ಬಾಲಿವುಡ್ನ ‘ಸುಲ್ತಾನ್’ ಸಲ್ಮಾನ್ ಖಾನ್ ಅಂದ್ರೆ ಕೇವಲ ಆಕ್ಷನ್, ರೋಮ್ಯಾನ್ಸ್ ಮಾತ್ರವಲ್ಲ, ಅವರ ಸುತ್ತಲೂ ಸದಾ ಹತ್ತಾರು ವಿವಾದಗಳು, ರೋಚಕ ಕಥೆಗಳು ಸುತ್ತುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ಅವರ ಒಂದು ಹಳೆಯ ಹೇಳಿಕೆ ಭಾರಿ ವೈರಲ್ ಆಗ್ತಿದೆ. ಹಿಂದೂ ಧರ್ಮ, ಗೋಮಾತೆ ಬಗ್ಗೆ ಸಲ್ಲು ಭಾಯ್ ಏನು ಹೇಳಿದ್ದಾರೆ ಗೊತ್ತಾ..? ಹಾಗಾದ್ರೆ ಏನಿದು ಸಲ್ಮಾನ್ ಖಾನ್ ಅವರ ‘ಹಿಂದೂ ಕನೆಕ್ಷನ್’..? ಇಂದಿಗೂ ಅವರನ್ನು ಕಾಡುತ್ತಿರುವ ಆ ಕೃಷ್ಣಮೃಗ ಬೇಟೆಯ ವಿವಾದದ ಕರಾಳ ಮುಖವಾದ್ರೂ ಏನು..? ಈ ಎಲ್ಲಾ ಮಸಾಲೇದಾರ್ ಇನ್ಫಾರ್ಮೇಷನ್ ಇಲ್ಲಿದೆ..
- ಹಸು ನಮ್ಮ ತಾಯಿ, ಬೀಫ್ ಮುಟ್ಟಲ್ಲ..ಸಲ್ಮಾನ್ ಹಿಂದೂ ಕನೆಕ್ಷನ್
- ಹಿಂದೂ ತಾಯಿ, ಮುಸ್ಲಿಂ ತಂದೆ ಸಲ್ಲು ಭಾಯ್ ಸಂಸ್ಕಾರದ ಸೀಕ್ರೆಟ್..!
- ಗೋಮಾತೆ ಗೌರವಿಸುವ ಸಲ್ಮಾನ್ಗೆ ಜೀವ ಬೆದರಿಕೆ ಯಾಕೆ..?
- ಗೋಮಾತೆ ನನ್ನ ತಾಯಿ ಎಂದ ಸಲ್ಮಾನ್ಗೆ ಕೃಷ್ಣಮೃಗ ಕಂಟಕ..!
ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ಒಂದು ಮಹತ್ವದ ಹೇಳಿಕೆ ವೈರಲ್ ಆಗಿದೆ. “ನಾನು ಗೋಮಾಂಸ ಮತ್ತು ಹಂದಿ ಮಾಂಸ ಹೊರತುಪಡಿಸಿ ಎಲ್ಲವನ್ನೂ ತಿನ್ನುತ್ತೇನೆ. ನನಗೆ ಹಸು ತಾಯಿಯಿದ್ದಂತೆ, ಯಾಕಂದ್ರೆ ನನ್ನ ಸ್ವಂತ ತಾಯಿ ಒಬ್ಬ ಹಿಂದೂ” ಎಂದು ಸಲ್ಮಾನ್ ಖಾನ್ ಹೇಳಿರುವುದು ಈಗ ಸಖತ್ ಸೌಂಡ್ ಮಾಡ್ತಿದೆ. ಮುಸ್ಲಿಂ ಧರ್ಮದ ತಂದೆ ಸಲೀಂ ಖಾನ್ ಹಾಗೂ ಹಿಂದೂ ಧರ್ಮದ ತಾಯಿ ಸುಶೀಲಾ ಚರಕ್ ಅವರ ಮಗನಾಗಿರುವ ಸಲ್ಮಾನ್, ತನ್ನ ತಾಯಿಯ ಕಡೆಯ ಸಂಸ್ಕೃತಿಯನ್ನು ಎಷ್ಟು ಗೌರವಿಸುತ್ತಾರೆ ಎಂಬುದಕ್ಕೆ ಈ ಹೇಳಿಕೆಯೇ ಸಾಕ್ಷಿ.
ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಎಂದರೆ ಭಾವೈಕ್ಯತೆಯ ಸಂಕೇತ. ಕೇವಲ ಮಾತುಗಳಲ್ಲಷ್ಟೇ ಅಲ್ಲ, ಸಲ್ಮಾನ್ ಖಾನ್ ನಡೆ ನುಡಿಯಲ್ಲೂ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಅಪ್ಪಿಕೊಂಡಿದ್ದಾರೆ. ಪ್ರತಿ ವರ್ಷ ಸಲ್ಮಾನ್ ಖಾನ್ ಅವರ ಮನೆಯಲ್ಲಿ ಅತ್ಯಂತ ವೈಭವದಿಂದ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಇಡೀ ಖಾನ್ ಕುಟುಂಬ ಒಟ್ಟಾಗಿ ಗಣಪತಿಯನ್ನು ಪ್ರತಿಷ್ಠಾಪಿಸಿ, ಆರತಿ ಬೆಳಗುವ ದೃಶ್ಯಗಳನ್ನು ನಾವು ನೋಡುತ್ತಲೇ ಇರುತ್ತೇವೆ. ತಾಯಿಯ ಮೇಲಿನ ಅಪಾರ ಭಕ್ತಿ ಮತ್ತು ಹಿಂದೂ ಸಂಸ್ಕಾರಗಳ ಮೇಲಿನ ಗೌರವದಿಂದಾಗಿ ಸಲ್ಮಾನ್ ಇಂದಿಗೂ ತಮ್ಮ ಮನೆಯಲ್ಲಿ ಎಲ್ಲಾ ಧರ್ಮದ ಹಬ್ಬಗಳನ್ನು ಸರಿಸಮಾನವಾಗಿ ಆಚರಿಸಿಕೊಂಡು ಬಂದಿದ್ದಾರೆ.
ಖಾನ್ ಸಾಹೇಬರ ಫಿಟ್ನೆಸ್ ಹಾಗೂ ಆಹಾರದ ಮೇಲಿನ ಗೌರವ ಇಡೀ ಬಾಲಿವುಡ್ಗೆ ಗೊತ್ತು. 60ರ ಹತ್ತಿರ ಬಂದರೂ ಸಲ್ಮಾನ್ ಖಾನ್ ಅವರ ಖಡಕ್ ಬಾಡಿಗೆ ಪ್ರಮುಖ ಕಾರಣ ಅವರ ಕಟ್ಟುನಿಟ್ಟಾದ ಡಯಟ್. ಆದರೆ ಅವರು ಎಂದಿಗೂ ಭಾರತೀಯ ಸಂಸ್ಕೃತಿಗೆ ಧಕ್ಕೆ ತರುವಂತಹ ಆಹಾರ ಪದ್ಧತಿಯನ್ನು ಬೆಂಬಲಿಸಿಲ್ಲ. ವೈರಲ್ ಫೋಟೋದಲ್ಲಿ ಉಲ್ಲೇಖಿಸಿರುವಂತೆ, ಗೋಮಾಂಸದಿಂದ ಸಂಪೂರ್ಣ ದೂರವಿರುವ ಅವರು, ಸನಾತನ ಧರ್ಮದ ನಂಬಿಕೆಯನ್ನು ಪ್ರಾಣಪದವಾಗಿ ಕಾಯ್ದುಕೊಂಡಿದ್ದಾರೆ. ಆಹಾರವನ್ನು ದೇವರೆಂದು ಭಾವಿಸುವ ಸಲ್ಮಾನ್, ಶೂಟಿಂಗ್ ಸೆಟ್ಗಳಲ್ಲೂ ಎಲ್ಲರಿಗೂ ಊಟ ಬಡಿಸಿ ಉಪಚರಿಸುವ ದೊಡ್ಡ ಗುಣ ಹೊಂದಿದ್ದಾರೆ.
