ಬೆಂಗಳೂರು: ಕರ್ನಾಟಕದ ರಾಜಕೀಯ ವಲಯದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮುಂದಿನ ನಡೆಯ ಕುರಿತು ತೀವ್ರ ಕುತೂಹಲ ಮೂಡಿದೆ. ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಲಿದ್ದು, ಬಗ್ಗೆ ಕಾಂಗ್ರೆಸ್ (Congress) ಪಕ್ಷದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದರೆ, ಹಿರಿಯ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಇಷ್ಟು ಸುಲಭವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆಯೇ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈಕಮಾಂಡ್ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗಳು ಆರಂಭವಾಗಿವೆ. ಸಿಎಂ ಸ್ಥಾನ ಬದಲಾವಣೆ ಕುರಿತ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಈಗ ಅಂತಿಮ ತೀರ್ಮಾನದ ಹಂತಕ್ಕೆ ತಲುಪಿದೆಯೇ ಎಂಬ ಪ್ರಶ್ನೆ ಮೂಡಿದೆ. ಆದರೆ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ಸಿದ್ದರಾಮಯ್ಯ ಸುಲಭವಾಗಿ ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ನಾಯಕರಲ್ಲ ಎಂಬ ಅಭಿಪ್ರಾಯವೂ ಕಾಂಗ್ರೆಸ್ ಒಳಗೇ ಕೇಳಿಬರುತ್ತಿದೆ.
ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರು ಹಾಗೂ ನಿಕಟ ನಾಯಕರೊಂದಿಗೆ ಇಂದು ಬೆಳಗಿನ ಉಪಹಾರ ಸಭೆ ನಡೆಸಲಿದ್ದು, ಇದೇ ಸಭೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಸಚಿವರಾದ ಜಿ. ಪರಮೇಶ್ವರ್, ಎಂಸಿ ಸುಧಾಕರ್ ಸೇರಿದಂತೆ ಹಲವು ಆಪ್ತರು ಸಿಎಂ ಭೇಟಿಯಾಗಲಿದ್ದಾರೆ.
ಈ ಹಿಂದೆಯೂ ಹಲವು ರಾಜಕೀಯ ಸಂಕಷ್ಟಗಳನ್ನು ಸಿದ್ದರಾಮಯ್ಯ ಸಮರ್ಥವಾಗಿ ಎದುರಿಸಿದ್ದರು. ಅವರು, ರಾಜ್ಯದಲ್ಲಿ ತಮ್ಮ ನಾಯಕತ್ವವನ್ನು ಬಲಪಡಿಸುವಲ್ಲಿ ಯಶಸ್ವಿಯಾಗಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ್ ಹಲವು ಬಾರಿ ದೆಹಲಿಗೆ ಭೇಟಿ ನೀಡಿ ನಾಯಕತ್ವ ಬದಲಾವಣೆ ಕುರಿತು ಮನವಿ ಸಲ್ಲಿಸಿದ್ದರೂ, ಅಂತಿಮ ತೀರ್ಮಾನ ಮಾತ್ರ ಆಗಿರಲಿಲ್ಲ ಎನ್ನಲಾಗಿದೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದ ಗೆಲುವು ಹಾಗೂ ಇತರೆ ರಾಜ್ಯಗಳ ಚುನಾವಣಾ ಫಲಿತಾಂಶಗಳ ನಡುವೆಯೂ ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಗೊಂದಲ ಮುಂದುವರಿದಿತ್ತು. ಸಿಎಂ ಮತ್ತು ಡಿಸಿಎಂ ನಡುವಿನ ಆಂತರಿಕ ಪೈಪೋಟಿ ಹೈಕಮಾಂಡ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿತ್ತು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಇದೀಗ ದೆಹಲಿಯಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಮೌನ ವಹಿಸಿದ್ದಾರೆ. ಯಾವುದೇ ರೀತಿಯ ಸಾರ್ವಜನಿಕ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗುತ್ತಿದ್ದು, ಇದರ ಹಿಂದೆ ದೊಡ್ಡ ರಾಜಕೀಯ ಲೆಕ್ಕಾಚಾರ ಇದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.
ಇಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡುವ ಸಾಧ್ಯತೆಯಿದೆ. ಈ ವೇಳೆ ಅವರು ತಮ್ಮ ಮುಂದಿನ ನಿರ್ಧಾರವನ್ನು ಸ್ಪಷ್ಟಪಡಿಸಬಹುದೆಂಬ ನಿರೀಕ್ಷೆ ರಾಜಕೀಯ ವಲಯದಲ್ಲಿ ಮೂಡಿದೆ.
ಇನ್ನೊಂದೆಡೆ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಗೂ ಅಪಾರ ಮಹತ್ವ ಸಿಕ್ಕಿದೆ. ಇದು ಸಿದ್ದರಾಮಯ್ಯ ನೇತೃತ್ವದ ಕೊನೆಯ ಸಚಿವ ಸಂಪುಟ ಸಭೆಯಾಗಬಹುದೆಂಬ ಮಾತುಗಳು ಕೇಳಿಬರುತ್ತಿವೆ.





