ ಜೊತೆಯಲ್ಲೇ ಪ್ರಯಾಣಿಸಿದರು. ಯಾವುದೇ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ಅನುಸರಿಸದೆ, ಸಾಮಾನ್ಯ ಪ್ರಯಾಣಿಕರಂತೆ ರೈಲಿನಲ್ಲಿ ಸಂಚರಿಸಿದರು.
ಪ್ರಯಾಣಿಕರ ಜೊತೆ ಕುಶಲೋಪಚಾರ, ಮಗುವಿಗೆ ಚಾಕ್ಲೇಟ್ ವಿನಿಮಯ
ಮೆಟ್ರೋ ರೈಲಿನಲ್ಲಿ ಪ್ರಯಾಣಿಕರೊಂದಿಗೆ ಸಿಎಂ ಮುಕ್ತವಾಗಿ ಸಂವಾದ ನಡೆಸಿದರು. ಒಬ್ಬ ಮುದ್ದಾದ ಪುಟಾಣಿ ಮಗುವಿನ ಬಳಿಗೆ ಹೋಗಿ, ಅದರೊಂದಿಗೆ ಮಾತುಕತೆ ನಡೆಸಿದರು. ನಂತರ ಮಗುವಿಗೆ ಚಾಕ್ಲೇಟ್ ನೀಡಿ ಸಂತಸದ ಕ್ಷಣವನ್ನು ಹಂಚಿಕೊಂಡರು. ಈ ವೇಳೆ ರೈಲಿನಲ್ಲಿದ್ದ ಯುವತಿಯರೊಂದಿಗೂ ಸೆಲ್ಫಿಗೆ ಕೇಳಿಕೊಂಡಾಗ, ಸಿಎಂ ತಕ್ಷಣ ಒಪ್ಪಿಕೊಂಡು ಎಲ್ಲರ ಜೊತೆ ಫೋಟೋಗೆ ಪೋಸ್ ನೀಡಿದರು. ಪ್ರಯಾಣಿಕರೆಲ್ಲರಿಗೂ ಧನ್ಯವಾದ ತಿಳಿಸಿದರು.
ವಿಶೇಷ ಕಾರ್ಯಕ್ರಮ
ಸದಾಶಿವನಗರದಲ್ಲಿನ ತಮ್ಮ ನಿವಾಸದಿಂದ ಇಂದು ಬೆಳಗ್ಗೆ ಹೊರಟ ಸಿಎಂ, ಮೊದಲು ಮೆಟ್ರೋದಲ್ಲಿ ಪ್ರಯಾಣಿಸಿ ನಂತರ ಕನಕಪುರ ತಾಲೂಕಿನ ವಿವಿಧೆಡೆ ಕೃತಜ್ಞತಾ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ಕ್ಷೇತ್ರದ ಜನರಿಗೆ ಧನ್ಯವಾದ ಅರ್ಪಿಸಿಕೊಳ್ಳುವುದು ಅವರ ಮುಖ್ಯ ಉದ್ದೇಶವಾಗಿದೆ.
ಸಿಎಂ ಡಿಕೆಶಿ ಅವರು ಇಡೀ ದಿನ ಕನಕಪುರ ತಾಲೂಕಿನಾದ್ಯಂತ ವೇಗದ ಸಂಚಾರ ನಡೆಸಲಿದ್ದು, ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಅವರು ಸಾಮಾನ್ಯ ಜನರ ಮಧ್ಯೆ ಬೆರೆಯಲು, ಟ್ರಾಫಿಕ್ ಸಮಸ್ಯೆ ತಪ್ಪಿಸುವ ಮತ್ತು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಸಂದೇಶವನ್ನು ನೀಡಿದ್ದಾರೆ.