ಒಂದೆಡೆ ಪ್ರಾಣಿಗಳನ್ನು ಮತ್ತು ಗೋಮಾತೆಯನ್ನು ಗೌರವಿಸುವ ಸಲ್ಮಾನ್ ಖಾನ್, ಮತ್ತೊಂದೆಡೆ ಇಂದಿಗೂ ಪ್ರಾಣಿ ಹಿಂಸೆಯ ದೊಡ್ಡ ವಿವಾದದಲ್ಲೇ ಸಿಲುಕಿದ್ದಾರೆ. ಅದುವೇ 1998ರ ಕರಾಳ ‘ಕೃಷ್ಣಮೃಗ ಬೇಟೆ’ ಪ್ರಕರಣ. ‘ಹಮ್ ಸಾಥ್ ಸಾಥ್ ಹೈ’ ಚಿತ್ರದ ಶೂಟಿಂಗ್ ವೇಳೆ ಜೋಧ್ಪುರದಲ್ಲಿ ಅಪರೂಪದ ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪ ಸಲ್ಮಾನ್ ಮೇಲಿದೆ. ಬಿಷ್ಣೋಯಿ ಸಮುದಾಯದವರು ಪವಿತ್ರವೆಂದು ಪೂಜಿಸುವ ಕೃಷ್ಣಮೃಗವನ್ನು ಕೊಂದಿದ್ದಕ್ಕಾಗಿ ಸಲ್ಮಾನ್ ಖಾನ್ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗಿ ಬಂತು. ಅಷ್ಟೇ ಅಲ್ಲ, ಈ ವಿವಾದದ ಕಿಡಿ ಇಂದಿಗೂ ಆರಿಲ್ಲ.
ಈ ಕೃಷ್ಣಮೃಗ ಬೇಟೆಯ ವಿವಾದ ಸಲ್ಮಾನ್ ಖಾನ್ ಅವರ ಪ್ರಾಣಕ್ಕೇ ಕಂಟಕವಾಗಿ ಪರಿಣಮಿಸಿದೆ. ಬಿಷ್ಣೋಯಿ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ, ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ನನ್ನು ಕೊಲ್ಲುವುದಾಗಿ ಬಹಿರಂಗವಾಗಿ ಶಪಥ ಮಾಡಿದ್ದಾನೆ. ಸಲ್ಮಾನ್ ಖಾನ್ ಬಿಷ್ಣೋಯಿ ಸಮುದಾಯದ ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬೆದರಿಕೆ ಹಾಕುತ್ತಲೇ ಇದ್ದಾನೆ. ಹೀಗಾಗಿ, ಒಂದು ಕಡೆ ಹಿಂದೂ ತಾಯಿಯ ಮಗನಾಗಿ ಗೋಮಾತೆಯನ್ನು ಪೂಜಿಸುವ ಸಲ್ಮಾನ್, ಮತ್ತೊಂದೆಡೆ ಅದೇ ಹಿಂದೂ ಸಮುದಾಯದ ಉಪಪಂಗಡವಾದ ಬಿಷ್ಣೋಯಿಗಳಿಂದ ಜೀವಬೆದರಿಕೆ ಎದುರಿಸುತ್ತಿರುವುದು ಬಾಲಿವುಡ್ನ ಅತ್ಯಂತ ರೋಚಕ ಮತ್ತು ವಿಪರ್ಯಾಸದ ಸಂಗತಿಯಾಗಿದೆ.





