ಬೆಂಗಳೂರು, ಮೇ 28: ರಾಜಧಾನಿ ಬೆಂಗಳೂರಿನಲ್ಲಿ ಇಂದು (ಗುರುವಾರ) ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಹಬ್ಬದ ಅಂಗವಾಗಿ ನಗರದ ಪ್ರಮುಖ ಮೈದಾನಗಳು ಹಾಗೂ ಮಸೀದಿಗಳಲ್ಲಿ ಬೃಹತ್ ಸಾಮೂಹಿಕ ಪ್ರಾರ್ಥನೆಗಳು ಆಯೋಜನೆಗೊಂಡಿವೆ. ಈ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ನಗರದ ಹಲವಾರು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಬೆಂಗಳೂರು ಸಂಚಾರ ಪೊಲೀಸರು ಸವಾರರು ಸಾಧ್ಯವಾದಷ್ಟು ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಕೆಜಿ ಹಳ್ಳಿ, ಪುಲಿಕೇಶಿನಗರ, ಚಾಮರಾಜಪೇಟೆ, ಆರ್‌ಟಿ ನಗರ, ಮೈಕೋ ಲೇಔಟ್ ಹಾಗೂ ಕೆಎಸ್ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿರುವುದರಿಂದ ನಗರದಲ್ಲಿ ಭಾರಿ ಟ್ರಾಫಿಕ್ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.
ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಸಂಚಾರ ಬಂದ್
ಬೆಳಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್‌ವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ಪಾರ್ಕಿಂಗ್ ನಿಷೇಧಿಸಲಾಗಿದೆ. ಶಿವಾಜಿನಗರಕ್ಕೆ ತೆರಳುವವರು ಹೆಣ್ಣೂರು ಜಂಕ್ಷನ್, ಎಚ್‌ಬಿಆರ್ 80 ಅಡಿ ರಸ್ತೆ ಹಾಗೂ ಲಿಂಗರಾಜಪುರ ಮೇಲ್ಸೇತುವೆ ಮಾರ್ಗ ಬಳಸಬಹುದು. ಶಿವಾಜಿನಗರದಿಂದ ನಾಗವಾರ ಕಡೆಗೆ ತೆರಳುವವರು ಕೋಲ್ಸ್ ರಸ್ತೆ ಮತ್ತು ವೀಲರ್ಸ್ ರಸ್ತೆ ಮೂಲಕ ಸಂಚರಿಸಬೇಕಾಗಿದೆ.
ಚಾಮರಾಜಪೇಟೆ ಭಾಗದಲ್ಲಿ ಟ್ರಾಫಿಕ್ ವ್ಯತ್ಯಯ
ಬಿ.ಬಿ. ಜಂಕ್ಷನ್ ಹಾಗೂ ಚಾಮರಾಜಪೇಟೆಯ ಬಿಬಿಎಂಪಿ ಆಟದ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿರುವ ಹಿನ್ನೆಲೆ, ಮೈಸೂರು ರಸ್ತೆ ಟೋಲ್‌ಗೇಟ್‌ನಿಂದ ಟೌನ್‌ಹಾಲ್‌ವರೆಗೆ ಎರಡೂ ಬದಿಯ ಸಂಚಾರ ಬಂದ್ ಮಾಡಲಾಗಿದೆ. ಮೈಸೂರು ಕಡೆಯಿಂದ ಬರುವ ವಾಹನಗಳು ವಿಜಯನಗರ ಮಾರ್ಗ ಬಳಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
ಆರ್‌ಟಿ ನಗರದಲ್ಲಿ ವಾಹನ ಸಂಚಾರ ನಿರ್ಬಂಧ
ಆರ್‌ಟಿ ನಗರದ ಎಚ್‌ಎಂಟಿ ಮೈದಾನದ ಮುಂಭಾಗದಲ್ಲಿ ಪ್ರಾರ್ಥನೆ ನಡೆಯಲಿದ್ದು, ಸಿಬಿಐ ರಸ್ತೆ, ಜಯಮಹಲ್ ರಸ್ತೆ, ದಿಣ್ಣೂರು ಮುಖ್ಯ ರಸ್ತೆ ಹಾಗೂ ಹಜ್ ಭವನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ದೇವೇಗೌಡ ರಸ್ತೆ ಹಾಗೂ ವಾಟರ್ ಟ್ಯಾಂಕ್ ಮಾರ್ಗವಾಗಿ ವಾಹನಗಳು ಸಂಚರಿಸಬಹುದು.
ಮೈಕೋ ಲೇಔಟ್‌ನಲ್ಲಿ ಪರ್ಯಾಯ ವ್ಯವಸ್ಥೆ
ಗುರಪ್ಪನಪಾಳ್ಯ ಜಂಕ್ಷನ್‌ನಲ್ಲಿ ಪ್ರಾರ್ಥನೆ ಹಿನ್ನೆಲೆ ಸಾಗರ್ ಆಸ್ಪತ್ರೆ ಜಂಕ್ಷನ್‌ನಿಂದ ಸಾಯಿರಾಮ್ ಜಂಕ್ಷನ್‌ವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಡೇರಿ ಸರ್ಕಲ್ ಕಡೆಯಿಂದ ಬರುವವರು ತಿಲಕ್ ನಗರ, ಈಸ್ಟ್ ಎಂಡ್ ರಸ್ತೆ ಹಾಗೂ ಜಯದೇವ ಜಂಕ್ಷನ್ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
ಕೆಎಸ್ ಲೇಔಟ್ ಪ್ರದೇಶದಲ್ಲೂ ನಿರ್ಬಂಧ
ಹೊರ ವರ್ತುಲ ರಸ್ತೆಯ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ನಡೆಯುತ್ತಿರುವ ಹಿನ್ನೆಲೆ ಸಾರಕ್ಕಿ ಸಿಗ್ನಲ್‌ನಿಂದ ಕೆಎಸ್ ಲೇಔಟ್ ಸಿಗ್ನಲ್‌ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಬನಶಂಕರಿ ಬಸ್ ನಿಲ್ದಾಣ ಹಾಗೂ ಬೇಂದ್ರೆ ಸರ್ಕಲ್ ಮಾರ್ಗವಾಗಿ ವಾಹನಗಳು ಸಂಚರಿಸಬಹುದು.
ನಗರದ ವಿವಿಧ ಭಾಗಗಳಲ್ಲಿ ಟ್ರಾಫಿಕ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅನಗತ್ಯವಾಗಿ ಹೊರಡುವುದನ್ನು ತಪ್ಪಿಸಿ, ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.





